ಬಂದಿದ್ದನ್ನೆಲ್ಲಾ ಫಾರ್ವರ್ಡ್ ಮಾಡುವ ಖಯಾಲಿ ಇದ್ದರೆ ಇರಲಿ ಎಚ್ಚರ: ಮಂಗಳೂರು ಪೊಲೀಸರ ನಿಗಾದಲ್ಲಿದೆ ಸಾಮಾಜಿಕ ಜಾಲತಾಣ ಖಾತೆಗಳು

0
277

ಪೊಲೀಸರ ಮಾನಿಟರಿಂಗ್ ನಿರಂತರ ಮತ್ತು ನಿಷ್ಪಕ್ಷಪಾತವಾಗಿರಲಿ: ಮುನೀರ್ ಕಾಟಿಪಳ್ಳ

ಮಂಗಳೂರು: ನಿಮ್ಮ ವಾಟ್ಸಾಪ್, ಫೇಸ್ ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದನ್ನೆಲ್ಲಾ ಫಾರ್ವರ್ಡ್ ಮಾಡುವ ಮುನ್ನ ಅಭ್ಯಾಸವಿದ್ದರೆ ದಯವಿಟ್ಟು ಈ ಸುದ್ದಿಯನ್ನು ಓದಲೇಬೇಕು. ಯಾಕೆಂದರೆ ನೀವು ಅದರಿಂದಲೇ ಜೈಲು ಪಾಲಾಗುವ ಪರಿಸ್ಥಿತಿ ಬಂದೊದಗಬಹುದು.

ಹಿಜಾಬ್ ವಿಚಾರದಿಂದ ಹಿಡಿದು ಸದ್ಯ ಶಿವಮೊಗ್ಗದಲ್ಲಿ ನಡೆದ ಬೆಳವಣಿಗೆಗಳ ಬಳಿಕ ಸಮಾಜದಲ್ಲಿ ಕೋಮು ಸಾಮರಸ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಿರುವ ಮಂಗಳೂರು ಪೊಲೀಸ್ ಆಯುಕ್ತರು, ತಮ್ಮ ಕಚೇರಿಯಲ್ಲೇ ಸುಸಜ್ಜಿತವಾದ ‘ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಕಾರ್ಯಾರಂಭಿಸಿದೆ.

ಈಗಾಗಲೇ 341 ರಾಜಕೀಯ, 234 ಧಾರ್ಮಿಕ, 87 ಜಾತಿ ಸಂಘಟನೆ, 20 ಮಹಿಳಾ ಸಂಘಟನೆ, 135 ವಿದ್ಯಾರ್ಥಿ ಸಂಘಟನೆ, 77 ಕಾರ್ಮಿಕ ಸಂಘಟನೆ, 170 ಇತರ ಸಂಘಟನೆಗಳಿಗೆ ಸೇರಿದ ಒಟ್ಟು 1,064 ಖಾತೆಗಳ ಮೇಲೆ ನಿಗಾ ಇರಿಸಿರುವ ಮಂಗಳೂರು ಪೊಲೀಸರು, ಆನ್‌ಲೈನ್‌ ಮೀಡಿಯಾ ಡೆಸ್ಕ್‌ನ 55 ಆನ್‌ಲೈನ್‌ ಮೀಡಿಯಾ ಪೋರ್ಟಲ್‌ಗಳು, 5 ಮೀಡಿಯಾ ಕ್ಲಬ್, 14 ಆನ್ ಲೈನ್ ನ್ಯೂಸ್ ಚಾನೆಲ್, 65 ರೆಗ್ಯುಲರ್ ವೆಬ್‌ ನ್ಯೂಸ್ ಚಾನೆಲ್‌ಗಳ ಸಹಿತ 139 ಖಾತೆಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಮಾನಿಟರಿಂಗ್ ಕೂಡಾ ನಡೆಸುತ್ತಿದ್ದಾರೆ.

