ಮದುವೆಯನ್ನು ಮುಂದೂಡಿ ಕೊರೋನಾ ವಾರ್ಡಿನಲ್ಲಿ ಸೇವಾ ನಿರತರಾದ ಡಾ.ಶಿಫಾ: ಮದುವೆಯ ಉಡುಪು ಧರಿಸಿ ಕರ್ತವ್ಯಕ್ಕೆ ಹಾಜರು

0
834

ಸನ್ಮಾರ್ಗ ವಾರ್ತೆ

ಮಾರ್ಚ್ 29, ದುಬೈ ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಲು ಸಜ್ಜಾಗಿದ್ದ ಡಾ.ಶಿಫಾ ಅವರು ತನ್ನ ಮದುವೆಯನ್ನು ಮುಂದೂಡಿದ್ದಾರೆ ಮತ್ತು ಕೊರೋನಾ ಪೀಡಿತರ ಸೇವೆಯಲ್ಲಿ ನಿರತರಾಗಿದ್ದಾರೆ. ಮದುವೆಗಾಗಿ ಕಾಯಬಹುದು ಆದರೆ, ನನ್ನ ರೋಗಿಗಳನ್ನು ಕಾಯಲಾಗದು ಎಂದವರು ಹೇಳಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಡಾ.ಶಿಫಾ ಅವರು ಮಾರ್ಚ್ ರಂದು ವಿವಾಹವಾಗಬೇಕಿತ್ತು. ಆದರೆ, ಮದುವೆ ದಿನದಂದು ಅವರು ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐಸೊಲೇಷನ್ ವಾರ್ಡ್‌ನಲ್ಲಿ ಕಾರ್ಯನಿರತವಾಗಿದ್ದರು ಮತ್ತು ಮದುವೆ ದಿರಿಸನ್ನು ಧರಿಸಿದ್ದರು. ಅವರ ತಂದೆ ಮುಹಮ್ಮದ್ ಸಮಾಜ ಸೇವಕರಾಗಿದ್ದು, ಪತ್ನಿ ಶಿಕ್ಷಕಿ. ಹಾಗೆಯೇ ಅವರ ಹಿರಿಯ ಮಗಳು ವೈದ್ಯರಾಗಿದ್ದು, ಪ್ರಸ್ತುತ ಕೊಝಿಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾರೆ.

ನನ್ನ ಮಗಳು ತನ್ನ ಸಾಮಾಜಿಕ ಜವಾಬ್ದಾರಿ ಮತ್ತು ವೃತ್ತಿಪರ ಬದ್ಧತೆಯನ್ನು ಮೆರೆದಿದ್ದಾಳೆ. ಕೊರೋನಾ ಪೀಡಿತರ ಸೇವೆಯಲ್ಲಿರುವ ತಾನು ಈಗ ಮದುವೆಯಾಗಲ್ಲ, ತನ್ನ ಅಗತ್ಯ ಈಗ ವೈದ್ಯಕೀಯ ಕ್ಷೇತ್ರಕ್ಕೆ ಇದ್ದು, ಮದುವೆಯನ್ನು ಮುಂದೂಡುವಂತೆ ಆಕೆ ನಮ್ಮಲ್ಲಿ ವಿನಂತಿಸಿದಳು. ನಾವು ಒಪ್ಪಿ ಈ ಬಗ್ಗೆ ವರನ ಕುಟುಂಬಿಕರಲ್ಲಿ ಮಾತಾಡಿದೆವು. ಅವರೂ ಒಪ್ಪಿ ಆಕೆಯ ನಿರ್ಧಾರವನ್ನು ಬೆಂಬಲಿಸಿದರು ಎಂದವರು ಹೇಳಿದ್ದಾರೆ.

ತನ್ನ ನಿರ್ಧಾರವನ್ನು ತೀರಾ ಸಾಮಾನ್ಯ ಪ್ರಕರಣ ಎಂದಿರುವ ಡಾ. ಶಿಫಾ ಅವರು, ನಾನು ನನ್ನ ಕರ್ತವ್ಯವನ್ನು ಮಾತ್ರ ಮಾಡಿದ್ದೇನೆ. ಈ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಅನೇಕರು ತಮ್ಮ ಮದುವೆಯನ್ನು ಮುಂದೂಡಿದ್ದಾರೆ ಎಂದವರು ಹೇಳಿದ್ದಾರೆ.

ಮದುವೆಯ ದಿನದಂದು ನಾನು ಕರೋನಾ ಚಿಕಿತ್ಸೆಯ ವಾರ್ಡ್‌ನಲ್ಲಿದ್ದೆ ಮತ್ತು ನನ್ನ ಕೆಲವು ಸ್ನೇಹಿತರು ನಾನು ಮದುವೆಯ ಉಡುಪು ಧರಿಸಿದ್ದಕ್ಕಾಗಿ ಲೇವಡಿ ಮಾಡಿದರು. ಆದರೆ ನಾನು ಯಾವಾಗಲೂ ನನ್ನ ರೋಗಿಗಳಿಗೆ ಸೇವೆ ಮಾಡುವುದನ್ನು ಆನಂದಿಸುತ್ತೇನೆ ಎಂದವರು ಹೇಳಿದ್ದಾರೆ.

ಕೇರಳದಲ್ಲಿ ಕೊರೋನಾಕ್ಕೆ ಇಬ್ಬರು ಬಲಿಯಾಗಿದ್ದಾರೆ ಮತ್ತು 234 ಜನರು ಪ್ರತ್ಯೇಕ ವಾರ್ಡ್‌ಗಳಲ್ಲಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.