ಸನ್ಮಾರ್ಗ ವಾರ್ತೆ
ಹೈದರಾಬಾದ್: ಬಿಜೆಪಿ ಕುದುರೆ ವ್ಯಾಪಾರಕ್ಕೆ ಯತ್ನಿಸಿದ ಆರೋಪಕ್ಕೆ ಸಾಕ್ಷ್ಯಗಳಿವೆ ಎಂದ ಟಿಆರ್ಎಸ್ ನಾಯಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರ ಶೇಖರ ರಾವ್ ಪತ್ರಿಕಾಗೋಷ್ಠಿ ನಡೆಸಿ ವೀಡಿಯೊ ಪ್ರದರ್ಶಿಸಿದ್ದಾರೆ. ತಲಾ ನೂರು ಕೋಟಿ ರೂಪಾಯಿಗೆ ಟಿಆರ್ಎಸ್ ಶಾಸಕರನ್ನು ಖರೀದಿಸಲು ಯತ್ನಿಸಿದ್ದಾರೆ ಎಂದು ಕೆಸಿಆರ್ ಆರೋಪಿಸಿದ್ದು ಆಪರೇಷನ್ ಕಮಲಕ್ಕೆ ಆಮಿಷವೊಡ್ಡಲಾಗಿದ್ದ ನಾಲ್ವರು ಶಾಸಕರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದರು.
ಶಾಸಕರ ಖರೀದಿಗೆ ಯತ್ನಿಸಿದ್ದನ್ನು ಚಿತ್ರೀಕರಿಸಿಕೊಂಡಿರುವ ಒಂದು ಗಂಟೆ ಅವಧಿಯ ಗುಪ್ತ ಕ್ಯಾಮರಾ ದೃಶ್ಯಗಳು ತನ್ನ ಬಳಿ ಇದೆ ಎಂದು ಕೆಸಿಆರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮತ್ತು ಐದು ನಿಮಿಷದ ವೀಡಿಯೊವನ್ನು ಅವರು ಪ್ರದರ್ಶಿಸಿದ್ದಾರೆ.
ಮೊನುಗೊಡು ಉಪಚುನಾವಣೆಯ ಮುಂಚಿತವಾಗಿ ಶಾಸಕರಿಗೆ ಹಣದ ಆಫರ್ ನೀಡಲಾಗಿತ್ತು. ಇದು ತೆಲಂಗಾಣದಲ್ಲಿ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು. ಹಣ ಕೊಟ್ಟು ಖರೀದಿಸಲು ಬಂದವರು 20 ಬಾರಿ ಅಮಿತ್ ಶಾರ ಹೆಸರನ್ನು ಮತ್ತು ಮೂರು ಬಾರಿ ಪ್ರಧಾನ ಮಂತ್ರಿಯ ನರೇಂದ್ರ ಮೋದಿಯವರ ಹೆಸರನ್ನು ಹೇಳಿದ್ದಾರೆ. ಮಾತ್ರವಲ್ಲ ಕರ್ನಾಟಕದ ಸರಕಾರ ಬದಲಾವಣೆಯೂ ಸಮಾಲೋಚನೆಯ ವೇಳೆ ಉಲ್ಲೇಖಗೊಂಡಿದೆ ಎಂದು ಕೆಸಿಆರ್ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಈವರೆಗೆ ಮೂರು ಮಂದಿಯನ್ನು ಬಂಧಿಸಲಾಗಿದೆ. ದೇಶವನ್ನು ರಕ್ಷಿಸಬೇಕಾಗಿದೆ. ಕಾನೂನು ವ್ಯವಸ್ಥೆಯೊಂದಿಗೆ ಮನವಿ ಮಾಡುತ್ತಿರುವೆ ಎಂದು ಮನವಿ ಮಾಡಿ ವೀಡಿಯೊವನ್ನು ಸುಪ್ರೀಂ ಕೋರ್ಟು ಮತ್ತು ಹೈಕೋರ್ಟಿನ ಉನ್ನತ ಜಡ್ಜ್ಗಳಿಗೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ತೆಲಂಗಾಣ, ಆಂಧ್ರಪ್ರದೇಶ, ದಿಲ್ಲಿ, ರಾಜಸ್ತಾನದ ಸರಕಾರಗಳನ್ನು ಬುಡಮೇಲುಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕೆ.ಸಿ.ಆರ್ ಆರೋಪಿಸಿದ್ದಾರೆ. ಆದರೆ ಬಿಜೆಪಿ ಆರೋಪವನ್ನು ತಿರಸ್ಕರಿಸಿದೆ. ಬಾಡಿಗೆ ನಟರನ್ನು ಬಳಸಿ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.












