ಸನ್ಮಾರ್ಗ ವಾರ್ತೆ
ಗಾಝಾದಲ್ಲಿ ನಿಲ್ಲುವುದು ಎಷ್ಟು ಅಪಾಯಕಾರಿ ಅನ್ನುವುದು ನನಗೆ ಗೊತ್ತು. ಆದರೆ ನಾನು ಇಲ್ಲಿಂದ ಕದಲಲಾರೆ. ಇಲ್ಲಿಂದ ವಲಸೆ ಹೋಗಲಾರೆ. ನಾನು ಇಲ್ಲಿಂದ ಹೋಗುವುದೆಂದರೆ ನನ್ನ ನೆರೆಕೆರೆಯವರನ್ನು ಮರೆಯುವುದು. ನನ್ನ ಊರನ್ನು ಮರೆಯುವುದು ನಾನು ಬೆಳೆದು ಬಂದ ದಾರಿಯನ್ನು ಮರೆಯುವುದು. ನನ್ನ ಐಡೆಂಟಿಟಿಯನ್ನು ಮರೆಯುವುದು. ನಾನು ಇದೇ ಮಣ್ಣಿನಲ್ಲಿ ಹುಟ್ಟಿದೆ. ಬೆಳೆದೆ. ಇದೇ ಗಾಝಾದ ದಾರಿಯಲ್ಲಿ ನಡೆದ ನೆನಪುಗಳು ನನ್ನ ಒಳಗೆ ಇವೆ . ನಾನು ಇಲ್ಲಿಯೇ ನಡೆದಾಡಿದೆ. ಇಲ್ಲಿಯೇ ಉಸಿರಾಡಿದೆ. ನನ್ನ ಹೆತ್ತವರು ಇಲ್ಲಿಯೇ ಇದ್ದರು ಮತ್ತು ಪ್ರತಿಯೊಂದು ಸಂತೋಷದ ಕ್ಷಣದಲ್ಲೂ ನಾವೆಲ್ಲ ಇಲ್ಲಿಯ ಜೊತೆ ಸೇರುತ್ತಿದ್ದೆವು. ಆದ್ದರಿಂದ ನಾನು ಇಲ್ಲಿಯೇ ಇರಲು ಬಯಸಿದ್ದೇನೆ ಎಂದು ಹುದ ಶೇಕ್ ಎಂಬ ಯುವ ಪತ್ರಕರ್ತ ಬರೆದಿದ್ದಾರೆ. ಇವರು ಗಾಝಾದವರಾಗಿದ್ದು ಇವರ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ ಇವರ ಈ ಅನುಭವವನ್ನು ಅಲ್ ಜಝೀರ ವೆಬ್ ಪೋರ್ಟಲ್ ಪ್ರಕಟಿಸಿದೆ.
ಇಸ್ರೇಲಿ ಸೇನೆ ನಿನ್ನ ಮನೆಯನ್ನು ಅತಿಕ್ರಮಿಸಿದರೆ ನಿನ್ನ ವಿಧಿ ಏನು? ನೀನು ಎಲ್ಲಿಗೆ ಹೋಗುತ್ತೀಯ ಎಂದು ನನ್ನ ಗೆಳೆಯರು ಕೇಳ್ತಾ ಇದ್ದಾರೆ . ನಾನು ಏನು ಉತ್ತರಿಸಬೇಕು ಎಂದು ಆಲೋಚಿಸುತ್ತಿದ್ದೇನೆ. ಈ ನಗರವನ್ನು ತೊರೆಯುವುದು ನನಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಬರೆದಿದ್ದಾರೆ.
ಇಸ್ರೇಲಿನ ಸೇನಾ ಕಾರ್ಯಾಚರಣೆಯು ತೀವ್ರಗೊಳ್ಳುತ್ತಿದೆ. ಅವರ ಮಿಲಿಟರಿ ಟ್ಯಾಂಕ್ ಎಲ್ಲವನ್ನು ನಾಶ ಮಾಡುತ್ತಾ ಮುನ್ನುಗ್ಗುತ್ತಿದೆ. ಹತ್ತಿರದ ಊರಿನಲ್ಲಿ ಸೇನೆ ಈಗಾಗಲೇ ನಾಶ ಕಾರ್ಯದಲ್ಲಿ ತೊಡಗಿದೆ. ದಯವಿಟ್ಟು ಅಲ್ಲಿಂದ ಹೊರಟು ಹೋಗು ಎಂದು ನನ್ನ ಕುಟುಂಬ ಹೇಳುತ್ತಿದೆ ಎಂದು ಹುದಾ ಬರೆದಿದ್ದಾರೆ.
ದಿನಗಳ ಹಿಂದೆ ನಾನು ಎರಡು ಬ್ಯಾಗುಗಳನ್ನು ರೆಡಿ ಮಾಡಿದೆ. ಒಂದು ವೇಳೆ ಇಸ್ರೇಲ್ ಸೇನೆ ದಾಳಿ ಮಾಡಿ ನನ್ನನ್ನು ಹೊರ ಹಾಕಿದರೆ ವಸ್ತುಗಳನ್ನು ಕೊಂಡು ಹೋಗಬೇಕಲ್ಲ ಆದರೆ ಆ ಬಳಿಕ ನನಗೆ ಎರಡು ಬ್ಯಾಗುಗಳಲ್ಲಿ ಕೊಂಡು ಹೋಗುವುದಕ್ಕೆ ಏನೇನಿದೆ ಎಂದು ಆಲೋಚಿಸಿದೆ. ನನ್ನ ಪುಸ್ತಕಗಳು ನೋಟ್ ಬುಕ್ ಗಳು ನನ್ನ ಫೋಟೋ ಆಲ್ಬಮ್‌ಗಳು ನನ್ನ ಇನ್ನಿತರ ವಸ್ತುಗಳು ನನ್ನಿಷ್ಟದ ಸುಗಂಧ ನನ್ನ ಹೆಡ್ ಫೋನ್ ನನ್ನ ಫೋನ್ ಚಾರ್ಜರ್… ಏನೇನೆಲ್ಲ ಇವೆ. ಇವನ್ನೆಲ್ಲ ನಾನು ಬ್ಯಾಗಲ್ಲಿ ತುಂಬಿಸಿಕೊಂಡು ಹೋಗುವುದು ಸಾಧ್ಯವಾ? ಕೊಂಡು ಹೋಗಬೇಕೇ ಎಂದು ಆಲೋಚಿಸಿದೆ ಎಂದಾಕೆ ಮನ ತುಂಬಿ ಬರೆದಿದ್ದಾರೆ.
ಗಾಝಾದ ಸದ್ಯದ ಪರಿಸ್ಥಿತಿಯನ್ನು ಈ ಬರಹಗಳು ಹೇಳುತ್ತದೆ ಎಂದು ಸೋಶಿಯಲ್ ಮೀಡಿಯಾ ಬರೆದುಕೊಂಡಿದೆ.












