ಸನ್ಮಾರ್ಗ ವಾರ್ತೆ
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ, ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ, 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 148 ಸದಸ್ಯರ ಬಹುಮತದ ಗಡಿಯನ್ನು ದಾಟಿ ಮುನ್ನಡೆಯುತ್ತಿದೆ. ಇದರೊಂದಿಗೆ ಬಿಜೆಪಿ ದೀದಿಯ ‘ಖೇಲಾ ಶೇಷ್’ (ಆಟ ಮುಗಿದಿದೆ) ಎಂದು ಘೋಷಿಸುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗ ಮತ್ತು ಬಿಜೆಪಿ ಒಂದಾಗಿ ಒಳಸಂಚು ನಡೆಸುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮತ ಎಣಿಕೆ ಕೇಂದ್ರಗಳಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗವು ಪಿತೂರಿ ನಡೆಸುತ್ತಿವೆ ಎಂದು ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುನ್ನಡೆ ಸಾಧಿಸುತ್ತಿರುವ ಕ್ಷೇತ್ರಗಳ ಮಾಹಿತಿಯನ್ನು ಆಯೋಗವು ಉದ್ದೇಶಪೂರ್ವಕವಾಗಿ ಮರೆಮಾಚುತ್ತಿದೆ ಎಂದು ಅವರು ಹೇಳಿದರು.
ಟಿಎಂಸಿ ಮುನ್ನಡೆ ಸಾಧಿಸುತ್ತಿರುವ 70 ರಿಂದ 100 ಸ್ಥಾನಗಳ ಮಾಹಿತಿಯನ್ನು ಆಯೋಗವು ಬಿಡುಗಡೆ ಮಾಡುತ್ತಿಲ್ಲ ಎಂದು ಮಮತಾ ಆರೋಪಿಸಿದರು. ಕಲ್ಯಾಣಿ ಸೇರಿದಂತೆ ಹಲವೆಡೆ ಮತಯಂತ್ರಗಳಲ್ಲಿ ಗಂಭೀರ ಅಕ್ರಮಗಳು ಕಂಡುಬಂದಿವೆ ಮತ್ತು ಕೆಲವು ಕಡೆಗಳಲ್ಲಿ ಮತ ಎಣಿಕೆಗೆ ಅಡ್ಡಿಪಡಿಸಲಾಗಿದೆ ಎಂದು ಅವರು ಬೆಟ್ಟು ಮಾಡಿದರು. ಟಿಎಂಸಿ ಕಾರ್ಯಕರ್ತರನ್ನು ಬೇಟೆಯಾಡಲು ಮತ್ತು ಪಕ್ಷದ ಕಚೇರಿಗಳನ್ನು ಅತಿಕ್ರಮಿಸಲು ಬಿಜೆಪಿ ಕೇಂದ್ರ ಪಡೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.
ಏತನ್ಮಧ್ಯೆ, ಬಂಗಾಳದ ಚುನಾವಣೆ ಐತಿಹಾಸಿಕ ಎಂದು ಬಿಜೆಪಿ ನಾಯಕತ್ವ ಪ್ರತಿಕ್ರಿಯಿಸಿದೆ. ಮತಗಳ ಹಂಚಿಕೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ರಾಜಕಾರಣಕ್ಕೆ ಸಂದ ಗೌರವ ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ. ಶ್ಯಾಮ ಪ್ರಸಾದ್ ಮುಖರ್ಜಿ ಜನಿಸಿದ ಮಣ್ಣು ಈಗ ಬಿಜೆಪಿಯೊಂದಿಗೆ ಇದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಹೇಳಿದ್ದಾರೆ.












