ಸನ್ಮಾರ್ಗ ವಾರ್ತೆ-
ಕೊಪ್ಪಳ: ಡಿ. 9- ಮಸೀದಿಯ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಕೈಗೊಂಡಿರುವ ಮಸೀದಿ ಸಂದರ್ಶನ ಎಂಬ ಚಳವಳಿ ರೂಪದ ಕಾರ್ಯಕ್ರಮ ಭಾರೀ ಸದ್ದು ಮಾಡುತ್ತಿದೆ. ಮಸೀದಿಗಳ ಬಗ್ಗೆ ವಿವಿಧ ರೀತಿಯ ಅನುಮಾನಗಳನ್ನು ಹರಡಲಾಗಿರುವ ಸದ್ಯದ ಸನ್ನಿವೇಶದಲ್ಲಿ ಅವುಗಳನ್ನೆಲ್ಲ ಎದುರಿಸಲು ಮತ್ತು ಸತ್ಯ ಸಂಗತಿ ಮನವರಿಕೆ ಮಾಡಿಸಲು ಮಸೀದಿಯನ್ನು ಸರ್ವರಿಗೂ ತೆರೆದಿಡುವುದೇ ಸೂಕ್ತವೆಂದು ಮನಗಂಡು ರಾಜ್ಯದ ಉದ್ದಕ್ಕೂ ಮಸೀದಿಗಳನ್ನು ಮುಸ್ಲಿಮೇತರರಿಗೆ ತೆರೆದಿಡುವ ಮತ್ತು ಅವರನ್ನು ಮಸೀದಿಗೆ ಭೇಟಿ ನೀಡುವಂತೆ ಪ್ರೇರೇಪಿಸಿ ಮಸೀದಿಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸುವಂತೆ ಮಾಡುವ ಈ ವಿನೂತನ ಕಾರ್ಯಕ್ರಮವು ಭಾರೀ ಜನಪ್ರಿಯತೆಗೆ ಕಾರಣವಾಗಿದೆ. ಕಳೆದವಾರ ಕೊಪ್ಪಳದಲ್ಲಿ ಈ ಪ್ರಯತ್ನ ನಡೆಸಲಾಗಿದ್ದು ಸರ್ವತ್ರ ಶ್ಲಾಘನೆಗೆ ಪಾತ್ರವಾಗಿದೆ. ವಿಶೇಷ ಏನೆಂದರೆ, ಕೊಪ್ಪಳ ನಗರ ಸ್ಟೇಷನ್ ರಸ್ತೆಯಲ್ಲಿರುವ ಮಸೀದಿಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ವಿವೇಕಾನಂದ ಆಶ್ರಮದ ಶ್ರೀ ಶ್ರೀ ಚೈತ್ಯಾನಂದ ಮಹಾಸ್ವಾಮಿಗಳು ಮಸೀದಿಗೆ ಭೇಟಿ ನೀಡಿ ಮಸೀದಿಯಲ್ಲಿ ನಮಾಜ್ ಮಾಡುವ ಸ್ಥಳ ಸೇರಿದಂತೆ ಮಸೀದಿಯನ್ನು ಸಂಪೂರ್ಣ ವೀಕ್ಷಿಸಿದರು.
ದಿನಂಪ್ರತಿ ಐದು ಹೊತ್ತು ಅಜಾನ್ ಮತ್ತು ನಮಾಜ್ ಮಾಡುವ ಮಸೀದಿಯ ಬಗ್ಗೆ ಮತ್ತು ಅದಕ್ಕಿರುವ ಶಿಷ್ಟಾಚಾರದ ಬಗ್ಗೆ ಸ್ವಾಮೀಜಿಗಳಿಗೆ ಮಸೀದಿ ಹೊಣೆಗಾರರು ತಿಳಿಸಿದರು. ಬೆಳಿಗ್ಗೆ ಎಂಟರಿಂದ ಪ್ರಾರಂಭವಾದ ಮಸೀದಿ ಸಂದರ್ಶನ ಕಾರ್ಯಕ್ರಮದಲ್ಲಿ ಐನೂರಕ್ಕೂ ಹೆಚ್ಚು ಮುಸ್ಲಿಮೇತರರು ಪಾಲ್ಗೊಂಡು ಇಡೀ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಿದರು. ಮಸೀದಿಯು ಮುಸ್ಲಿಮರ ನಮಾಜ್ ಸಹಿತ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿದ್ದು, ಅದು ಗುಪ್ತವೂ ಅಲ್ಲ, ಸಮಾಜದಿಂದ ಪ್ರತ್ಯೇಕವಾಗಿ ನಿಲ್ಲುವಂತಹದ್ದೂ ಅಲ್ಲ. ಅದರಲ್ಲಿನ ಎಲ್ಲ ಚಟುವಟಿಕೆಗಳೂ ಪಾರದರ್ಶಕವಾಗಿದೆ ಮತ್ತು ಮುಸ್ಲಿಮೇತರರನ್ನು ಯಾವ ನೆಲೆಯಲ್ಲೂ ಅದು ಅನ್ಯಗೊಳಿಸುವುದಿಲ್ಲ ಎಂಬ ಮಾಹಿತಿಯನ್ನು ಭೇಟಿ ನೀಡಿದವರಿಗೆ ತಿಳಿಸಲಾಯಿತು. ಮಸೀದಿಗೆ ಮುಸ್ಲಿಮೇತರರು ಪ್ರವೇಶಿಸಬಹುದು, ವೀಕ್ಷಿಸಬಹುದು ಮತ್ತು ನಮಾಜೂ ಸಲ್ಲಿಸಬಹುದು, ಈ ಯಾವುದಕ್ಕೂ ಇಸ್ಲಾಮಿನಲ್ಲಿ ನಿಷೇಧ ಇಲ್ಲ ಅನ್ನುವುದನ್ನು ಸಂಘಟಕರು ಈ ಸಮಯದಲ್ಲಿ ಅಥಿತಿಗಳಿಗೆ ವಿವರಿಸಿದರು. ಇದೇವೇಳೆ, ಅತಿಥಿಗಳಿಗೆ ವಿಶೇಷ ಆತಿಥ್ಯ ನೀಡಿ ಸತ್ಕರಿಸಲಾಯಿತು. ಫಲಾಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.
ಮಸೀದಿಗಳ ಬಗ್ಗೆ ತಪ್ಪು ಕಲ್ಪನೆ ಇದೆ. ಅಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಿ ಇಡಲಾಗಿದೆ, ಗುಪ್ತ ಚಟುವಟಿಕೆ ನಡೆಯುತ್ತಿದೆ ಇತ್ಯಾದಿ ತಪ್ಪು ಸಂದೇಶವನ್ನು ಸಮಾಜದಲ್ಲಿ ಹರಡಿ ಬಿಡಲಾಗಿದೆ. ಆದ್ದರಿಂದ, ಇಂಥ ತಪ್ಪುಗಳನ್ನು ದೂರ ಮಾಡಬೇಕಾದರೆ ಮಸೀದಿಯನ್ನು ಸಾರ್ವಜನಿಕ ವೀಕ್ಷಣೆಗೆ ತೆರೆದಿಡುವುದೇ ಸೂಕ್ತ ಎಂಬ ದೃಷ್ಟಿಯಿಂದ ಮಸೀದಿ ಭೇಟಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಕಾರ್ಯದರ್ಶಿ ಮುಹಮ್ಮದ್ ಕುಂಞ ಹೇಳಿದ್ದಾರೆ.












