ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ್ ರ‌್ಯಾಲಿ ಸ್ಥಳದ ಬಳಿ ಬೀಡಾಡಿ ದನಗಳನ್ನು ಅಟ್ಟಿದ ರೈತರು: ವಿಡಿಯೋ ವೈರಲ್

0
204

ಸನ್ಮಾರ್ಗ ವಾರ್ತೆ

ಲಕ್ನೋ: ಲಕ್ನೋದಿಂದ ಕೇವಲ 40 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ರೈತರು ತಮ್ಮ ಪ್ರದೇಶದಲ್ಲಿನ ಬೀಡಾಡಿ ದನಗಳ ಹಾವಳಿಯನ್ನು ಎತ್ತಿ ಹಿಡಿಯಲು ನಿನ್ನೆ ಮುಂಜಾನೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ರ‌್ಯಾಲಿ ನಡೆಯುವ ಸ್ಥಳದ ಬಳಿಯ ತೆರೆದ ಮೈದಾನದಲ್ಲಿ ನೂರಾರು ಜಾನುವಾರುಗಳನ್ನು ಅಟ್ಟಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ರೈತ ನಾಯಕ ರಮಣದೀಪ್ ಸಿಂಗ್ ಮಾನ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ, ನೂರಾರು ಬೀಡಾಡಿ ದನಗಳು ತೆರೆದ ಮೈದಾನದಲ್ಲಿರುವುದು ಕಂಡುಬಂದಿದೆ.

ಬಾರಾಬಂಕಿಯಲ್ಲಿ ಯೋಗಿ ಆದಿತ್ಯನಾಥ್‌ರವರ ಕಾರ್ಯಕ್ರಮಕ್ಕೂ ಮುನ್ನ ರೈತರು ನೂರಾರು ಬೀಡಾಡಿ ದನಗಳನ್ನು ಹೊಲಗಳಿಂದ ಓಡಿಸಿ ರ‌್ಯಾಲಿ ಸ್ಥಳದ ಬಳಿ ಬಿಟ್ಟಿದ್ದರು. ಈ ಬೀಡಾಡಿ ದನಗಳನ್ನು ನಿಭಾಯಿಸಲು ರೈತರಿಗೆ ಬೇರೆ ದಾರಿ ಕಾಣಲಿಲ್ಲ ಎಂದು ಮಾನ್ ಟ್ವೀಟ್ ಮಾಡಿದ್ದಾರೆ.

“ಐದು ವರ್ಷಗಳಿಂದ ಯುಪಿ ಸರ್ಕಾರಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರ್ಯಕ್ರಮಕ್ಕೆ ಮೊದಲು ಬಿಜೆಪಿ ಯಾವ ಪರಿಹಾರವನ್ನು ನೀಡುತ್ತದೆ ಎಂಬುದನ್ನು ರೈತರು ನೋಡಬೇಕೆಂದು ಬಯಸಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಅಥವಾ ಬಾರಾಬಂಕಿ ಆಡಳಿತದಿಂದ ತಕ್ಷಣದ ಪ್ರತಿಕ್ರಿಯೆ ಬಾರದಿದ್ದರೂ, ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡರೆ ಯುಪಿಯಲ್ಲಿ ಬಿಡಾಡಿ ದನಗಳ ಸಮಸ್ಯೆಯನ್ನು ಪರಿಹರಿಸುವುದಾಗಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಭರವಸೆಯ ವೀಡಿಯೊ ಕ್ಲಿಪ್‌ ಅನ್ನು ಯೋಗಿ ಆದಿತ್ಯನಾಥ್‌ ಹಂಚಿಕೊಂಡಿದ್ದಾರೆ.

“ಮಾರ್ಚ್ 10ರ ನಂತರ ಬೀಡಾಡಿ ದನಗಳಿಂದ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಹೊಸ ವ್ಯವಸ್ಥೆಯನ್ನು ಮಾಡಲಾಗುವುದು. ಹಾಲು ನೀಡದ ಪ್ರಾಣಿಗಳ ಸಗಣಿಯಿಂದ ಆದಾಯವನ್ನು ಗಳಿಸುವ ವ್ಯವಸ್ಥೆಯನ್ನು ಮಾಡಲಾಗುವುದು” ಎಂದು ಪ್ರಧಾನಿ ಮೋದಿಯವರು ಭಾನುವಾರ ರ‌್ಯಾಲಿಯಲ್ಲಿ ಹೇಳಿದ್ದರು.

ಮುಖ್ಯಮಂತ್ರಿಯವರ ಟ್ವೀಟ್‌ ಅನ್ನು ಉಲ್ಲೇಖಿಸಿ ಪ್ರತಿಪಕ್ಷ ಕಾಂಗ್ರೆಸ್ ಟ್ವೀಟ್‌ನಲ್ಲಿ ತಿರುಗೇಟು ನೀಡಿದ್ದು, “ಕಳೆದ ಐದು ವರ್ಷಗಳಿಂದ ಬಿಜೆಪಿ ಸರ್ಕಾರ ಈ ವಿಷಯವನ್ನು ನಿರ್ಲಕ್ಷಿಸಿದೆ. ಚುನಾವಣೆಗೂ ಮುನ್ನ ಬಿಡಾಡಿ ದನಗಳನ್ನು ನೆನಪಿಸಿಕೊಳ್ಳಲು ಪ್ರಧಾನಿ ಹಾಗೂ ಮುಖ್ಯಮಂತ್ರಿಯವರಿಗೆ ಸಮಯ ಲಭಿಸಿತೆ?” ಎಂದು ಕಾಂಗ್ರೆಸ್ ಅಣಕಿಸಿದೆ.

ಬಾರಾಬಂಕಿಯಲ್ಲಿ ಬಿಡಲಾದ ಪ್ರಾಣಿಗಳ ವೀಡಿಯೊವನ್ನು ಸಮಾಜವಾದಿ ಪಾರ್ಟಿ ಎಂಎಲ್‌ಸಿ ರಾಜೇಶ್ ಯಾದವ್ ಅವರು ಸೋಮವಾರ ಹಂಚಿಕೊಂಡಿದ್ದು, ಇದು ಸಾಕಷ್ಟು ವೈರಲ್ ಆಗಿದೆ. ಆಡಳಿತವು ಕಾರ್ಯಪ್ರವೃತ್ತವಾಗಿದೆ, ಎಲ್ಲಾ ಬೀಡಾಡಿ ದನಗಳನ್ನು ಸಭಾ ಸ್ಥಳದಿಂದ ತೆರವುಗೊಳಿಸಲಾಗಿದೆ. ಇದು ಸಮಾಜವಾದಿ ಪಾರ್ಟಿಯ ಪಿತೂರಿ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಮಂಗಳವಾರ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಬಾರಾಬಂಕಿ ಪೊಲೀಸರು ಹೇಳಿದ್ದಾಗಿ ರೈತ  ರಮಣದೀಪ್ ಸಿಂಗ್ ಮಾನ್ ಟ್ವೀಟ್ ಮಾಡಿದ್ದಾರೆ.