24X7 ಮಾದರಿಯಲ್ಲಿ ಕಾರ್ಯಾಚರಿಸುವ ಈ ಘಟಕದಲ್ಲಿ ಮಾನಿಟರಿಂಗ್, ತೊಡಗಿದ್ದಾರೆ. ವಿವಿಧ ಸಂಘಟನೆ, ಆನ್‌ಲೈನ್‌ ಮೀಡಿಯಾ, ಖಾಸಗಿ ಖಾತೆ, ಲಾ ಆ್ಯಂಡ್ ಆರ್ಡರ್ ಡೆಸ್ಕ್‌ಗಳ ಮೂಲಕ ವಾಟ್ಸ್ ಆ್ಯಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವೆಬ್‌ಸೈಟ್, ಟೆಲಿಗ್ರಾಂ, ಆನ್‌ಲೈನ್‌ ಮೀಡಿಯಾ, ಪ್ರಿಂಟ್ ಮೀಡಿಯಾ, ವಿಶುವಲ್ ಮೀಡಿಯಾ ಮೊದಲಾದವುಗಳ ಮೂಲಕ ಹರಿದಾಡುವ ಸುಳ್ಳು ಸುದ್ದಿಗಳನ್ನು ಕಲೆ ಹಾಕಲಾಗುತ್ತದೆ. ಜೊತೆಗೆ ಯಾರಿಂದ, ಯಾರಿಗೆ ಸುದ್ದಿಗಳು ರವಾನೆಯಾಗುತ್ತವೆ. ಸುಳ್ಳು ಸುದ್ದಿಗಳನ್ನು ಫಾರ್ವಡ್, ಲೈಕ್, ಶೇರ್ ಮಾಡುವವರನ್ನು ಪತ್ತೆ ಹಚ್ಚಿ ಕ್ರಮ ವಹಿಸಲು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ ಸೂಚನೆ ಕೂಡಾ ನೀಡಿದ್ದಾರೆ.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ ಸೇರಿದಂತೆ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ನಾಯಕ್‌ರವರ ಮೇಲ್ವಿಚಾರಣೆಯಲ್ಲಿ ನುರಿತ ತಾಂತ್ರಿಕ ಸಿಬ್ಬಂದಿ, ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳನ್ನು ಗಮನಿಸುತ್ತಾ, ದ್ವೇಷ ಪೂರಿತ, ಕೋಮು ಸಂಘರ್ಷಕ್ಕೆ ಕಾರಣವಾಗುವ ಪೋಸ್ಟ್‌ಗಳನ್ನು ಮೂಲದಲ್ಲೇ ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ನಗರದ ಸೈಬರ್ ಅಪರಾಧಗಳ ಪೊಲೀಸ್ ಠಾಣೆ ಹಾಗೂ ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಅಪರಾಧ ಠಾಣೆ ಕೆಲವು ತಿಂಗಳ ಹಿಂದೆ ವಿಲೀನಗೊಂಡು ಸೆನ್ ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೇರಿದೆ. ಇದೀಗ ‘ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್’ ಆರಂಭಗೊಂಡಿದೆ. ಆದರೆ ಇವೆರಡೂ ಘಟಕಗಳು ಕೂಡ ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿವೆ.

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಜೊತೆಗೆ, ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಶಾಂತಿ ಭಂಗ, ಕೋಮು ಸಾಮರಸ್ಯ ಕದಡುವವರನ್ನು ಪತ್ತೆಹಚ್ಚುವ ಸಲುವಾಗಿ ಈ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಆರಂಭಿಸಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ ತಿಳಿಸಿದ್ದಾರೆ.

ಪೊಲೀಸರ ಮಾನಿಟರಿಂಗ್ ಕುರಿತಾಗಿ ಸನ್ಮಾರ್ಗ.ಕಾಮ್ ನೊಂದಿಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ, ಪೋಲೀಸರ ಈ ಮಾನಿಟರಿಂಗ್ ನಡೆಯುವುದು ಒಳ್ಳೆಯದೇ. ಆದರೆ ಕೆಲವೊಂದು ಘಟನೆಗಳು ಸಂಭವಿಸಿದಾಗ ಮಾತ್ರ ಕಾರ್ಯ ಸುದ್ದಿಯಾಗುವ ಈ ಕ್ರಮ ಈ ಹಿಂದೆ ಸರಿಯಾಗಿ ನಡೆದಿಲ್ಲ. ಪೊಲೀಸರ ಈ ಕ್ರಮ ಸರಕಾರದ ಮನೋಧರ್ಮಕ್ಕನುವಾಗಿ ನಡೆಯುವ ಬದಲು ಅದು ನಿಷ್ಪಕ್ಷಪಾತವಾಗಿರಬೇಕು ಎಂಬ ಆಗ್ರಹ ನಮ್ಮದು. ಅದು ಸರಿಯಾಗಿ ನಡೆದರೆ ನಮ್ಮ ಸಹಮತ ಇದೆ. ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಾಗೂ ದ್ವೇಷ ಹರಡುವ ಬಲಪಂಥೀಯ ಕೆಲವು ಫೇಸ್ ಬುಕ್ ಪೇಜ್ ಬಗ್ಗೆ ರಾಜ್ಯದ ವಿವಿಧ ಕಡೆ ಸಂಬಂಧಪಟ್ಟವರಿಗೆ ದೂರು ನೀಡಿದ್ದೆವು. ಆದರೆ ಅವರು ನಮ್ಮ ಬಳಿಯಲ್ಲೇ ದಾಖಲೆ ಕೇಳುತ್ತಾರೆಯೇ ಹೊರತು ಸರಿಯಾದ ಕ್ರಮ ಈವೆರೆಗೆ ಆಗಿಲ್ಲ. ಅಲ್ಲದೇ, ಅದು ಫೇಸ್ ಬುಕ್ ನಿಯಂತ್ರಣದಲ್ಲಿದೆ ಎಂದು ಹೇಳುತ್ತಾರೆ. ಫೇಕ್ ಐಡಿಗಳನ್ನು ಬಳಸಿ ಸಮಾಜದ ಸ್ವಾಸ್ಥ್ಯ ಹಾಳುಗೆಡವುದನ್ನು ಪತ್ತೆ ಮಾಡಬೇಕು. ಜೊತೆಗೆ ಪೊಲೀಸರು ಕೇವಲ ಅಗತ್ಯವಿದ್ದಾಗ ಮಾತ್ರ ಒಂದು ವರ್ಗದ ಜನರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳದೆ ನಿರಂತರವಾಗಿ ಮತ್ತು ನಿಷ್ಪಕ್ಷವಾಗಿರಬೇಕು ಎಂದು ಹೇಳಿದ್ದಾರೆ.