ಬಿಜೆಪಿ ಐಟಿ ಸೆಲ್ ಗೆ ಠಕ್ಕರ್ ನೀಡಲು ಸ್ವಂತ ಐಟಿ ಸೆಲ್ ಆರಂಭಿಸಿದ ರೈತರು

0
1038

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನಿನ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲು ಪ್ರಯತ್ನಿಸುತ್ತಿರುವ ಬಿಜೆಪಿ ಐಟಿ ಸೆಲ್ ಗೆ ಠಕ್ಕರ್ ನೀಡಲು ಮುಂದಾಗಿರುವ ರೈತರು, ಪ್ರತಿಭಟನಾ ನಿರತ ಸ್ಥಳದಿಂದಲೇ ಕಾರ್ಯಾಚರಿಸುವಂತೆ ತಮ್ಮದೇ ಸ್ವಂತ ಐಟಿ ಸೆಲ್ ಪ್ರಾರಂಭಿಸಿ, ಮಾಧ್ಯಮಗಳ ಗಮನ ಸೆಳೆದಿದ್ದಾರೆ.

ಈ ಬಗ್ಗೆ ಎನ್ ಡಿ ಟಿ ವಿ ಸುದ್ದಿ ವಾಹಿನಿಯ ಪ್ರತಿನಿಧಿಯೊಂದಿಗೆ ಮಾತನಾಡಿದ ಯುವ ರೈತ ಮುಖಂಡ ಹಾಗೂ ರೈತರ ಐಟಿ ಸೆಲ್ ಮುಖ್ಯಸ್ಥ ಬಲ್ಜೀತ್ ಸಿಂಗ್, ಪ್ರತಿದಿನ ನಾವು ಪ್ರತಿಭಟನಾ ಸಭೆಯನ್ನು ಮುಗಿಸಿ, ವಿಶ್ರಾಂತಿ ಪಡೆಯುವ ಸಮಯದಲ್ಲಿ ಸಾಮಾಜಿಕ ಜಾಲತಾಣಗಳನ್ನು ಗಮನಿಸುವಾಗ ಬಿಜೆಪಿ ಐಟಿ ಸೆಲ್ ನವರು ನಮ್ಮನ್ನು ನಕ್ಸಲೀಯರು, ಮಾವೋವಾದಿಗಳು, ಭಯೋತ್ಪಾದಕರು ಎಂಬಂತೆ ಬಿಂಬಿಸುತ್ತಿರುವುದನ್ನು ನೋಡುವಾಗ ತುಂಬಾ ನೋವಾಯಿತು. ದೇಶಕ್ಕೆ ಅನ್ನ ನೀಡುವ ರೈತರನ್ನು ಹೀಗನ್ನುವ ಮನಸ್ಥಿತಿಯವರ ವಿರುದ್ಧ ಏನಾದರೂ ಮಾಡಬೇಕು ಎಂಬ ಆಲೋಚನೆ ಮಾಡುತ್ತಿರುವಾಗ ಸತ್ಯವನ್ನು ಪ್ರಸಾರ ಮಾಡುವ ಮತ್ತು ರೈತರ ಹೋರಾಟವನ್ನು ಹತ್ತಿಕ್ಕಲು ಫೇಕ್ ನ್ಯೂಸ್ ಗಳನ್ನು ಹರಡುವುದನ್ನು ಕೌಂಟರ್ ಮಾಡಲು ನಮ್ಮದೇ ಐಟಿ ಸೆಲ್ ಆರಂಭಿಸಿದ್ದಾಗಿ ತಿಳಿಸಿದ್ದಾರೆ.

ನಾವು ಶಾಂತಿಯುತ ಹಾಗೂ ಸಂವಿಧಾನಕ್ಕೆ ಬದ್ಧವಾಗಿ ಕಾನೂನು ಹಿಂಪಡೆಯುವವರೆಗೂ ಹೋರಾಟ ಮಾಡುತ್ತೇವೆ. ಪ್ರಧಾನಿ ಮೋದಿಯವರಿಗೆ ರೈತರ ಕಷ್ಟ ಗೊತ್ತಿಲ್ಲ. ಇಲ್ಲಿನ ಚಳಿ ಸಹಿಸಲಾರದೆ ಹಲವಾರು ಮಂದಿ ಮೃತಪಟ್ಟರೂ ಕೂಡ ಅವರಿಗೆ ಚಿಂತೆ ಇಲ್ಲ ಎಂದು ಹೇಳಿರುವ ಬಲ್ಜೀತ್ ಸಿಂಗ್, ನಮ್ಮ ಐಟಿ ಸೆಲ್ @kisanEktaMorcha ನ ಎಲ್ಲಾ ಟ್ವಿಟ್ಟರ್, ಇನ್ ಸ್ಟಾಗ್ರಾಂ, ಫೇಸ್ ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ದೇಶದ ಜನರು ಬೆಂಬಲಿಸುತ್ತಿದ್ದಾರೆ. ಈ ಮಧ್ಯೆಯೂ ಕೂಡಾ ಫೇಕ್ ಅಕೌಂಟ್ ಗಳನ್ನು ಮಾಡಲು ಬಿಜೆಪಿ ಐಟಿ ಸೆಲ್ ಪ್ರಯತ್ನ ಮಾಡುತ್ತಿದೆ. ಆದ್ದರಿಂದ ದೇಶದ ಜನರು ಇಂಥವರ ಬಗ್ಗೆ ಜಾಗರೂಕರಾಗಿರಿ ಎಂದು ತಿಳಿಸಿದ್ದಾರೆ.

ವೀಡಿಯೋ ವೀಕ್ಷಿಸಿ.
ಕೃಪೆ: NDTV