ಲಕ್ಷಾಂತರ ಮಂದಿಯ ಆತಂಕವನ್ನು ಧ್ವನಿಸಿದ ಆ ಎರಡು ಕರೆಗಳು

0
1202

ಏ ಕೆ ಕುಕ್ಕಿಲ

ಇತ್ತೀಚೆಗೆ ನನಗೆ ಎರಡು ಕರೆಗಳು ಬಂದಿದ್ದುವು. ಎರಡೂ ಕರೆಗಳಲ್ಲಿದ್ದುದು ದಟ್ಟ ಆತಂಕ. ಮುಂದೇನು ಅನ್ನುವ ಭಯ. ಪರಿಸ್ಥಿತಿ ಎಲ್ಲಿಗೆ ತಲುಪಲಿದೆ ಅನ್ನುವ ಕಸಿವಿಸಿ. ಈ ಇಬ್ಬರಲ್ಲಿ ಒಬ್ಬ ಪತ್ರಕರ್ತ ಗೆಳೆಯನಾದರೆ, ಇನ್ನೋರ್ವ ಜನಸಾಮಾನ್ಯ.

ಪತ್ರಕರ್ತ ಗೆಳೆಯ ತನ್ನ ಉದ್ಯೋಗವನ್ನು ಕಳಕೊಂಡಿದ್ದಾನೆ. ಕಳೆದ ಎರಡು ತಿಂಗಳಿನಿಂದ ಬೇರೆ ಕೆಲಸ ದೊರೆತಿಲ್ಲ. ಉತ್ತಮ ವೇತನದ ಕೆಲಸ ಕಳಕೊಂಡು ಅನ್ಯ ದಾರಿ ಕಾಣದೇ ಚಿಂತೆಯಲ್ಲಿದ್ದಾನೆ. ಬದುಕುವುದಕ್ಕಾಗಿ ಕೆಲಸ ಸಿಕ್ಕರೆ ಸಾಕು ಅನ್ನುವ ಹತಾಶ ಸ್ಥಿತಿಗೆ ಪರಿಸ್ಥಿತಿ ಆತನನ್ನು ತಳ್ಳಿಬಿಟ್ಟಿದೆ. ಇನ್ನೋರ್ವನ ಆತಂಕ ಬೇರೆ ಬಗೆಯದು. ಬ್ಯಾಂಕುಗಳ ವಿಲೀನದ ಬಳಿಕ ಹುಟ್ಟಿ ಕೊಂಡ ಆತಂಕ ಇದು. ಬ್ಯಾಂಕಲ್ಲಿ ಇಟ್ಟಿರುವ ಸಣ್ಣ ಪ್ರಮಾಣದ ಠೇವಣಿಯನ್ನು ಸರಕಾರ ಕಸಿದುಕೊಳ್ಳಬಹುದೇ ಅನ್ನುವ ಭಯ ಆತನನ್ನು ಆವರಿಸಿದೆ. ಅಷ್ಟಕ್ಕೂ, ಆರ್ಥಿಕ ಸ್ಥಿತಿಯ ಕುಸಿತ, ಉದ್ಯೋಗ ನಷ್ಟ ಇತ್ಯಾದಿ ಸುದ್ದಿಗಳ ಬೆನ್ನಿಗೇ ನಡೆದ ಈ ಬ್ಯಾಂಕ್ ವಿಲೀನ ಸರಕಾರದ ಮೇಲಿನ ಭರವಸೆಯನ್ನೇ ಆತನಿಂದ ದೂರಗೊಳಿಸಿದೆ.

