ಅಮಾಯಕನಿಗೆ ಉಗ್ರಪಟ್ಟ ಕಟ್ಟಿದ ಸುದ್ದಿ ಮಾಧ್ಯಮಗಳಿಗೆ ಶಿಕ್ಷೆ ಏನು? ಗೋವಿಂದೂರು ರವೂಫ್ ರನ್ನು ಉಗ್ರನನ್ನಾಗಿಸಿದ ಮಾಧ್ಯಮ ಬೇಜವಾಬ್ದಾರಿಗೆ ಛೀಮಾರಿ ಹಾಕುತ್ತಿರುವ ನಾಗರಿಕರು

0
881

ಸನ್ಮಾರ್ಗ ವಾರ್ತೆ-

ಮಂಗಳೂರು, ಆ.19: ‘ಬೆಳ್ತಂಗಡಿ ತಾಲೂಕಿನ ಗುರುವಾಯೂನಕೆರೆ ಸಮೀಪದ ಗೋವಿಂದೂರಿಂದ ಪಾಕಿಸ್ತಾನಕ್ಕೆ ಸೆಟಲೈಟ್ ಕರೆ’ ಮಾಡಲಾಗಿದೆ ಮತ್ತು ಪಾಕ್ ನಿಂದ ಬಂದ ಸೆಟಲೈಟ್ ಕರೆಯನ್ನು ಸ್ವೀಕರಿಸಲಾಗಿದೆ ಎಂಬುದು ಆರಂಭದ ತನಿಖೆಯಿಂದ ಗೊತ್ತಾಗಿದೆ ಎಂದ ಹಾಗೂ ‘ಧರ್ಮಗುರುವನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ದಳ ಎಂದೆಲ್ಲ ಸುದ್ದಿ ಮಾಡಿದ ರಾಜ್ಯದ ಟಿವಿಗಳು ಮತ್ತು ಪತ್ರಿಕೆಗಳು ಮಂಗಳವಾರ ಮೌನವಾಗಿವೆ ಮತ್ತು ಬಹುತೇಕ ಆಂಥದ್ದೊಂದು ವಿಷಯವೇ ಘಟಿಸಿಲ್ಲ ಅನ್ನುವ ರೀತಿಯಲ್ಲಿದೆ. ಸೋಮವಾರ ಭಾರೀ ಸುದ್ದಿ ಸಾಧ್ಯತೆಯನ್ನು ತೆರೆದಿಟ್ಟಿದ್ದ ಸುದ್ದಿ ಮಾಧ್ಯಮಗಳು ಮಂಗಳವಾರ ಆ ಬಗ್ಗೆ ತೀವ್ರ ಮೌನಕ್ಕೆ ಜಾರಿರುವುದು ಮತ್ತು ಅಂತ ಸುದ್ದಿ ತಯಾರಿಗೆ ವಿಷಾದ ವ್ಯಕ್ತಪಡಿಸದಿರುವುದು ಅಚ್ಚರಿಯಾಗಿದೆ. ಅದರಲ್ಲೂ, ಇಂಥದ್ದೇನೂ ನಡೆದಿಲ್ಲ ಎಂದು ದ.ಕ. ಪೊಲೀಸ್ ಅಧೀಕ್ಷಕ ಲಕ್ಷ್ಮೀಪ್ರಸಾದ್ ಅವರು ಸ್ಪಷ್ಟನೆ ನೀಡಿದ ಬಳಿಕವೂ.

ಗೋವಿಂದೂರಿನಿಂದ ಪಾಕಿಸ್ತಾನಕ್ಕೆ ಕರೆ ಹೋಗಿದೆ ಎಂಬ ಸುದ್ದಿಯಿಂದ ಹಿಡಿದು, ‘ಕರೆ ಮಾಡಿದವರನ್ನು ಬಂಧಿಸಲಾಗಿದೆ’ ಎಂಬಲ್ಲಿವರೆಗೆ ಮತ್ತು ಗೋವಿಂದೂರಿಗೆ ಎನ್ ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ’, ‘ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದಿದ್ದು, ‘ಆತ ಮೌಲ್ವಿಯಾಗಿದ್ದಾನೆ, ‘ಇಲ್ಲಿ ದೊಡ್ಡ ಮನೆ ಕಟ್ಟಿದ್ದಾನೆ’, … ಇತ್ಯಾದಿ ಸುದ್ದಿಗಳು ಟಿವಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದುವು.

