ಮತದಾನದ ದಿನದಂದು ಟೂರ್ ಇಟ್ಟುಕೊಳ್ಳಬೇಡಿ

0
142

ಸನ್ಮಾರ್ಗ ವಾರ್ತೆ

✍️ ಅಮಾನ್

1.ಯಾರಿಗೆ ವೋಟು ಹಾಕ್ತೀರಿ?
2.ಯಾಕೆ ವೋಟು ಹಾಕ್ತೀರಿ?
3.ನಿಮ್ಮ ವೋಟಿನ ಬೆಲೆ ಏನು?

ಇವುಗಳಿಗೆ ಉತ್ತರಿಸುವುದಕ್ಕಿಂತ ಮೊದಲು ಒಂದು ಗಂಭೀರ ಪ್ರಶ್ನೆ ಇದೆ ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ ನಾಲ್ಕರಂದು ಚುನಾವಣೆ ನಡೆಯಲಿಕ್ಕಿದೆ. ನೀವೆಲ್ಲಿಗಾದರೂ ಟೂರ್ ಹೋಗುವ ಯೋಜನೆ ಹಾಕಿಕೊಂಡಿದ್ದೀರಾ? ಯಾರಾದರೂ ನಿಮಗೆ ಅಂತ ಆಫರ್ ನೀಡಿದ್ದಾರಾ? ಒಂದು ವೋಟಿನಿಂದ ಏನಾಗುತ್ತೆ ಎಂಬ ಭಾವ ನಿಮ್ಮಲ್ಲಿದೆಯಾ? ನಾವೇ ಟಿಕೆಟ್ ತೆಗೆದು ಕೊಡ್ತೀವಿ, ಆರಾಮವಾಗಿ ಟೂರ್ ಹೋಗಿ ಬನ್ನಿ ಎಂದು ಯಾರಾದರೂ ನಿಮ್ಮನ್ನು ಹುರಿದುಂಬಿಸಿದ್ದಾರಾ? ವಾಹನದ ಏರ್ಪಾಟು ನಾವೇ ಮಾಡುತ್ತೇವೆ ಎಂದು ಹೇಳಿದ್ದಾರಾ?

ಹಾಗಂತ, ಟೂರ್ ಧಾರ್ಮಿಕ ಕ್ಷೇತ್ರಕ್ಕೂ ಇರಬಹುದು, ಪ್ರವಾಸಿ ತಾಣಕ್ಕೂ ಇರಬಹುದು. ಎಲ್ಲಿಗಾದರೂ ಸರಿ ನಿಮ್ಮನ್ನು ಕರೆದುಕೊಂಡು ಹೋಗುವ ಆಫರ್ ಬಂದಿದೆಯಾ?

ಯಾಕೆ ಈ ಪ್ರಶ್ನೆ ಅಂದ್ರೆ ಈ ಮೊದಲಿನ ಚುನಾವಣೆಯ ಸಮಯದಲ್ಲಿ ಇಂತಹ ಟೂರ್‌ಗಳು ನಡೆದಿವೆ. ಧಾರ್ಮಿಕ ಕ್ಷೇತ್ರಕ್ಕೋ ಪ್ರವಾಸಿ ತಾಣಕ್ಕೋ ಕರೆದೊಯ್ಯುವ ಆಫರ್‌ಗಳೊಂದಿಗೆ ಕೆಲವರು ಜನಸಾಮಾನ್ಯ ಮುಸ್ಲಿಮರನ್ನು ಸಂಪರ್ಕಿಸಿದ್ದಾರೆ. ಈ ಆಫರ್‌ಗಳ ಹಿಂದಿನ ಮರ್ಮ ಗೊತ್ತಿಲ್ಲದೆ ಟೂರ್ ಹೋದವರೂ ಇದ್ದಾರೆ. ಅಲ್ಲದೆ ಧಾರ್ಮಿಕ ಕ್ಷೇತ್ರಕ್ಕೆ ಟೂರ್ ಅಂದಾಗ ಸಹಜವಾಗಿ ಆಸಕ್ತಿ ಮೂಡುತ್ತದೆ. ಎಷ್ಟೋ ಸಮಯದಿಂದ ಕನಸು ಕಾಣ್ತಾ ಇದ್ದ ಜಾಗಕ್ಕೆ ಟೂರ್ ಹೋಗುವ ಅವಕಾಶ ಸಿಗುವಾಗ ಯಾಕೆ ಬಿಡಬೇಕು ಎಂದೂ ಅನಿಸುತ್ತದೆ. ಅಲ್ಲದೆ ಉಚಿತವಾಗಿ ಕರೆದೊಯ್ಯುತ್ತಾರೆ ಅಂದ ಮೇಲೆ ಯಾಕೆ ತಡ ಮಾಡಬೇಕು ಎಂದು ಅನಿಸುತ್ತದೆ. ಈ ವೋಟಿಗಿಂತ ಧಾರ್ಮಿಕ ಕ್ಷೇತ್ರಕ್ಕೆ ಹೋಗುವುದೇ ಪುಣ್ಯದಾಯಕ ಎಂಬ ಭಾವವೂ ಬರುತ್ತೆ.