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದ ಕೆಲವು ಶೀರ್ಷಿಕೆಗಳನ್ನು ನೋಡಿ.
1. ವಾಹನ ಉದ್ಯಮ: 3.5 ಲಕ್ಷ ಉದ್ಯೋಗಕ್ಕೆ ಕತ್ತರಿ (ಪ್ರಜಾವಾಣಿ: ಆಗಸ್ಟ್ 8, 2019)
2. ಪಾರ್ಲೆಯ 10,000 ನೌಕರರಿಗೆ ಉದ್ಯೋಗ ನಷ್ಟದ ಭೀತಿ (ವಾರ್ತಾಭಾರತಿ: ಆಗಸ್ಟ್ 22, 2019)
3. Fresh investment in indian public sector at 14 year low: Report – (ಭಾರತೀಯ ಸಾರ್ವಜನಿಕ ವಲಯದಲ್ಲಿ ಹೊಸ ಹೂಡಿಕೆಯು ಕಳೆದ 14 ವರ್ಷಗಳಲ್ಲೇ ಕನಿಷ್ಠ: Business Today: ಜನವರಿ 3, 2019)
4. Amid auto slump, components sector sees 8-10 lakh job cuts – ವಾಹನ ಉತ್ಪಾದನಾ ಕ್ಷೇತ್ರವು 8 ರಿಂದ 10 ಲಕ್ಷದಷ್ಟು ಉದ್ಯೋಗ ನಷ್ಟವನ್ನು ನಿರೀಕ್ಷಿಸುತ್ತಿದೆ. (The Hindu: ಜುಲೈ 24, 2109)
5. Auto sector crisis deepens: Around two lakh jobs cut in last three months – ವಾಹನ ಉತ್ಪಾದನಾ ಕ್ಷೇತ್ರದ ಬಿಕ್ಕಟ್ಟು ತೀವ್ರ: ಕಳೆದ 3 ತಿಂಗಳುಗಳಲ್ಲಿ ಸುಮಾರು 2 ಲಕ್ಷ ಉದ್ಯೋಗ ನಷ್ಟ. (PTI: ಆಗಸ್ಟ್ 4, 2019)
6. Top IT firms including Infosys, Wipro to lay off at least 56,000 employees this year– ಇನ್ಫೋಸಿಸ್ ಮತ್ತು ವಿಪ್ರೋಗಳೂ ಸೇರಿದಂತೆ ಪ್ರಮುಖ 8 ಐಟಿ ಕಂಪೆನಿಗಳು ಈ ವರ್ಷ 56 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದೆ. (ಮೇ 12, 2019)
7. India lost 11 million jobs in 2018, rural areas worst hit: CMIE- 2018ರಲ್ಲಿ ಭಾರತವು 1.1 ಕೋಟಿ ಉದ್ಯೋಗವನ್ನು ಕಳೆದುಕೊಂಡಿದೆ. ಇದರಲ್ಲಿ ಗ್ರಾಮೀಣ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿದೆ. (Business Today: ಜನವರಿ 4, 2019)
8. ಐದರತ್ತ ಗುರಿಯಿಟ್ಟು ಏಳಕ್ಕೆ ಮುಗ್ಗರಿಸಿದ ಭಾರತ (ವಿಜಯ ಕರ್ನಾಟಕ: ಆಗಸ್ಟ್ 3, 2019). ಅಂದಹಾಗೆ,

