ಪತ್ರಕರ್ತ ಪ್ರದೀಶ್.ಎಚ್.ಮರೋಡಿ ಅವರಿಗೆ ಪ.ಗೋ. ಪ್ರಶಸ್ತಿ

0
334

ಸನ್ಮಾರ್ಗ ವಾರ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2020ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ಪ್ರಜಾವಾಣಿ ದಿನ ಪತ್ರಿಕೆಯ ಮಂಗಳೂರಿನ ವರದಿಗಾರ ಪ್ರದೀಶ್.ಎಚ್.ಮರೋಡಿ ಆಯ್ಕೆಯಾಗಿದ್ದಾರೆ.

2020ರ ಜೂನ್ 25ರಂದು ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಪ್ರಕಟವಾದ ಪತ್ರಕರ್ತ ಪ್ರದೀಶ್.ಎಚ್.ಮರೋಡಿ ಅವರ ‘ಕೇಳುತ್ತಿಲ್ಲ ಮಲೆಯ ಮಕ್ಕಳ ಅಳಲು ‘ಎಂಬ ವರದಿಯು ಪ್ರತಿಷ್ಠಿತ ಪ.ಗೋ. ಪ್ರಶಸ್ತಿಗೆ ಆಯ್ಕೆಯಾಗಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ, ಸಂಶೋಧಕರು ಹಾಗೂ ಪುತ್ತೂರು ಡಾ.ಶಿವರಾಮ ಕಾರಂತರ ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಡಾ. ಸುಂದರ ಕೇನಾಜೆ, ಮತ್ತು ಮಂಗಳೂರು ವಿವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಡಾ.ಸೌಮ್ಯ ಕೆ.ಬಿ.ಕಿಕ್ಕೇರಿ ನೇತೃತ್ವದ ಆಯ್ಕೆ ಸಮಿತಿಯು ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ.

ಪ.ಗೋ.ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 30ರಂದು ಬೆಳಗ್ಗೆ 11:00ಕ್ಕೆ ಮಂಗಳೂರು ಪತ್ರಿಕಾ ಭವನದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರಶಸ್ತಿ ಪ್ರದಾನ ಮಾಡಲಿರುವರು ಎಂಬುದಾಗಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.