ಕುವೈಟ್: ಕಾನೂನು ಉಲ್ಲಂಘಿಸುವ ಕಂಪೆನಿಗಳ ಕಾರ್ಮಿಕರ ಗಡಿಪಾರು

0
687

ಸನ್ಮಾರ್ಗ ವಾರ್ತೆ

ಕುವೈಟ್‍ ಸಿಟಿ: ಕಾನೂನು ಉಲ್ಲಂಘಿಸುವ ಕಂಪೆನಿಗಳಿಗೆ ಸರಕಾರ ಎಚ್ಚರಿಕೆ ನೀಡಿದರೂ ಸರಿಪಡಿಸಿಕೊಳ್ಳದಿರುವ ಕಂಪೆನಿಗಳ ಎಲ್ಲ ಕಾರ್ಮಿಕರನ್ನು ಆಯಾ ಊರಿಗೆ ಕಳುಹಿಸುವುದಾಗಿ ಕುವೈಟ್ ನ ಮ್ಯಾನ್‍ಪವರ್ ಅಥಾರಿಟಿ ಮುನ್ನೆಚ್ಚರಿಕೆ ನೀಡಿದೆ.

ಉದ್ಯೋಗ ಕಾನೂನು ಉಲ್ಲಂಘನೆ ಮಾಡುವ ಕಂಪೆನಿಗಳ ಫೈಲನ್ನು ಸ್ತಂಭನಗೊಳಿಸಲಾಗುತ್ತದೆ. ಆದರೂ ಹಲವು ಕಂಪೆನಿಗಳು ಮ್ಯಾನ್‍ಪವರ್ ಅಥಾರಿಟಿಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸದಿರುವುದು ಎಂದಿನಂತೆ ಮುಂದುವರಿಯುತ್ತಿದೆ. ಇದಕ್ಕೆ ಅವಕಾಶ ಕೊಡುವುದಿಲ್ಲ. ಮುಂದಿನ ವರ್ಷದಿಂದ ಕಠಿಣ ಕ್ರಮ ಜರಗಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಕಂಪೆನಿ ಕಾರ್ಯಾಚರಿಸಲು ಸಾಧ್ಯವಾಗದಂತೆ ಕಾರ್ಮಿಕರನ್ನು ಮುನ್ಸೂಚನೆ ನೀಡದೆ ಗಡೀಪಾರು ಮಾಡುವುದು ಪರಿಗಣನೆಯಲ್ಲಿದೆ. ಮಾನವ ಸಾಗಾಟವನ್ನು ಪ್ರೋತ್ಸಾಹಿಸುವ ರೀತಿ ವೀಸಾ ವ್ಯಾಪಾರ ನಡೆಸುವುದು, ಇಖಾಮ ಸಮಯ ಮುಗಿದರೂ ಉದ್ಯೋಗಿಗಳನ್ನು ಕೆಲಸದಲ್ಲಿಟ್ಟುಕೊಳ್ಳುವುದು, ಕಾರ್ಮಿಕರಿಗೆ ಸಂಬಳ ಕೊಡುವುದರಲ್ಲಿ ಮತ್ತು ಸರಿಯಾದ ವಸತಿ ಸೌಲಭ್ಯ ಒದಗಿಸುವುದರಲ್ಲಿ ನಿರ್ಲಕ್ಷ್ಯ ವಹಿಸುವ ಕಂಪೆನಿಗಳ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೀಸಾ ವ್ಯಾಪಾರಕ್ಕಾಗಿ ಮಾತ್ರ ಮಾಡಿಟ್ಟುಕೊಂಡ ಕಂಪೆನಿಗಳನ್ನು ಪತ್ತೆಹಚ್ಚಲು ಜನವರಿಯಿಂದ ವಿಶೇಷ ತಪಾಣೆ ಅಭಿಯಾನ ನಡೆಯಲಿದೆ ಎಂದು ಮ್ಯಾನ್‍ಪವರ್ ಅಥಾರಿಟಿ ತಿಳಿಸಿದೆ.