ಕುವೈಟ್: ಮನೆಗೆಲಸಗಾರರಿಗೆ ವಂಚನೆ ಮಾಡುವ ಸ್ಪೋನ್ಸರ್ ಕಪ್ಪುಪಟ್ಟಿಗೆ

0
573

ಕುವೈಟ್‍ ಸಿಟಿ, ಜು.3: ಕುವೈಟಿನಲ್ಲಿ ಮನೆಗೆಲಸದವರಿಗೆ ಅವರ ಹಕ್ಕುಗಳನ್ನು ಕೊಡದ ಸ್ಪೋನ್ಸರ್ ಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮನೆಗೆಲಸದ ಕ್ಷೇತ್ರದಲ್ಲಿ ಮರುಕಳಿಸುತ್ತಿರುವ ವಂಚನೆಯ ಕುರಿತ ದೂರುಗಳ ಹಿನ್ನೆಲೆಯಲ್ಲಿ ಮ್ಯಾನ್‍ಪವರ್ ಅಥಾರಿಟಿ ಈ ಕ್ರಮಕ್ಕೆ ಮುಂದಾಗಿದೆ. ಅಲ್‍ಜರೀದ್ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮ್ಯಾನ್‍ಪವರ್ ಅಥಾರಿಟಿ ನಿರ್ದೇಶಕ ಜನರಲ್ ಅಹ್ಮದ್ ಅಲ್ ಮೂಸ ಈ ವಿವರವನ್ನು ನೀಡಿದ್ದಾರೆ. ಮನೆ ಕೆಲಸಗಾರರಿಗೆ ಸಂಬಂಧಿಸಿದ ಹಕ್ಕು ನಿರಾಕರಣೆ, ವೇತನ ಕೊಡದಿರುವುದು, ಹಿಂಸಿಸುವುದು ಮೊದಲದ ಹಲವು ದೂರುಗಳು ಅಧಿಕಾರಿಗಳಿಗೆ ಲಭಿಸುತ್ತಿದೆ. ಓರ್ವನೆ ಸ್ಪೋನ್ಸರ್ ವಿರುದ್ಧ ಏಳು ಸಲ ದೂರು ಬಂದದ್ದೂ ಇದೆ.

ಇಂತಹ ಸ್ಪೋನ್ಸರ್ ಗಳಿಗೆ ಮತ್ತೆ ಕೆಲಸಗಾರರನ್ನು ಕರೆತರಲು ಅನುಮತಿ ನೀಡದಿರಲು ಕಪ್ಪುಪಟ್ಟಿಗೆ ಸೇರಿಸುವ ಕುರಿತು ಅಥಾರಿಟಿ ಮುಂದಾಗಿದೆ. ಹಲವು ಬಾರಿ ಕೆಲಸಗಾರರಿಂದ ದೂರು ಲಭಿಸುವ ಸ್ಪೋನ್ಸರ್ ಮತ್ತು ರಿಕ್ರ್ಯೂಟ್‍ಮೆಂಟ್ ಅಧಿಕಾರಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ನೇಮಕಾತಿ ಅವಕಾಶ ರದ್ದುಪಡಿಸಲಾಗುವುದು. ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಕಪ್ಪುಪಟ್ಟಿಗೆ ಸೇರಿಸುವ ವ್ಯವಸ್ಥೆ ಸರಿಯಾಗಿ ನಡೆಯುತ್ತಿದೆ. ಕೆಲಸ ನಿಯಮ ಪಾಲಿಸದೆ ಲೋಪ ಎಸಗುವ ಸಂಸ್ಥೆಗಳ ಫೈಲುಗಳನ್ನು ತಡೆಹಿಡಿದು ರಿಕ್ರ್ಯೂಟ್‍ಮೆಂಟ್ ನಡೆಸಲು ಅವಕಾಶ ನಿರಾಕರಿಸಲಾಗುತ್ತಿದೆ. ಇದೇ ರೀತಿಯ ವ್ಯವಸ್ಥೆಯನ್ನು ಮನೆಗೆಲಸ ಕ್ಷೇತ್ರದಲ್ಲಿ ತರಲಾಗುವುದು ಎಂದು ಮ್ಯಾನ್‍ಪವರ್ ಅಥಾರಿಟಿ ನಿರ್ದೇಶಕರು ತಿಳಿಸಿದರು.