ಜಾಗತಿಕ ರಾಷ್ಟ್ರಗಳ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಸ್ಥಾನವನ್ನು ವಿಶ್ವಬ್ಯಾಂಕ್ ಪ್ರತಿವರ್ಷ ಘೋಷಿಸುತ್ತಿರುತ್ತದೆ. 2017ರಲ್ಲಿ ಭಾರತವು ಜಿಡಿಪಿಯಲ್ಲಿ ವಿಶ್ವ ರಾಷ್ಟ್ರಗಳ ಪೈಕಿ 6ನೇ ಸ್ಥಾನದಲ್ಲಿತ್ತು. ಆಗ ಭಾರತದ ಜಿಡಿಪಿ ಗಾತ್ರವು 2.65 ಲಕ್ಷ ಕೋಟಿ ಡಾಲರ್ ಆಗಿದ್ದರೆ ಬ್ರಿಟನ್‍ನ ಆರ್ಥಿಕತೆಯು ನಮಗಿಂತ ಕೆಳಗಿತ್ತು – 2.64 ಲಕ್ಷ ಕೋಟಿ ಡಾಲರ್. ಫ್ರಾನ್ಸ್ ನ ಜಿಡಿಪಿ ಗಾತ್ರವು 2.5 ಲಕ್ಷ ಕೋಟಿ ಡಾಲರ್ ಆಗಿತ್ತು. ನಮ್ಮ ಮುಂದಿನ ಗುರಿ ವಿಶ್ವ ರಾಷ್ಟ್ರಗಳ ಜಿಡಿಪಿ ಗಾತ್ರದ ಪಟ್ಟಿಯಲ್ಲಿ 6ರಿಂದ 5ನೇ ಸ್ಥಾನಕ್ಕೆ ಜಿಗಿಯುವುದು ಎಂದು 2017ರಲ್ಲಿ ಭಾರತವು ಘೋಷಿಸಿತ್ತು. ಮಾತ್ರವಲ್ಲ, 2024ಕ್ಕೆ ತಲುಪುವಾಗ ಭಾರತದ ಜಿಡಿಪಿಯ ಗಾತ್ರ 5 ಲಕ್ಷ ಕೋಟಿ ಡಾಲರ್ ಗೆ ಏರಿಸಲಾಗುವುದು ಎಂದು ಇತ್ತೀಚೆಗಷ್ಟೇ ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಆದರೆ ಕೇಂದ್ರ ಸರಕಾರದ ಈ ನಿರೀಕ್ಷೆಗೂ ಭಾರತದ ಜಿಡಿಪಿ ಬೆಳವಣಿಗೆಯ ಗಾತ್ರಕ್ಕೂ ತಾಳಮೇಳವಿಲ್ಲ ಎಂಬುದನ್ನು ಮೊನ್ನೆ ಮೊನ್ನೆಯಂತೆ ವಿಶ್ವಬ್ಯಾಂಕ್ ಬಿಡುಗಡೆಗೊಳಿಸಿದ ವರದಿಯು ಸ್ಪಷ್ಟಪಡಿಸುತ್ತದೆ. 2017ರಲ್ಲಿ 6ನೇ ಸ್ಥಾನದಲ್ಲಿದ್ದ ಭಾರತ, ಈಗ 7ನೇ ಸ್ಥಾನಕ್ಕೆ ಕುಸಿದಿದೆ. 2017ರಲ್ಲಿ ಭಾರತಕ್ಕಿಂತ ಕೆಳಗಿದ್ದ ಬ್ರಿಟನ್ ಮತ್ತು ಫ್ರಾನ್ಸ್ ಗಳು ಈಗ ಮೇಲೇರಿ ಕೂತಿವೆ. ಭಾರತದ ಜಿಡಿಪಿ ಗಾತ್ರವು 2017ರ 2.65 ಲಕ್ಷ ಕೋಟಿಯಿಂದ 2.7ಕ್ಕೆ ಕುಸಿದಿದೆ. ಅಮೇರಿಕದ ಈಗಿನ ಜಿಡಿಪಿ ಗಾತ್ರ 20.5 ಲಕ್ಷ ಕೋಟಿ ಡಾಲರ್.

ಸದ್ಯ ಪತ್ರಿಕೆ, ಟಿ.ವಿ. ಚಾನೆಲ್, ಆಭರಣ ಉದ್ಯಮ, ಕೃಷಿ ಮತ್ತು ಉಡುಪು ತಯಾರಿಕಾ ಕ್ಷೇತ್ರಗಳೂ ಸೇರಿದಂತೆ ಎಲ್ಲವೂ ಆತಂಕದ ಸ್ಥಿತಿಯಲ್ಲಿದೆ. 2016 ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ನೋಟು ನಿಷೇಧ ಕ್ರಮ ವನ್ನು ಕೊಂಡಾಡಿದ ಮಾಧ್ಯಮ ಕ್ಷೇತ್ರಕ್ಕೂ ಇವತ್ತು ಬಿಸಿ ತಟ್ಟಿದೆ. ಪತ್ರಕರ್ತರು ಉದ್ಯೋಗ ಭದ್ರತೆಯ ಭೀತಿಯಲ್ಲಿದ್ದಾರೆ. ಇಂಥ ಬಿಕ್ಕಟ್ಟಿನ ಸಂದರ್ಭಗಳಲ್ಲೆಲ್ಲಾ ಅತ್ಯಂತ ಹೆಚ್ಚು ಅಭದ್ರತೆಯನ್ನು ಎದುರಿಸುವುದು ಸಾಮಾನ್ಯ ಪತ್ರಕರ್ತರು ಮತ್ತು ವರದಿಗಾರರು ಅಥವಾ ಉದ್ಯಮ ವಲಯಕ್ಕೆ ಸಂಬಂಧಿಸಿ ಹೇಳುವುದಾದರೆ ಗುತ್ತಿಗೆ ಕಾರ್ಮಿಕರು.

