ಮಂಗಳೂರು | ಎಳನೀರು ಸೇವಿಸಿ 137 ಮಂದಿ ಅಸ್ವಸ್ಥ; ‘ಬೊಂಡ ಫ್ಯಾಕ್ಟರಿ’ ಬಂದ್‌ ಗೆ ಆದೇಶ

0
534

ಸನ್ಮಾರ್ಗ ವಾರ್ತೆ

ಮಂಗಳೂರು ನಗರದ ಹೊರವಲಯದ ಅಡ್ಯಾರ್‌ನಲ್ಲಿರುವ ‘ಬೊಂಡ ಫ್ಯಾಕ್ಟರಿ’ಯಲ್ಲಿ ಎಳನೀರು ಕುಡಿದು ಹಲವು ಮಂದಿ ಅಸ್ವಸ್ಥರಾಗಿದ್ದಾರೆ. ಇದುವರೆಗೆ ಒಟ್ಟು 137 ಜನರು ಅಸ್ವಸ್ಥರಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಂ ಮಾರಾಟ ಸಂಸ್ಥೆಯಾದ ‘ಬೊಂಡ ಫ್ಯಾಕ್ಟರಿ’ಯನ್ನು ಬಂದ್ ಮಾಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಆದೇಶಿಸಿದ್ದಾರೆ.

ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜಿಲ್ಲಾ ಅಂಕಿತ ಅಧಿಕಾರಿ ಆಹಾರ ಸುರಕ್ಷತೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಅವರನ್ನು ಒಳಗೊಂಡ ತಂಡ ಗುರುವಾರ ಅಡ್ಯಾರ್‌ನ ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಬೊಂಡ ನೀರು ಮತ್ತು ಇತರ ಆಹಾರ ಪದಾರ್ಥಗಳನ್ನು ಮಾರಾಟ ಮಾಡದಂತೆ ನೋಟಿಸ್ ನೀಡಿ ಬಂದ್ ಮಾಡಿಸಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, “ಬೊಂಡ ಫ್ಯಾಕ್ಟರಿಯ ಎಳನೀರು ಕುಡಿದು ಇದುವರೆಗೆ 137 ಮಂದಿ ಅಸ್ವಸ್ಥರಾಗಿರುವುದು ಬೆಳಕಿಗೆ ಬಂದಿದ್ದು, ಹೊರರೋಗಿಗಳಾಗಿ 84 ಮಂದಿ ಒಳರೋಗಿಗಳಾಗಿ 53 ಮಂದಿಗೆ ಚಿಕಿತ್ಸೆ ಪಡೆದಿದ್ದಾರೆ. ಇದುವರೆಗೆ 23 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸದ್ಯ ಮಂಗಳೂರು, ಬಂಟ್ವಾಳದ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ 30 ಮಂದಿಗೆ ಚಿಕಿತ್ಸೆ ಮುಂದುವರೆದಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

ಏಪ್ರಿಲ್ 8ರಂದು ಬೊಂಡ ಫ್ಯಾಕ್ಟರಿಯಿಂದ ಎಳನೀರು ಖರೀದಿ ಮಾಡಿ ಸೇವಿಸಿದ್ದರು. ಬಳಿಕ ಏಪ್ರಿಲ್ 9ರಿಂದ ವಾಂತಿ, ಬೇಧಿಯಾಗಿ ಅಸ್ವಸ್ಥರಾಗಿದ್ದರು. ಅಡ್ಯಾರ್​​ನಲ್ಲಿರುವ ಲ್ಯಾಂಡ್ಸ್ ಫ್ಲವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿ ಎಂಬ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಮ್ ಮಾರಾಟ ಮಾಡುವ ಸಂಸ್ಥೆಯಿಂದ ಅಡ್ಯಾರ್ ಕಣ್ಣೂರು ಮತ್ತು ತುಂಬೆ ಸುತ್ತಮುತ್ತಲಿನ ನಿವಾಸಿಗಳು ಲೀಟರ್ ಲೆಕ್ಕದಲ್ಲಿ ಎಳನೀರು ಖರೀದಿಸಿದ್ದರು. ಬಳಿಕ ಅದನ್ನು ಸೇವಿಸಿದ ಬಳಿಕ ವಾಂತಿ. ಬೇಧಿ, ಜ್ವರ ಮತ್ತು ತಲೆನೋವಿನಿಂದ ಬಳಲಿದ್ದರು.

ಬುಧವಾರದಂದು ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಇವರಿಗೆ ವಾಟ್ಸಪ್ ಮುಖಾಂತರ ದೂರು ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣವೇ ಇವರಿಬ್ಬರೂ ಅಡ್ಯಾರ್‌ನಲ್ಲಿರುವ ಬೊಂಡ ಫ್ಯಾಕ್ಟರಿಗೆ ಭೇಟಿ ನೀಡಿ, ಎಳನೀರಿನ ಸ್ಯಾಂಪಲನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ವಿಶ್ಲೇಷಣೆಗೆ ಕಳುಹಿಸಿದ್ದಾರೆ. ಇಡೀ ಫ್ಯಾಕ್ಟರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಶುಚಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here