ಭ್ರಷ್ಟ ರಾಜಕಾರಣಿಗಳನ್ನು ಕೊಲ್ಲಿರಿ: ಭಯೋತ್ಪಾದಕರಿಗೆ ಜಮ್ಮುಕಾಶ್ಮೀರ ರಾಜ್ಯಪಾಲರ ವಿವಾದಾತ್ಮಕ ಕರೆ

0
745

ಶ್ರೀನಗರ,ಜು. 22: ಜನಸಾಮಾನ್ಯರನ್ನು, ಭದ್ರತಾ ಅಧಿಕಾರಿಗಳನ್ನು ಕೊಲ್ಲುವ ಬದಲು ಭ್ರಷ್ಟಾಚಾರಿಗಳಾದ ರಾಜಕಾರಣಿಗಳನ್ನು ಕೊಂದು ಹಾಕಿ ಎಂದು ಜಮ್ಮುಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಅವರ ಭಾಷಣದಿಂದ ವಿವಾದ ಸೃಷ್ಟಿಯಾಗಿದೆ.

“ಇವರು ಬಂದೂಕು ಎತ್ತಿ ಸ್ವಂತ ಜನರು, ಭದ್ರತಾ ಅಧಿಕಾರಿಗಳು, ವಿಶೇಷ ಪೊಲೀಸಧಿಕಾರಿಗಳನ್ನು ಕೊಲ್ಲುತ್ತಿರುವುದು ಯಾಕೆ? ಕಾಶ್ಮೀರದ ಸಂಪತ್ತನ್ನು ಕೊಳ್ಳೆ ಹೊಡೆದಿರುವವರನ್ನು ಕೊಲ್ಲಿರಿ. ನೀವು ಅವರಲ್ಲಿ ಯಾರನ್ನಾದರೂ ಕೊಂದಿದ್ದೀರಾ?” ಎಂದು ರಾಜ್ಯಪಾಲರು ಪ್ರಶ್ನಿಸಿದರು. ಕಾಶ್ಮೀರದಲ್ಲಿ ಆಳ್ವಿಕೆ ಮಾಡಿದ ರಾಜಕಾರಣಿಗಳ ಕುಟುಂಬಗಳು ಜನಸಾಮಾನ್ಯರ ಹಣವನ್ನು ಕೊಳ್ಳೆಹೊಡೆದು ಆಸ್ತಿ ಗುಡ್ಡೆಹಾಕಿದ್ದಾರೆ. ಅವರಿಗೆ ಅಪರಿಮಿತ ಆಸ್ತಿ ಇದೆ. ಅವರಿಗೆ ಶ್ರೀನಗರದಲ್ಲಿ ಒಂದು ಮನೆ, ಇನ್ನೊಂದು ದಿಲ್ಲಿಯಲ್ಲಿ, ಮತ್ತೊಂದು ಲಂಡನ್‍ನಲ್ಲಿದೆ. ಇದಲ್ಲದೆ ಬೇರೆ ಕೆಲವು ಸ್ಥಳಗಳಲ್ಲಿಯೂ ಇವರು ವಸತಿಯನ್ನು ಹೊಂದಿದ್ದಾರೆ. ದೊಡ್ಡ ಹೊಟೇಲ್‍ಗಳಲ್ಲಿ ಶೇರೂ ಇಟ್ಟುಕೊಂಡಿದ್ದಾರೆ. ಭಾರತ ಸರಕಾರ ಬಂದೂಕಿಗೆ ಶರಣಾಗುವುದಿಲ್ಲ ಎಂದೂ ಮಾಲಿಕ್ ಹೇಳಿದರು.

ಕಾರ್ಗಿಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ಯಪಾಲರು ಮಾತಾಡುತ್ತಿದ್ದರು.