ನಿಜವಾಗಿ, ನೋಟು ನಿಷೇಧ ಕ್ರಮವನ್ನು ಕೊಂಡಾಡಿ ಟಿ.ವಿ.ಗಳಲ್ಲಿ ಕಾರ್ಯಕ್ರಮ ಏರ್ಪಡಿಸಿದುದರಲ್ಲಿ ಈ ಪತ್ರಕರ್ತರ ಪಾತ್ರ ಸಣ್ಣದು. ಕಾರ್ಯಕ್ರಮವನ್ನು ರೂಪಿಸುವವರು ಅವರಲ್ಲ. ಅತಿಥಿಗಳನ್ನು ಆಯ್ಕೆ ಮಾಡುವವರು ಅವರಲ್ಲ. ಅವರನ್ನು ಆಹ್ವಾನಿಸುವವರೂ ಅವರಲ್ಲ. ಕಾರ್ಯಕ್ರಮ ಎಷ್ಟು ಗಂಟೆಯದ್ದಿರಬೇಕು, ಹೇಗಿರಬೇಕು, ಚರ್ಚೆಯನ್ನು ಹೇಗೆ ಕೊಂಡೊಯ್ಯಬೇಕು, ಯಾವುದಕ್ಕೆ ಎಲ್ಲಿ ಒತ್ತು ಕೊಡಬೇಕು.. ಇತ್ಯಾದಿ ಯಾವುದರಲ್ಲೂ ಅವರ ಪಾತ್ರವಿರುವುದಿಲ್ಲ. ಸಂಪಾದಕರು, ಉಪಸಂಪಾದಕರು ಅಥವಾ ಕಾರ್ಯಕ್ರಮದ ಹೊಣೆಗಾರರ ಸೂಚನೆಯಂತೆ ಪುಟ್ಟದೊಂದು ಬೈಟ್, ಸೆಕೆಂಡುಗಳಷ್ಟು ಕಿರಿದಾದ ವರದಿ ಇತ್ಯಾದಿಗಳನ್ನಷ್ಟೇ ಅವರು ಮಾಡಿರುತ್ತಾರೆ. ಉಳಿದಂತೆ ನೋಟು ನಿಷೇಧದ ಸುತ್ತ ಪರವೋ ವಿರುದ್ಧವೋ ಕಾರ್ಯಕ್ರಮಗಳನ್ನು ರೂಪಿಸುವ ಮತ್ತು ಪ್ರಸಾರ ಮಾಡುವ ಸಂಪೂರ್ಣ ಹೊಣೆಗಾರಿಕೆ ಸಂಪಾದಕೀಯ ಮಂಡಳಿಯದ್ದಾಗಿರುತ್ತದೆ. 2016, ನವೆಂಬರ್ 8ರ ಬಳಿಕ ಹೆಚ್ಚಿನೆಲ್ಲ ಟಿ.ವಿ. ಚಾನೆಲ್‍ಗಳಲ್ಲಿ ನಡೆದ ಚರ್ಚೆಗಳು ನೋಟು ನಿಷೇಧದ ಪರವಾಗಿದ್ದುವು. ಎಲ್ಲಿಯವರೆಗೆಂದರೆ, 2 ಸಾವಿರದ ನೋಟಿನಲ್ಲಿ ಅಜ್ಞಾತ ಚಿಪ್ ಒಂದಿದೆ ಮತ್ತು ಅದು ಉಪಗ್ರಹದಿಂದ ನಿಯಂತ್ರಿಸಲ್ಪಡುತ್ತಿದ್ದು, ಎಲ್ಲಿಟ್ಟರೂ ಆ ನೋಟನ್ನು ಪತ್ತೆ ಹಚ್ಚುವ ವಿಶೇಷ ಸಾಮರ್ಥ್ಯ ಆ ಚಿಪ್‍ಗೆ ಇದೆ’ ಎಂದು ಹೇಳುವಷ್ಟರ ಮಟ್ಟಿಗೆ ಈ ಚರ್ಚೆಗಳು ಅಸಂಬದ್ಧ ಹಂತಕ್ಕೆ ತಲುಪಿದ್ದುವು. 2006 ನವೆಂಬರ್ 8ರ ಬಳಿಕ ಸುಮಾರು ಒಂದು ತಿಂಗಳ ಕಾಲ ನಡೆದ ಅಸಂಖ್ಯ ಟಿ.ವಿ. ಚರ್ಚೆಗಳಲ್ಲಿ ಅದರ ಬಾಧಕಗಳು ಪರಾಮರ್ಶೆಗೆ ಒಳಗಾದದ್ದು ತೀರಾ ಕಡಿಮೆ. ಅಂಥದ್ದೊಂದು ವಾತಾವರಣವನ್ನೇ ಚರ್ಚಾ ಕೊಠಡಿಯಿಂದ ಹೊರ ಹಾಕಲಾಗಿತ್ತು.

