ಸನ್ಮಾರ್ಗ ವಾರ್ತೆ-
ದುಬೈ: ಅ. 1- ಅಬುಧಾಬಿಗೆ ತೆರಳಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ 19 ವರ್ಷದ ಸಿಯಾನಿ ಬೆನ್ನಿ, ಭಯೋತ್ಪಾದಕ ಗುಂಪಿನಲ್ಲಿ ಸೇರಲು ತನ್ನನ್ನು ‘ಅಪಹರಿಸಿ ಬಲವಂತಪಡಿಸಲಾಗಿದೆ’ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ ಮತ್ತು ಪ್ರೀತಿಗಾಗಿ ತನ್ನ ಸ್ವಂತ ಇಚ್ಛೆಯಿಂದ ಭಾರತವನ್ನು ತೊರೆದಿದ್ದೇನೆ ಎಂದು ಒತ್ತಿಹೇಳಿದ್ದಾರೆ. ತಮ್ಮ ಮಗಳನ್ನು ಅಪಹರಿಸಲಾಗಿದೆ ಎಂದು ಆಕೆಯ ಪೋಷಕರು ದೆಹಲಿಯಲ್ಲಿ ಪೊಲೀಸ್ ಪೊಲೀಸರಿಗೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಸಿಯಾನಿ ಬೆನ್ನಿ ಈ ಹೇಳಿಕೆ ನೀಡಿದ್ದಾರೆ.
“ಇದು ನಿಜವಲ್ಲ. ನನ್ನ ಸ್ವಂತ ಇಚ್ಛೆಯಿಂದ ಅಬುಧಾಬಿಗೆ ಬಂದಿದ್ದೇನೆ. ಇದಕ್ಕಾಗಿ ಯಾರೂ ನನ್ನನ್ನು ಒತ್ತಾಯಿಸಲಿಲ್ಲ. ನಾನು ಭಾರತದ ವಯಸ್ಕ ಪ್ರಜೆ ಮತ್ತು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕು ನನಗಿದೆ. ನಾನು ಇಸ್ಲಾಂ ಧರ್ಮವನ್ನು ನನ್ನದೇ ಆದ ತೀರ್ಮಾನದ ಮೇಲೆ ಸ್ವೀಕರಿಸಿದ್ದೇನೆ. ಇನ್ನು ಆಯಿಷಾ ಎಂಬ ಹೆಸರಿನಿಂದ ಗುರುತಿಸಿಕೊಳ್ಳಲಿದ್ದೇನೆ ಎಂದು ಸಿಯಾನಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದಿಲ್ಲಿಯ ಜೀಸಸ್ ಅಂಡ್ ಮೇರಿ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದ ಸಿಯಾನಿ ಸೆಪ್ಟೆಂಬರ್ 18 ರಂದು ಬೆಳಿಗ್ಗೆ 11 ಗಂಟೆಯವರೆಗೆ ತರಗತಿಗಳಿಗೆ ಹಾಜರಾಗಿದ್ದರು. ಆದರೆ, ಅದೇ ಮಧ್ಯಾಹ್ನ ಅವರು ಒಂಬತ್ತು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತರಾದ ಭಾರತೀಯ ವ್ಯಕ್ತಿಯನ್ನು ಮದುವೆಯಾಗಲು ಅಬುಧಾಬಿಗೆ ಮಧ್ಯಾಹ್ನ 2.45 ರ ಹೊತ್ತಿಗೆ ಗೋ ಏರ್ ವಿಮಾನವನ್ನು ಹತ್ತಿದ್ದರು. ಆಕೆಯ ಪೋಷಕರು, ಕೇರಳದ ಕೋಝಿಕ್ಕೋಡ್ ಮೂಲದವರಾಗಿದ್ದು, ತಮ್ಮ ಮಗಳನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಗೆ ಸೇರ್ಪಡೆಗೊಳಿಸುವ ಅಥವಾ ಗುಲಾಮರನ್ನಾಗಿ ಬಳಸಿಕೊಳ್ಳುವ ಮುಂತಾದ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಆದರೆ, ಇದೀಗ ಆಕೆ, ತಾನು ಸೆಪ್ಟೆಂಬರ್ 24 ರಂದು ಅಬುಧಾಬಿ ನ್ಯಾಯಾಲಯದಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ನಾನು ಈ ಧರ್ಮವನ್ನು ಒಪ್ಪಿಕೊಂಡಿದ್ದೇನೆ ಮತ್ತು ನಾನು ಅದೇ ನಂಬಿಕೆಯೊಂದಿಗೆ ಬದುಕುತ್ತೇನೆ ಎಂದು ಅವರು ಭಾರತೀಯ ಗೃಹ ಸಚಿವರು, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಮತ್ತು ಕೇರಳ ಮತ್ತು ದೆಹಲಿ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.












