ಪಂಜಾಬ್‍ ಸರಕಾರ ಭದ್ರತೆ ನೀಡಿದರೆ ಮಾತ್ರ ರೈಲು ಸಂಚಾರ ಪುನರಾರಂಭ : ಕೇಂದ್ರ ರೈಲ್ವೆ ಇಲಾಖೆ

0
596

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪಂಜಾಬ್‍ಗೆ ರೈಲು ಸಂಚಾರ ಪುನರಾರಂಭಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ. ಅಡಚಣೆ ಸರಿಯಾಗದೆ ಸಂಚಾರ ಪುನರಾರಂಭಿಸಲು ಆಗುವುದಿಲ್ಲ ಎಂದು ರೈಲ್ವೆ ಸಚಿವ ಪಿಯುಷ್ ಗೋಯಲ್ ಮತ್ತು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಹೇಳುತ್ತಿದ್ದಾರೆ. ಕಳೆದ ಸೆಪ್ಟಂಬರ್ 25ರಿಂದ ಪಂಜಾಬ್‍ಗೆ ರೈಲು ಸಂಚಾರ ನಿಂತು ಹೋಗಿದೆ.

ರೈತರ ಮೊದಲ ಹಂತದ ಹೋರಾಟದಲ್ಲಿ 32 ಸ್ಥಳಗಳಲ್ಲಿ ರೈಲು ಮಾರ್ಗ ತಡೆಯೊಡ್ಡಲಾಗಿತ್ತು. ಆದರೆ, ಈಗ ರೈಲು ಸಂಚಾರಕ್ಕೆ ಅಡ್ಡಿಪಡಿಸಲಾಗುತ್ತಿಲ್ಲ. ರೈಲು ಮಾರ್ಗ ತಡೆ ಮಾಡುವುದಿಲ್ಲ ಎಂದು ರೈತರು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದರು.

ರಾಜ್ಯಕ್ಕೆ ಈ ಸಮಯದಲ್ಲಿ ಹತ್ತು ಲಕ್ಷ ಟನ್ ಗೊಬ್ಬರ ಬೇಕಾಗಿದೆ. ಎರಡು ಲಕ್ಷ ಟನ್ ಮಾತ್ರ ಸ್ಟಾಕ್ ಇದೆ. ಮಾತ್ರವಲ್ಲ ಹೆಚ್ಚಿನ ಆಹಾರ ಧಾನ್ಯಗಳು ಆಹಾರ ಸಂರಕ್ಷಣಾ ಕೇಂದ್ರದಲ್ಲಿ ರಾಶಿಬಿದ್ದಿವೆ. ಕೇಂದ್ರದ ಕೃಷಿ ಕಾನೂನನ್ನು ಪ್ರಶ್ನಿಸಿದ್ದಕ್ಕಾಗಿ ರೈಲು ಸಂಚಾರ ನಿಲ್ಲಿಸಿ ರಾಜ್ಯವನ್ನು ಶಿಕ್ಷಿಸಲಾಗುತ್ತಿದೆ ಎಂದು ಪಂಜಾಬ್‍ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೇಳಿದ್ದಾರೆ.

ಇದೇ ವೇಳೆ, ರಾಜ್ಯ ಸರಕಾರ ಸುರಕ್ಷೆ ಭದ್ರತೆ ನೀಡಿದರೆ ಮಾತ್ರ ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ರೈಲ್ವೆ ಕಾರ್ಯದರ್ಶಿ ತಿಳಿಸಿದ್ದಾರೆ. 32 ಸ್ಥಳಗಳಲ್ಲಿ ರೈಲು ರೋಕೊ ನಡೆದಿದೆ. ಹದಿನಾಲ್ಕು ಕಡೆಗಳಲ್ಲಿ ಮಾತ್ರ ತೆಗೆಯಲಾಗಿದೆ. ರೈಲು ಸಂಪೂರ್ಣ ನಮ್ಮ ನಿಯಂತ್ರಣಕ್ಕೆ ಬಂದರೆ ಮಾತ್ರ ರೈಲು ಸಂಚಾರ ಆರಂಭಿಸಲಾಗುವುದು ಎಂದು ವಿ.ಕೆ. ಯಾದವ್ ಹೇಳಿದ್ದಾರೆ.