ಕೋಮುವಾದಿ ದಾಳಿಗಳು ದೇಶಕ್ಕೆ ಅಪಮಾನಕರ: ಅಲ್ಪಸಂಖ್ಯಾಕ ಮತಗಳನ್ನು ಹೆಚ್ಚು ಪಡೆಯುವ ಪಕ್ಷಗಳು ಗಮನಹರಿಸಬೇಕು -ಕೆಎನ್‍ಎಂ

0
584

ಕೋಝಿಕ್ಕೋಡ್, ಜು. 2: ಹೆಚ್ಚಳವಾಗುತ್ತಿರುವ ಕೋಮುವಾದಿ ದಾಳಿ ಮತ್ತು ಕೊಲೆಗಳು ದೇಶದ ಗರಿಮೆಗೆ ಕಳಂಕವಾಗಿದೆ ಎಂದು ಕೋಝಿಕ್ಕೋಡಿನಲ್ಲಿ ನಡೆದ ಕೆಎನ್‍ಎಂ ರಾಜ್ಯ ನಾಯಕರ ಸಂಗಮ ಅಭಿಪ್ರಾಯ ವ್ಯಕ್ತಪಡಿಸಿದೆ. ಝಾರ್ಕಂಡ್, ಹರಿಯಾಣ, ದಿಲ್ಲಿ ಮೊದಲಾದ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಜನರ ಗುಂಪು ಹತ್ಯೆಗಳು ಅಲ್ಪಸಂಖ್ಯಾತ ವಿಭಾಗದಲ್ಲಿ ಆತಂಕ ಸೃಷ್ಟಿಸಿದೆ. ಜನರ ಗುಂಪಿನ ಕ್ರೂರ ದಾಳಿಗೆ ತುತ್ತಾಗಿ ಜೀವ ಕಳಕೊಂಡವರನ್ನೇ ಆರೋಪಿಯನ್ನಾಗಿಸುತ್ತಿರುವುದು ತೀರ ಅಪಹಾಸ್ಯಕರವಾಗಿದೆ ಎಂದು ಕೆಎನ್‍ಎಂ ಹೇಳಿದೆ.

ಗೋರಕ್ಷೆಯ ಹೆಸರಿನಲ್ಲಿ, ಧಾರ್ಮಿಕ ಚಿಹ್ನೆಗಳ ನೆಪದಲ್ಲಿ ದಲಿತ-ಮುಸ್ಲಿಂ ಅಲ್ಪಸಂಖ್ಯಾತರಲ್ಲಿ ಭಯಸೃಷ್ಟಿಸಿ ಮೂಲೆಗೊತ್ತುವ ಗೂಢಾಲೋಚನೆಯ ವಿರುದ್ಧ ಪ್ರಜಾಪ್ರಭುತ್ವ-ಜಾತ್ಯತೀತ ಶಕ್ತಿಗಳು ಬಲವಾಗಿ ವಿರೋಧಿಸಬೇಕಿದೆ. ದೇಶದಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಹೆಚ್ಚು ಪಡೆಯುವ ಜಾತ್ಯತೀತ ಪಕ್ಷಗಳು ಅಲ್ಪಸಂಖ್ಯಾತರ ಯಥಾರ್ಥವಾದ ಸಮಸ್ಯೆಯನ್ನು ಪರಿಗಣಿಸಿ ಪರಿಹರಿಸುವ ಧೈರ್ಯ ತೋರಿಸಬೇಕು. ದೇಶದ ಎಲ್ಲ ವಿಭಾಗದ ಜನರಿಗೂ, ಸುರಕ್ಷೆ, ನಿರ್ಭೀತ ಸ್ಥಿತಿ ಉಂಟು ಮಾಡಲು ಸಾಧ್ಯವಾದಾಗ ಸರಕಾರಗಳು ಅಭಿನಂದನೆಗೆ ಅರ್ಹವಾಗುತ್ತವೆ ಎಂದಿದೆ.

ಸಂಗಮದಲ್ಲಿ ಕೆಎನ್‍ಎಂ ರಾಜ್ಯಾಧ್ಯಕ್ಷ ಟಿ.ಪಿ. ಅಬ್ದುಲ್ಲಕೋಯ ಮದನಿ, ಪ್ರಧಾನ ಕಾರ್ಯದರ್ಶಿ ಪಿ.ಪಿ. ಉಣ್ಣೀನ್‍ಕುಟ್ಟಿ ಮೌಲವಿ, ಡಾ. ಹುಸೈನ್ ಮಡವೂರು ಮುಂತಾದವರು ಭಾಗವಹಿಸಿದ್ದರು.