ಪತ್ರಿಕೆಗಳು ನೋಟು ನಿಷೇಧವನ್ನು ಬೆಂಬಲಿಸಿ ಧಾರಾಳ ಲೇಖನ, ವರದಿ, ಸುದ್ದಿಗಳನ್ನು ಪ್ರಕಟಿಸಿದುವು. ಕಪ್ಪು ಹಣ ನಿರ್ಮೂಲನಕ್ಕಾಗಿ, ಕಾಶ್ಮೀರದ ಕಲ್ಲೆಸೆತವನ್ನು ತಡೆಯುವುದಕ್ಕಾಗಿ, ನಕ್ಸಲರನ್ನು ಸದೆಬಡಿಯುವುದಕ್ಕಾಗಿ.. ಎಂಬಿತ್ಯಾದಿ ತರಹೇವಾರಿ ಕಾರಣಗಳು ಸರಕಾರದಿಂದಲೂ ಸಮರ್ಥಕರಿಂದಲೂ ಮತ್ತೆ ಮತ್ತೆ ಕೇಳಿ ಬಂದುವು. ‘ಕಪ್ಪು ಹಣವನ್ನು ಹೊಂದಿರುವವರು ಮಾತ್ರ ನೋಟು ನಿಷೇಧವನ್ನು ವಿರೋಧಿಸುತ್ತಾರೆ’ ಎಂಬ ವಾದವನ್ನೂ ಮುಂದಿಡಲಾಯಿತು. ಇದರ ಬೆನ್ನಿಗೇ 2017 ಜುಲೈಯಲ್ಲಿ ಜಿಎಸ್‍ಟಿಯನ್ನೂ ಜಾರಿಗೊಳಿಸಲಾಯಿತು. ನೋಟು ನಿಷೇಧ ಮತ್ತು ಜಿಎಸ್‍ಟಿ – ಇವೆರಡನ್ನೂ ಕೇಂದ್ರ ಸರಕಾರವು ಆರ್ಥಿಕ ಕ್ರಾಂತಿ ಎಂದು ಬಣ್ಣಿಸಿಕೊಂಡಿತು. ಆದರೆ ನೋಟು ನಿಷೇಧ ಅತಿದೊಡ್ಡ ಪ್ರಮಾದ ಅನ್ನುವುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವರ್ಷದ ಬಳಿಕ ಪರೋಕ್ಷವಾಗಿ ಘೋಷಿಸಿತು. ನಿಷೇಧಿತ 99%ಕ್ಕಿಂತಲೂ ಅಧಿಕ ನೋಟುಗಳು ಬ್ಯಾಂಕ್‍ಗಳಿಗೆ ಮರಳಿ ಬಂದಿವೆ ಎಂದು 2018 ಆಗಸ್ಟ್ ನಲ್ಲಿ ಅದು ಮುಜುಗರದಿಂದಲೇ ಒಪ್ಪಿಕೊಂಡಿತು. ಅಂದರೆ, ಕಪ್ಪು ಹಣದ ಪ್ರಮಾಣ ಈ ದೇಶದಲ್ಲಿ ಶೂನ್ಯ ಅನ್ನುವಷ್ಟು ಕಡಿಮೆ ಇತ್ತು ಎಂದೇ ಇದರರ್ಥ. ಆದರೆ, ಇಷ್ಟು ಸಣ್ಣ ಪ್ರಮಾಣದ ಕಪ್ಪು ಹಣವನ್ನು ಪತ್ತೆ ಹಚ್ಚುವುದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ಯಾಕೆ ಖರ್ಚು ಮಾಡಿದಿರಿ ಮತ್ತು ಬಡ ಭಾರತೀಯರನ್ನು ಯಾಕೆ ಬಿಸಿಲಿನಲ್ಲಿ ನಿಲ್ಲಿಸಿದಿರಿ ಎಂದು ಪ್ರಶ್ನಿಸುವ ನೈತಿಕತೆ ಮಾಧ್ಯಮಗಳಿಗಿರಲಿಲ್ಲ. ಇದೊಂದು ರೀತಿಯಲ್ಲಿ ಅಸ್ಸಾಮ್‍ನಲ್ಲಿ ಜಾರಿಗೊಳಿಸಲಾದ ರಾಷ್ಟ್ರೀಯ ಪೌರತ್ವ ನೋಂದಣಿ (NRC)ಯಂತೆ. ಸಾವಿರಾರು ಕೋಟಿ ರೂಪಾಯಿಯಷ್ಟು ಅಗಾಧ ಮೊತ್ತವನ್ನು ಖರ್ಚು ಮಾಡಿ ಹುಡುಕಾಡಿದ ಬಳಿಕ ಸಿಕ್ಕಿದ್ದು ಬರೇ 19 ಲಕ್ಷ ಮಂದಿ. ಮುಂದಿನ ದಿನಗಳಲ್ಲಿ ಈ ಸಂಖ್ಯೆ 10 ಲಕ್ಷಕ್ಕೆ ಇಳಿಯಲಿದೆ ಎಂಬ ಅಂದಾಜಿದೆ. ಇದು ಏನೇ ಇದ್ದರೂ,

