ಸಿದ್ಧಾಪುರ ಉಸ್ಮಾನ್ ಹಾಜಿಯವರ ನಿಧನ ಕೊಡಗು ಜನತೆಗೆ ತುಂಬಲಾರದ ನಷ್ಟ: ಜಮಾಅತೆ ಇಸ್ಲಾಮೀ ಹಿಂದ್ ಸಂತಾಪ

0
517

ಸನ್ಮಾರ್ಗ ವಾರ್ತೆ

ಕೊಡಗು: ಸುಮಾರು 36 ವರ್ಷಗಳ ಕಾಲ ಸಿದ್ಧಾಪುರ ಮುಸ್ಲಿಮ್ ಜಮಾಅತಿನ ಅಧ್ಯಕ್ಷರಾ,ಗಿ ಕೊಡಗು ಜಿಲ್ಲಾ ಮದ್ರಸ ಆಡಳಿತ ಮಂಡಳಿಯ ಅಧ್ಯಕ್ಷರೂ ಹಾಗೂ ಇನ್ನಿತರ ಹಲವಾರು ಹುದ್ದೆಗಳನ್ನು ಅಲಂಕರಿಸಿರುವ ಕಳತ್ತಿ ನಗತ್ ಉಸ್ಮಾನ್ ಹಾಜಿಯವರು ಸೆ. 28 ರಂದು ನಿಧನರಾದರು. ಅವರ ಅಗಲಿಕೆಯು ಕೊಡಗು ಜಿಲ್ಲೆಗೆ ವಿಶೇಷವಾಗಿ ಸಿದ್ಧಾಪುರ ಜನತೆಗೆ ತುಂಬಲಾರದ ನಷ್ಟವಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಕೊಡಗು ಜಿಲ್ಲೆ-ಮಂಗಳೂರು ವಲಯ ಸಂಚಾಲಕರಾದ ಅಬ್ದುಸ್ಸಲಾಮ್.ಯು ಶೋಕ ವ್ಯಕ್ತಪಡಿಸಿದ್ದಾರೆ.

ಸಿದ್ಧಾಪುರದ ರಾಜಕೀಯ ಸಾಮಾಜಿಕ ರಂಗಗಳಲ್ಲಿ ಸಕ್ರಿಯರಾಗಿದ್ದ ದಿವಂಗತರು, ವಿವಿಧ ಧಾರ್ಮಿಕ ವಿಭಾಗಗಳ ಮಧ್ಯೆ ಸೌಹಾರ್ದತೆಯ ಕೊಂಡಿಯಾಗಿದ್ದರು. ಬಡವರ ಬಂಧು ಎಂಬ ನೆಲೆಯಲ್ಲಿ ಗುರುತಿಸಲ್ಪಟ್ಟಿದ್ದ ಅವರು ಜನಪರ ಕೆಲಸಗಳಲ್ಲಿ ತುಂಬು ಕಾಳಜಿ ವಹಿಸುತ್ತಿದ್ದರು.

ಕಳೆದೆರೆಡು ವರ್ಷಗಳ ಹಿಂದೆ ಸಿದ್ಧಾಪುರ ಪರಿಸರದಲ್ಲಿ ಸಂಭವಿಸಿದ ನೆರೆಹಾವಳಿಯಿಂದ ಸಂತ್ರಸ್ತರಾದವರಿಗೆ ಜಮಾಅತೆ ಇಸ್ಲಾಮೀ ಹಿಂದ್‌ನ ವತಿಯಿಂದ HRS ಮುಖಾಂತರ ನಡೆಸಲಾದ ಸಮಾಜ ಸೇವಾ ಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿರುವುದರೊಂದಿಗೆ ಸಂಸ್ಥೆಯ ಹಲವಾರು ಕಾರ್ಯಕ್ರಮಗಳಲ್ಲಿ ತನ್ನ ಮಹನೀಯ ಸಾನ್ನಿಧ್ಯವನ್ನು ವಹಿಸಿಕೊಂಡಿದ್ದರು. ಎಂದು ಅವರು ದಿವಂಗತರ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ನೆನಪಿಸಿಕೊಂಡರು.

ಜ.ಇ ಹಿಂದ್ ಕೊಡಗು ಜಿಲ್ಲಾ ಸಮಿತಿ ಸಂಚಾಲಕರಾದ ಅಬ್ದುಲ್ ಗಫೂರ್, ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪಿ.ಕೆ, ಜಿಲ್ಲಾ ಸಮಿತಿ ಸದಸ್ಯರು, ಸಿದ್ಧಾಪುರ ಸ್ಥಾನೀಯ ಅಧ್ಯಕ್ಷರಾದ ಉಮರ್ ಹಾಜಿ, ಸಿದ್ಧಾಪುರ ಕೊಡಗು ರಿಲೀಫ್ ಸೆಲ್ ಹೊಣೆಗಾರರಾದ ಅಶ್ರಫ್ ಎಂ. ಕೆ. ಹಾಗೂ ಟಿ.ಎ. ಬಶೀರ್, ವೆಲ್ಫೇರ್ ಪಾರ್ಟಿ ಜಿಲ್ಲಾಧ್ಯಕ್ಷರಾದ ಕೆ.ಟಿ. ಬಶೀರ್ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರು ಪತ್ನಿ, ಏಳು ಜನ ಪುತ್ರರು ಹಾಗೂ ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.