ಸನ್ಮಾರ್ಗ ವಾರ್ತೆ
ದೇಶದ ವಿವಿಧೆಡೆ ವಿದ್ಯಾಭ್ಯಾಸ ನಡೆಸುತ್ತಿರುವ ಕಾಶ್ಮೀರದ ವಿದ್ಯಾರ್ಥಿಗಳು ದಾಳಿಯ ಭಯ ಮತ್ತು ದಬ್ಬಾಳಿಕೆಯ ಭೀತಿಯಿಂದ ಕಾಶ್ಮೀರಕ್ಕೆ ಮರಳುತ್ತಿದ್ದಾರೆ. ಕಾಶ್ಮೀರಿ ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಬರುತ್ತಿದ್ದು ಮುಖ್ಯವಾಗಿ ಕೋಮುವಾದಿ ಪ್ರೊಪಗೊಂಡ ಐಟಿ ಸೆಲ್ ಗಳು ಮುಸ್ಲಿಂ ವಿರೋಧಿ ಪ್ರಚಾರವನ್ನು ನಡೆಸುತ್ತಿವೆ ಮತ್ತು ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ದ್ವೇಷ ಅಭಿಯಾನವನ್ನೇ ಕೈಗೊಂಡಿವೆ.
ಈ ಬಗ್ಗೆ ಆಲ್ ಪಾರ್ಟಿ ಹುರಿಯತ್ ಕಾನ್ಫರೆನ್ಸ್ ನ ಮುಖ್ಯಸ್ಥ ಮೀರ್ ವೈಝ್ ಉಮರ್ ಫಾರೂಕ್ ಸೋಶಿಯಲ್ ಮೀಡಿಯಾದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರಿ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ಹಲ್ಲೆಗೆ ಒಳಗಾಗಿದ್ದಾರೆ. ನಿಂದನೆ ಮತ್ತು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಅನೇಕ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಂದ ಹೊರಬರಲು ಹೆದರುತ್ತಿದ್ದಾರೆ, ಅವರು ಲಾಕ್ ಮಾಡಿ ಕೋಣೆಯ ಒಳಗೆ ಕುಳಿತಿದ್ದಾರೆ ಎಂದವರು ಹೇಳಿದ್ದಾರೆ.
ಉತ್ತರಖಂಡದಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಬೆದರಿಕೆಯನ್ನು ಹಾಕಲಾಗಿದೆ ರಾಜ್ಯ ತೊರೆಯಲು ಅಂತಿಮ ಗಡುವನ್ನು ವಿಧಿಸಲಾಗಿದೆ. ಹಿಂದೂ ರಕ್ಷಾದಲ್ ನಾಯಕ ಲಲಿತ್ ಶರ್ಮ ಎಂಬವರು ಉತ್ತರಾಖಂಡದ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿದೆ. ನೀವು ಇಲ್ಲಿಂದ ಜಾಗ ಖಾಲಿ ಮಾಡದಿದ್ದರೆ ನಿಮ್ಮನ್ನು ನಾವು ನೋಡಿಕೊಳ್ಳುತ್ತೇವೆ ಎಂದವರು ಬೆದರಿಕೆ ಹಾಕುತ್ತಿರುವುದು ವಿಡಿಯೋದಲ್ಲಿ ಗೊತ್ತಾಗಿದೆ.