ಮಂಗಳೂರು ಸಮೀಪ ಮಂಜನಾಡಿಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರವೂಫ್ ಅವರನ್ನೇ ಗುರಿ ಮಾಡಿ ಮಾಧ್ಯಮ ಸುದ್ದಿಗಳು ತಯಾರಾಗಿದ್ದು, ಅವರಿಗೆ ಕುಟುಂಬಸ್ಥರ ಕರೆಗಳು ಹೋದ ಬಳಿಕ ವಿಷಯ ಗೊತ್ತಾಗಿತ್ತು. ಅವರನ್ನು ಯಾವ ಅಧಿಕಾರಿಯೂ ಭೇಟಿಯಾಗಿರಲಿಲ್ಲ. ಬಂಧನವೂ ನಡೆದಿರಲಿಲ್ಲ.

ಹಲವು ಶಂಕಿತರ ಫೋನ್ ಕರೆಗಳ ದಾಖಲೆಗಳನ್ನು ರಾ ದ ಅಧಿಕಾರಿಗಳು ಗೋವಿಂದೂರಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ, ಊರಿನ ನಿವಾಸಿಗಳ ವಿವರಗಳನ್ನು ಕಲೆ ಹಾಕಿದ್ದಾರೆ ಎಂದೆಲ್ಲ ಮಾಧ್ಯಮ ವರದಿಗಳು ಹೇಳಿದ್ದುವು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಅವರನ್ನು ಭೇಟಿಯಾದ ರವೂಫ್ ತನ್ನ ವಿರುದ್ಧ ಹೀಗೆ ಘೋರ ಸುಳ್ಳು ಸುದ್ದಿ ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಪೊಲೀಸ್ ಕಮಿಷನರ್ ಅವರ ಬಳಿ ತೆರಳಿ ದೂರಿಕೊಂಡಿದ್ದಾರೆ.

dav

ಅದೇವೇಳೆ, ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ವು ಬೆಳ್ತಂಗಡಿಯಿಂದ ಓರ್ವನನ್ನು ಬಂಧಿಸಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಇಂತಹ ಯಾವುದೇ ಘಟನೆ ವರದಿಯಾಗಿಲ್ಲ ಹಾಗೂ ಬೆಳ್ತಂಗಡಿಯಿಂದ ಪಾಕಿಸ್ತಾನಕ್ಕೆ ಕರೆ ಹೋಗಿರುವ ಅಥವಾ ಇಲ್ಲಿಂದ ಕರೆ ಮಾಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ, ಸುಳ್ಳು ಮಾಹಿತಿ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದ ಶಾಸಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ಅಂದಹಾಗೆ, ಅಮಾಯಕನೊಬ್ಬನನ್ನು ಉಗ್ರನೆಂದು ಕರೆದು, ಮೌಲ್ವಿಯಾಗಿಸಿ, ಸೆಟಲೈಟ್ ಮೂಲಕ ಪಾಕ್ ಗೆ ಕರೆ ಮಾಡಿದ ಸುದ್ದಿ ತಯಾರಿಯ ಹಿಂದೆ ಯಾರಿದ್ದಾರೆ, ಅವರ ಉದ್ದೇಶವೇನು, ಈ ಸುದ್ದಿ ತಯಾರಾಗಿರುವುದು ಎಲ್ಲಿ ಮುಂತಾದ ಗಂಭೀರ ಪ್ರಶ್ನೆಗಳನ್ನೆತ್ತಿ ಪತ್ತೆ ಕಾರ್ಯಕ್ರಮ ಪ್ರಸಾರ ಮಾಡಬೇಕಾದ ಟಿವಿ ಚಾನೆಲ್ ಗಳು ಈಗ ತಮಗೂ ತಾವು ಪ್ರಸಾರ ಮಾಡಿದ ಸುದ್ದಿಗೂ ಸಂಬಂಧವೇ ಇಲ್ಲ ಅನ್ನುವಂತೆ ಮೌನವಾಗಿವೆ. ರವೂಫ್ ರ ಸ್ವಾಭಿಮಾನ ಮತ್ತು ಸಾರ್ವಜನಿಕ ವಿಶ್ವಾಸಾರ್ಹತೆಗೆ ಭಂಗ ತಂದುದಕ್ಕೆ ಕನಿಷ್ಠ ಕ್ಷಮೆಯನ್ನೂ ಯಾಚಿಸದೆಯೇ ಅಥವಾ ತಮ್ಮ ಸುದ್ದಿ ಪ್ರಸಾರವನ್ನು ಸಮರ್ಥಿಸಿಕೊಳ್ಳದೆಯೇ ಅವು ಸುಮ್ಮನಿವೆ. ದ ಕ ಜಿಲ್ಲೆಯ ನಾಗರಿಕರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸುದ್ದಿ ಮಾಧ್ಯಮಗಳ್ ಮೇಲೆ ಕಠಿಣ ಕ್ರಮಕ್ಕಾಗಿ ಒತ್ತಾಯಿಸುತ್ತಿದ್ದಾರೆ.