ಲೋಕಸಭೆ ಚುನಾವಣೆ| ದೋಷಪೂರಿತ ಇವಿಎಂಗಳ ಡೇಟಾ ಬಿಡುಗಡೆ ಮಾಡುವಂತೆ ಇಸಿಗೆ ಕಾಂಗ್ರೆಸ್‌ ಸಂಸದ ಆಗ್ರಹ

0
202

ಸನ್ಮಾರ್ಗ ವಾರ್ತೆ

ಲೋಕಸಭೆ ಚುನಾವಣೆಯಲ್ಲಿ ದೋಷ ಕಂಡುಬಂದಿರುವ ಇವಿಎಂಗಳ ಡೇಟಾವನ್ನು ಬಿಡುಗಡೆ ಮಾಡುವಂತೆ ಜೋರ್ಹತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಸದ ಗೌರವ್ ಗೊಗೊಯ್ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಇವಿಎಂಗಳನ್ನು ಹ್ಯಾಕ್ ಮಾಡಲಾಗುವ ಬಗ್ಗೆ ಮತ್ತು ಇವಿಎಂಗಳ ದೋಷಗಳ ಬಗ್ಗೆ ಲೋಕಸಭೆ ಚುನಾವಣೆಗೂ ಮುನ್ನವೇ ಹಲವಾರು ವಿಪಕ್ಷ ನಾಯಕರುಗಳು ಪ್ರಶ್ನೆ ಎತ್ತಿದ್ದರು. ಆದರೆ ಇತ್ತೀಚೆಗೆ ಟೆಸ್ಲಾ ಮುಖ್ಯಸ್ಥ, ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿದೆ ಎಂದು ಎಕ್ಸ್ ಪೋಸ್ಟ್ ಮಾಡಿದ ಬಳಿಕ ಇವಿಎಂ ದೋಷಗಳ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿದ್ದ ಎಕ್ಸ್ (ಟ್ವಿಟ್ಟರ್) ಮಾಲೀಕ ಎಲಾನ್ ಮಸ್ಕ್, “ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ನಿಲ್ಲಿಸಬೇಕು. ಇವಿಎಂ ಮಾನವರು ಅಥವಾ ಎಐನಿಂದ ಹ್ಯಾಕ್ ಆಗುವ ಅಪಾಯ ಕಡಿಮೆಯಾಗಿದ್ದರೂ ಕೂಡಾ ಅಪಾಯ ಇನ್ನೂ ಹೆಚ್ಚಾಗಿದೆ” ಎಂದು ಹೇಳಿದ್ದರು.

ಅದಾದ ಬಳಿಕ “ಇದು ಅಸಂಬದ್ಧ ಊಹಾಪೋಹ ಮತ್ತು ಭಾರತೀಯ ಚುನಾವಣೆಗಳ ವಿಶ್ವಾಸಾರ್ಹತೆಯನ್ನು ಕೆಡಿಸುವ ಪ್ರಯತ್ನವಾಗಿದೆ” ಎಂದು ಚುನಾವಣಾ ಆಯೋಗ ಆರೋಪಿಸಿದೆ.

“ನಾವು ನಿಮಗೆ ಸವಾಲು ಹಾಕುತ್ತೇವೆ, ಎಲಾನ್ ಮಸ್ಕ್ ಅವರೆ ಭಾರತಕ್ಕೆ ಬಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಮಹಾನ್ ಚುನಾವಣೆಯಲ್ಲಿ ಬಳಸಲಾದ ಇವಿಎಂಗಳ ಹ್ಯಾಕಿಂಗ್ ಹೇಗೆ ಆಗುತ್ತದೆ ಎಂದು ತೋರಿಸಿ” ಎಂದು ಚುನಾವಣಾ ಆಯೋಗ ಸವಾಲೆಸೆದಿದೆ.

https://x.com/GauravGogoiAsm/status/1802612296507867568?t=L4zmhWQ5OJEEG3DMeXz9aA&s=19

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಸೋಮವಾರ ಎಕ್ಸ್‌ ಪೋಸ್ಟ್ ಮಾಡಿರುವ ಸಂಸದ ಗೌರವ್ ಗೊಗೊಯ್, “ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ತಪ್ಪಾಗಲಾರದು ಎಂದು ಪರಿಗಣಿಸುವ ಮೊದಲು ಭಾರತದ ಚುನಾವಣಾ ಆಯೋಗವು ಚುನಾವಣೆಯ ಉದ್ದಕ್ಕೂ ಎಷ್ಟು ಎಲೆಕ್ಟ್ರಾನಿಕ್ ಮತಯಂತ್ರಗಳು ದೋಷಪೂರಿತವಾಗಿವೆ ಎಂಬ ಮಾಹಿತಿಯನ್ನು ನೀಡಬೇಕು” ಎಂದು ಆಗ್ರಹಿಸಿದ್ದಾರೆ.

“ಎಷ್ಟು ಯಂತ್ರಗಳು ತಪ್ಪಾದ ಸಮಯ, ದಿನಾಂಕ, ಮತಗಳನ್ನು ನೋಂದಾಯಿಸಿವೆ ಎಂದು ತೋರಿಸಿವೆ? ಎಷ್ಟು ಇವಿಎಂಗಳ ಘಟಕಗಳನ್ನು ಅಂದರೆ ಎಣಿಕೆ ಘಟಕ, ಮತಯಂತ್ರ ಬದಲಾಯಿಸಲಾಗಿದೆ? ಅಣಕು ಮತದಾನದ ಸಮಯದಲ್ಲಿ ಎಷ್ಟು ಇವಿಎಂಗಳು ದೋಷಪೂರಿತವಾಗಿವೆ” ಎಂದು ಗೌರವ್ ಗೊಗೊಯ್ ಪ್ರಶ್ನಿಸಿದ್ದಾರೆ.

“ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ, ಈ ಯಂತ್ರಗಳು ತಪ್ಪಾದ ಫಲಿತಾಂಶಗಳನ್ನು ತೋರಿಸಿವೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ಚುನಾವಣಾ ಆಯೋಗವು ಮೇಲ್ಕಂಡ ದತ್ತಾಂಶವನ್ನು ಹೊರತರುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಸಾರ್ವಜನಿಕರಿಗೆ ತಿಳಿದುಕೊಳ್ಳುವ ಹಕ್ಕಿದೆ” ಎಂದು ಹೇಳಿದ್ದಾರೆ.