ನೋಟು ನಿಷೇಧದ ಪರ ಪ್ರಕಟವಾದ ಲೇಖನಗಳು, ವಿಶ್ಲೇಷಣೆಗಳು ಮತ್ತು ಟಿ.ವಿ. ಗಳಲ್ಲಿ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ಅತ್ಯಂತ ಅಲ್ಪ ಪಾತ್ರವನ್ನಷ್ಟೇ ವಹಿಸಿರಬಹುದಾದ ಸಾಮಾನ್ಯ ಪತ್ರಕರ್ತರು ಇದೀಗ ಉದ್ಯೋಗ ಕಳಕೊಳ್ಳುವವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಉದ್ಯಮ ಕ್ಷೇತ್ರದ ಸ್ಥಿತಿಯೂ ಭಿನ್ನವಲ್ಲ. ಗುತ್ತಿಗೆ ಕಾರ್ಮಿಕರೇ ಉದ್ಯೋಗ ನಷ್ಟದ ಪಟ್ಟಿಯಲ್ಲಿ ಮೊದಲಿದ್ದಾರೆ. ಇದೊಂದು ರೀತಿಯ ವ್ಯಂಗ್ಯ, ಕ್ರೌರ್ಯ, ದುರಂತ.

ಸುಮಾರು 3.5 ಕೋಟಿ ಮಂದಿಗೆ ಉದ್ಯೋಗ ನೀಡಿರುವ ವಾಹನ ಉತ್ಪಾದನಾ ಕ್ಷೇತ್ರವು ಬಡ ಕಾರ್ಮಿಕರನ್ನು ಕೈಬಿಡುವ ಮೂಲಕ ತನ್ನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ. ಯಮಹಾ ಮೋಟರ್ಸ್, ಡೆನ್ಸೊ ಕಾರ್ಪೋರೇಶನ್, ಸುಝುಕಿ ಮೋಟಾರ್ ಕಾರ್ಪೋರೇಶನ್, ಹೋಂಡಾ, ಟಾಟಾ ಮೋಟಾರ್ಸ್, ಮಹೀಂದ್ರಾ, ಅಶೋಕ್ ಲೇಲ್ಯಾಂಡ್.. ಹೀಗೆ ಕಾರ್ಮಿಕರನ್ನು ಮನೆಗಟ್ಟಲು ಕಂಪೆನಿಗಳು ಪೈಪೋಟಿಯಲ್ಲಿವೆ. 2018ರಲ್ಲಿ ನಿರುದ್ಯೋಗ ಸ್ಥಿತಿಯು 5.66% ಇದ್ದರೆ, 2019 ಜುಲೈವರೆಗಿನ ಲೆಕ್ಕಾಚಾರದಂತೆ ಈ ನಿರುದ್ಯೋಗ ಸ್ಥಿತಿಯು 7.51%ಕ್ಕೆ ಏರಿದೆ. 2014-15ರಲ್ಲಿ 10.9% ದಷ್ಟಿದ್ದ ಕೃಷಿ ಕ್ಷೇತ್ರದ ದಿನದ ಆದಾಯವು 2018-19ರ ಹೊತ್ತಿಗೆ 3.7%ರಷ್ಟು ಭಾರೀ ಕುಸಿತವನ್ನು ಕಂಡಿದೆ. ಸಾರ್ವಜನಿಕವಾಗಿ ಹಣದ ಹರಿವು ಕಡಿಮೆಯಾಗಿದೆ. ಜನರಲ್ಲಿ ಖರೀದಿ ಸಾಮರ್ಥ್ಯ ಕುಸಿದಿದೆ. ಬೀದಿಬದಿಯಲ್ಲಿ ತರಕಾರಿ, ಹಣ್ಣುಹಂಪಲು, ಆಟಿಕೆ ಇತ್ಯಾದಿಗಳನ್ನು ಮಾರಿ ಬದುಕುವವರ ಬದುಕಿಗೆ ಸವಾಲು ಎದುರಾಗಿದೆ. ಅಷ್ಟಕ್ಕೂ,

