ಸನ್ಮಾರ್ಗ ವಾರ್ತೆ
2006ರಲ್ಲಿ ನಡೆದ ಮುಂಬೈ ರೈಲು ಸ್ಫೋಟದಲ್ಲಿ ಆರೋಪಿಯಾಗಿ ಬಂಧಿತನಾಗಿ ಬಳಿಕ ಬಿಡುಗಡೆಗೊಂಡ ವಕೀಲ ಅಬ್ದುಲ್ ವಾಹಿದ್ ಶೇಕ್ ಅವರು ಮಹಾರಾಷ್ಟ್ರದ ಔರಂಗ ಬಾದ್ ನ ಎಂಜಿಎಂ ಯೂನಿವರ್ಸಿಟಿಯಿಂದ ಪಿ ಎಚ್ ಡಿ ಡಿಗ್ರಿಯನ್ನು ಪಡೆದಿದ್ದಾರೆ. ಬಾಂಬ್ ಸ್ಫೋಟದ ಆರೋಪದಲ್ಲಿ ಇವರನ್ನು 9 ವರ್ಷಗಳ ಕಾಲ ಜೈಲಲ್ಲಿ ಇಡಲಾಗಿತ್ತು . ಈ ಹಿನ್ನೆಲೆಯಲ್ಲಿ ಇವರು ಒಂಬತ್ತು ಕೋಟಿ ರೂಪಾಯಿ ಪರಿಹಾರಕ್ಕಾಗಿ ಈಗಾಗಲೇ ದಾವೆ ಹೂಡಿದ್ದಾರೆ. ಕೈದಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಲಾಯರ್ ಎಂಬ ಹೆಸರೂ ಇವರಿಗಿದೆ.
ಪ್ರಿಸನ್ ಲಿಟರೇಚರ್: ಪೋಸ್ಟ್ ಇಂಡಿಪೆಂಡೆನ್ಸ್ ಎಂಬ ಅವರ ಮಹಾ ಪ್ರಬಂಧಕ್ಕೆ ಪಿಎಚ್ಡಿ ಲಭಿಸಿದೆ. ಈ ಪ್ರಬಂಧದಲ್ಲಿ ಭಾರತೀಯ ಜೈಲುಗಳಲ್ಲಿರುವ ಕೈದಿಗಳ ಪರಿಸ್ಥಿತಿ ಅವರ ಪ್ರತಿರೋಧ ಅವರ ಮೇಲಾಗುತ್ತಿರುವ ಅನ್ಯಾಯ ಇತ್ಯಾದಿಗಳ ಮೇಲೆ ನಡೆಸಿದ ಅಧ್ಯಯನದ ವಿವರಗಳಿವೆ.
ಈ ಪ್ರಬಂಧ ಕೇವಲ ಜೈಲಿನ ವಿವರಗಳಿಗೆ ಸೀಮಿತಗೊಂಡಿಲ್ಲ. ನನ್ನ ನ್ಯಾಯದ ಹೋರಾಟದ ವಿವರವೂ ಇದರಲ್ಲಿದೆ ಜೈಲಿನ ಅನುಭವಗಳು ಎನ್ನುವುದು ಮೌನದಲ್ಲಿರುವವರ ಮಾತಾಗಿದೆ. ನಮ್ಮ ಸಮಾಜಕ್ಕೆ ಚೆಲ್ಲುವ ಬೆಳಕೂ ಆಗಿದೆ ಎಂದು ಅವರು ಹೇಳಿದ್ದಾರೆ.
ಅನ್ಯಾಯವಾಗಿ ಜೈಲಿಗೆ ತಳ್ಳಿದವರ ಬಿಡುಗಡೆಗಾಗಿ ಡಾಕ್ಟರ್ ಶೈಕ್ ಅವರು ಹೋರಾಡುತ್ತಿದ್ದಾರೆ. ಇವರ ಈ ಮಹಾ ಪ್ರಬಂಧ ಮತ್ತು ಅದಕ್ಕೆ ಧಕ್ಕಿರುವ ಪಿಎಚ್ಡಿ ಪದವಿಯು ನ್ಯಾಯಿಕ ಹೋರಾಟದಲ್ಲಿ ಅವರಿಗಿರುವ ಬದ್ಧತೆಯನ್ನು ವ್ಯಕ್ತಪಡಿಸುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.












