ಬೇಟೆಗೆ ಹೋದಾಗ ಪ್ರಮಾದವಶಾತ್ ಗುಂಡೇಟು ತಗುಲಿ ಗೆಳೆಯ ಮೃತ್ಯು: ಮನನೊಂದು ಮೂವರ ಆತ್ಮಹತ್ಯೆ

0
1092

ಸನ್ಮಾರ್ಗ ವಾರ್ತೆ

ಉತ್ತರಾಖಂಡ: ಉತ್ತರಾಖಂಡದಲ್ಲಿ ಬೇಟೆಯಾಡುವ ವೇಳೆ ಪ್ರಮಾದದಿಂದ ಗುಂಡು ಹಾರಿದ ಪರಿಣಾಮ ಗೆಳೆಯನೊಬ್ಬ ಮೃತಪಟ್ಟಿದ್ದು, ಅಪರಾಧ ಪ್ರಜ್ಞೆ ಕಾಡಿದ ಪರಿಣಾಮ ಬೇಟೆಯಾಡುವ ವೇಳೆ ತೆರಳಿದ್ದ ಮೂವರು ಗೆಳೆಯರು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿದೆ.

ಉತ್ತರಾಖಂಡದ ಟೆಹ್ರಿ ಜಿಲ್ಲೆಯ ಕುಂಡು ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಇಡೀ ಊರಿನ ಜನರು ದಿಗ್ಭ್ರಮೆಗೊಂಡಿದ್ದಾರೆ.

ಕಳೆದ ಶನಿವಾರ ರಾತ್ರಿ ಗೆಳೆಯರಾದ ಏಳು ಮಂದಿ ಕಾಡಿಗೆ ಬೇಟೆಗೆ ಹೊರಟಿದ್ದರು. 22 ವರ್ಷದ ರಾಜೀವ್‍ನ ಕೈಯಲ್ಲಿ ಬಂದೂಕು ಇತ್ತು. ನಡೆಯುವ ವೇಳೆ ಆತ ಎಡವಿಬಿದ್ದ ಪರಿಣಾಮವಾಗಿ ಹೆಗಲಲ್ಲಿದ್ದ ಬಂದೂಕಿನ ಟ್ರಿಗರ್ ಎಳೆಯಲ್ಪಟ್ಟು ಸಂತೋಷ್ ಎಂಬಾತ ಗುಂಡೇಟುಗೊಳಗಾಗಿದ್ದ. ಗುಂಡೇಟಿನ ಪರಿಣಾಮವಾಗಿ ಸಂತೋಷ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆಯಿಂದ ಭಯಭೀತಗೊಂಡು ರಾಜೀವ್ ಬಂದೂಕು ಎತ್ತಿಕೊಂಡು ಓಡಿ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ಆದರೆ ಘಟನೆಯಲ್ಲಿ ಗರಬಡಿದಂತಾಗಿದ್ದ ಗೆಳೆಯರಾದ ಸೋಬನ್, ಪಂಕಜ್, ಅರ್ಜುನ್ ಎಂಬವರು ವಿಷ ಸೇವಿಸಿದ್ದಾರೆ. ಕಾಡಿಗೆ ತೆರಳಿದ ಗುಂಪಿನಲ್ಲಿದ್ದ ಕಾಡಿನಿಂದ ರಾಹುಲ್ ಹಾಗೂ ಸುಮಿತ್ ಎಂಬವರು ಊರಿಗೆ ಓಡಿ ಬಂದು ಘಟನೆಯನ್ನು ತಿಳಿಸಿದ್ದಾರೆ.

ನಂತರ ವಿಷ ಸೇವಿಸಿದ ಪರಿಣಾಮವಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಮೂವರನ್ನು ಗ್ರಾಮಸ್ಥರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಪಂಕಜ್ ,ಅರ್ಜುನ್ ಮೃತಪಟ್ಟರೆಂದು ತಿಳಿದು ಬಂದಿದೆ.

ಗಂಭೀರಾವಸ್ಥೆಯಲ್ಲಿದ್ದ ಸೋಬನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಮೃತಪಟ್ಟಿದ್ದಾನೆ.

ಘಟನೆಯಿಂದ ವಿಚಲಿತರಾಗಿ ಭಯಭೀತಿಗೊಂಡು ಮತ್ತು ಅಪರಾಧ ಪ್ರಜ್ಞೆ ಕಾಡಿದ ಪರಿಣಾಮವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್‍ಡಿಎಂ ಪಿ.ಆರ್ ಚೌಹಾನ್ ಎಂಬವರು ಹೇಳಿದ್ದಾರೆ.

ಮೃತರ ಪೋಸ್ಟ್ ಮಾರ್ಟಂ ನಡೆಸಿ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದರು.

ಪ್ರಮಾದವಶಾತ್ ಉಂಟಾದ ಗುಂಡು ಹಾರಾಟದಿಂದ ಭಯಗೊಂಡು ಸ್ಥಳದಿಂದ ಪರಾರಿಯಾಗಿರುವ ರಾಜೀವ್ ನನ್ನು ಪೊಲೀಸರು ಹುಡುಕುತ್ತಿದ್ದಾರೆಂದು ತಿಳಿದು ಬಂದಿದೆ.