ಆದರೆ ಇದೊಂದು ಸಂಚು. ಮುಸ್ಲಿಮರ ಮತ ಚಲಾವಣೆಯಾಗದಂತೆ ತಡೆಯುವ ರಾಜಕೀಯ ಸಂಚು. ಆದರೆ ಜನಸಾಮಾನ್ಯರಿಗೆ ಇದು ಅನೇಕ ಬಾರಿ ಗೊತ್ತಾಗುವುದಿಲ್ಲ. ಇದರ ಹಿಂದೆ ರಾಜಕೀಯ ಲೆಕ್ಕಾಚಾರ ಇರುತ್ತದೆ. ಮುಸ್ಲಿಮರ ಮತಗಳು ಚಲಾವಣೆಯಾಗದಂತೆ ತಡೆಯುವ ಷಡ್ಯಂತ್ರ ಇದು. ಮುಸ್ಲಿಂ ಬಹುಸಂಖ್ಯಾತ ಏರಿಯಾಗಳನ್ನು ಟಾರ್ಗೆಟ್ ಮಾಡಿ ರಾಜಕೀಯದ ಮಂದಿ ಇಂತಹ ಸಂಚು ಹೆಣೆಯುತ್ತಾರೆ. ಇದರ ಜೊತೆಗೇ ಬಡವರಿಗೆ ಹಣದ ಆಮಿಷ ತೋರಿಸಿ ವೋಟರ್ ಐಡಿ ಪಡಕೊಳ್ಳುವುದೂ ಇದೆ. ಮತದಾನದ ಮರುದಿನ ವೋಟರ್ ಐಡಿಯನ್ನು ಹಿಂತಿರುಗಿಸುವುದು ಇದೆ.

ಆದ್ದರಿಂದ ಒಂದಿಷ್ಟು ಜಾಗರೂಕತೆಯಿಂದ ಇರಿ. ಎಲ್ಲಿಗೇ ಆಗಲಿ ಟೂರ್ ಹೋಗುವುದಾದರೆ ಏಪ್ರಿಲ್ 26 ಮತ್ತು ಮಾರ್ಚ್ ನಾಲ್ಕರ ಮತದಾನಕ್ಕೆ ಅಡಚಣೆಯಾಗದಂತೆ ದಿನಾಂಕ ನಿಗದಿಪಡಿಸಿಕೊಳ್ಳಿ. ಯಾವ ಕಾರಣಕ್ಕೂ ಮತದಾನದಿಂದ ತಪ್ಪಿಸಿಕೊಳ್ಳಬೇಡಿ. ಈಗ ಶಾಲಾ ರಜೆ ಕೂಡಾ ಇದೆ. ಮಕ್ಕಳು ಅಲ್ಲಿಗೆ ಹೋಗೋಣ ಇಲ್ಲಿಗೆ ಹೋಗೋಣ ಅಂತ ಹೆತ್ತವರನ್ನು ಒತ್ತಾಯಿಸುತ್ತಿರುತ್ತಾರೆ. ಆದರೆ ಮಕ್ಕಳ ಬೇಡಿಕೆಗೆ ಸ್ಪಂದಿಸುವ ಸಾಮರ್ಥ್ಯ ಎಷ್ಟೋ ಹೆತ್ತವರಲ್ಲಿ ಇರುವುದಿಲ್ಲ. ಅಂತಹವರನ್ನು ಈ ಆಫರ್‌ಗಳು ಮರಳು ಮಾಡುತ್ತವೆ. ಹಾಗೆಯೇ ಆರ್ಥಿಕವಾಗಿ ಸಮರ್ಥರಾಗಿರುವವರು ಈ ಎರಡೂ ದಿನಾಂಕಗಳಂದು ಟೂರ್ ಇಟ್ಟುಕೊಳ್ಳಲೇ ಬೇಡಿ.

ಚುನಾವಣೆ ಎಂಬುದು ನಮಗೆ ಬೇಕಾದವರನ್ನು ಆಯ್ಕೆ ಮಾಡುವುದಕ್ಕಿರುವ ಕಟ್ಟ ಕಡೆಯ ಆಯುಧ. ನನ್ನ ಒಂದು ವೋಟಿನಿಂದ ಏನಾಗುತ್ತೆ ಎಂಬ ಉದಾಸೀನ ಭಾವ ಬೇಡ. ನಿಮ್ಮಂತೆ ಒಬ್ಬೊಬ್ಬರು ಆಲೋಚಿಸುತ್ತಾ ಹೋದರೆ ಅದುವೇ ದೊಡ್ಡ ಮೊತ್ತವಾಗುತ್ತದೆ. ಮಾತ್ರವಲ್ಲ ಗೆಲ್ಲಬೇಕಾದ ಅಭ್ಯರ್ಥಿ ಸೋಲುವುದಕ್ಕೂ ಅದು ಕಾರಣವಾಗಬಹುದು. ಆ ಬಳಿಕ ಚಿಂತಿಸಿ ಫಲವು ಇಲ್ಲ.

LEAVE A REPLY

Please enter your comment!
Please enter your name here