ಯಾವುದೇ ಕಂಪೆನಿಯ ಉನ್ನತ ಸ್ಥಾನದಲ್ಲಿರುವವರಿಗೆ ಸಂಬಳವೂ ಹೆಚ್ಚು, ಉದ್ಯೋಗವು ಭದ್ರ. ಅದೇವೇಳೆ, ತೀರಾ ಕೆಳಹಂತ ದಲ್ಲಿರುವವರಿಗೆ ವೇತನವೂ ಕಡಿಮೆ, ಉದ್ಯೋಗವೂ ಅಭದ್ರ. ನೋಟು ನಿಷೇಧದಂತಹ ಅತಿಕೆಟ್ಟ ಆರ್ಥಿಕ ನೀತಿಗಳು ಮೊದಲು ಬಲಿ ಪಡೆಯುವುದೇ ಈ ಕೆಳಹಂತದವರನ್ನು. ಮಾಧ್ಯಮಗಳಲ್ಲಿ ನೋಟು ನಿಷೇಧ ಮತ್ತು ಜಿಎಸ್‍ಟಿ ಪರ ಎಕ್ಸ್ ಕ್ಲೂಸಿವ್ ನ್ಯೂಸ್ ಮಾಡಿದವರು, ಗಂಟೆಗಟ್ಟಲೆ ಪ್ಯಾನಲ್ ಚರ್ಚೆ ಏರ್ಪಡಿಸಿದವರು ಮತ್ತು ಪುಟಗಟ್ಟಲೆ ಬರೆದವರೆಲ್ಲ ಈಗಲೂ ಬಹುತೇಕ ಸುಭದ್ರ ಸ್ಥಿತಿಯಲ್ಲಿದ್ದಾರೆ. ಮಾತ್ರವಲ್ಲ, ಈಗಿನ ಆರ್ಥಿಕ ಕುಸಿತಕ್ಕೆ- ನೋಟು ನಿಷೇಧ ಮತ್ತು ಜಿಎಸ್‍ಟಿಗಿಂತ ಹೊರತಾದ ಕಾರಣಗಳ ಹುಡುಕಾಟದಲ್ಲೂ ಇದ್ದಾರೆ. ಅಂದಹಾಗೆ,

ನಮ್ಮ ಪಕ್ಕದಲ್ಲಿ ಪಾಕಿಸ್ತಾನ ಇರುವವರೆಗೆ ಸರ್ಕಾರದ ಪ್ರಮಾದಗಳು ಚರ್ಚೆಯಾಗದಂತೆ ನೋಡಿಕೊಳ್ಳುವುದು ಕಷ್ಟವೂ ಅಲ್ಲ. ಆದರೆ, ಆ ಎರಡು ಕರೆಗಳಲ್ಲಿರುವ ಆತಂಕಕ್ಕೆ ಮತ್ತು ಅಂತಹ ಅಸಂಖ್ಯ ಧ್ವನಿಗಳಿಗೆ ಹೇಗೆ ಸ್ಪಂದಿಸುವುದೋ?