ನನ್ನ ತಂದೆ ಸಂಪತ್ತನ್ನಲ್ಲ, ಹುತಾತ್ಮತೆಯನ್ನು ಪಡೆದಿದ್ದಾರೆ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು

0
199

ಸನ್ಮಾರ್ಗ ವಾರ್ತೆ

ಕಳೆದ ವಾರ ಮಧ್ಯಪ್ರದೇಶದ ಮೊರೇನಾದಲ್ಲಿ ನಡೆದಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, “ಇಂದಿರಾ ಗಾಂಧಿಯವರು ತಮ್ಮ ಆಸ್ತಿಯನ್ನು ಮಗ ರಾಜೀವ್ ಗಾಂಧಿ ಹೆಸರಿಗೆ ಉಯಿಲು ಮಾಡಿದ್ದರು. ಅವರ ನಿಧನದ ನಂತರ ಸರ್ಕಾರಕ್ಕೆ ಅವರ ಸಂಪತ್ತಿನ ಭಾಗ ಸೇರುವುದನ್ನು ತಡೆಯಲು ರಾಜೀವ್ ಗಾಂಧಿ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ರದ್ದು ಮಾಡಿದ್ದರು ಎಂಬ ಮಾತಿದೆ” ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಇಂದು ಮೊರೇನಾದಲ್ಲೇ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ತಿರುಗೇಟು ನೀಡಿರುವ ಪ್ರಿಯಾಂಕಾ ಗಾಂಧಿ, “ನನ್ನ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಸಂಪತ್ತನ್ನು ಆನುವಂಶಿಕವಾಗಿ ಪಡೆದಿಲ್ಲ. ಆದರೆ ಅವರ ತಾಯಿಯಿಂದ ಹುತಾತ್ಮತೆಯನ್ನು ಪಡೆದಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.

“ಮೋದಿಜಿ ವೇದಿಕೆಯ ಮೇಲೆ ನಿಂತು ನನ್ನ ತಂದೆ ರಾಜೀವ್ ಗಾಂಧಿಯನ್ನು ದೇಶದ್ರೋಹಿ ಎಂದು ಕರೆಯುತ್ತಾರೆ. ತಮ್ಮ ತಾಯಿಯಿಂದ ತಮ್ಮ ಆಸ್ತಿಯನ್ನು ತೆಗೆದುಕೊಳ್ಳಲು ಕಾನೂನನ್ನು ಬದಲಾಯಿಸಿದ್ದಾರೆ ಎಂದು ಹೇಳುತ್ತಾರೆ. ಪಿತ್ರಾರ್ಜಿತವಾಗಿ ನನ್ನ ತಂದೆ ಯಾವುದೇ ಸಂಪತ್ತನ್ನು ಪಡೆದಿಲ್ಲ, ಅವರು ಹುತಾತ್ಮತೆಯ ಆಲೋಚನೆಗಳನ್ನು ಮಾತ್ರ ಪಡೆದರು ಎಂದು ಅವರು ಅರ್ಥಮಾಡಿಕೊಳ್ಳುವುದಿಲ್ಲ. ಇದು ನರೇಂದ್ರ ಮೋದಿ ಅವರಿಗೆ ಎಂದಿಗೂ ಅರ್ಥವಾಗದ ಭಾವನೆ” ಪ್ರಿಯಾಂಕಾ ಗಾಂಧಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

“19 ನೇ ವಯಸ್ಸಿನಲ್ಲಿ, ನಾನು ನನ್ನ ತಂದೆಯ ಛಿದ್ರಗೊಂಡಿದ್ದ ದೇಹದ ಅವಶೇಷಗಳನ್ನು ಮನೆಗೆ ತಂದಾಗ, ನಾನು ಈ ದೇಶದ ಬಗ್ಗೆ ಅಸಮಾಧಾನ ಹೊಂದಿದ್ದೆ. ನಾನು ಯೋಚಿಸಿದೆ. ನಾನು ನನ್ನ ತಂದೆಯನ್ನು ಕಳುಹಿಸಿದ್ದೇನೆ. ಅವರ ಸುರಕ್ಷತೆಯನ್ನು ಖಚಿತಪಡಿಸುವುದು ನಿಮ್ಮ ಕೆಲಸವಾಗಿತ್ತು. ಆದರೆ ನೀವು ಅವರ ಛಿದ್ರಗೊಂಡ ಅವಶೇಷಗಳನ್ನು ರಾಷ್ಟ್ರೀಯ ಧ್ವಜದಲ್ಲಿ ಸುತ್ತಿ ನನಗೆ ಹಿಂದಿರುಗಿಸಿದ್ದೀರಿ. ನನಗೆ ಇಂದು 52 ವರ್ಷ ವಯಸ್ಸಾಗಿದೆ ಮತ್ತು ನಾನು ಅದರ ಬಗ್ಗೆ ಮೊದಲ ಬಾರಿಗೆ ಮಾತನಾಡುತ್ತಿದ್ದೇನೆ” ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

“2019ರಲ್ಲಿ ಪುಲ್ವಾಮಾದಲ್ಲಿ 40 ಸೈನಿಕರು ಸತ್ತಾಗ ಉತ್ತರ ಪ್ರದೇಶದಲ್ಲಿ ಅವರ ಕೆಲವು ಕುಟುಂಬಗಳನ್ನು ಭೇಟಿ ಮಾಡಿದ್ದೆ. ಅಲ್ಲಿ, ಹುತಾತ್ಮರ ಮಕ್ಕಳು ಸೇನೆಗೆ ಸೇರಲು ಬಯಸುತ್ತೇವೆ ಎಂದು ಹೇಳಿದರು. ಒಬ್ಬ ಹುಡುಗಿ ವಾಯು ಸೇನೆಯಲ್ಲಿದ್ದಳು. ಅವಳು ‘ದೀದಿ ನಾನು ವಾಯು ಸೇನೆಗೆ ಸೇರಲು ಮತ್ತು ಪೈಲಟ್ ಆಗಲು ಬಯಸುತ್ತೇನೆ’ ಎಂದು ಹೇಳಿದಳು. ಇದುವೇ ಹುತಾತ್ಮತೆಯ ಭಾವನೆ. ತಮ್ಮವರನ್ನು ಕಳೆದುಕೊಂಡ ನೋವು ನನಗೂ ಗೊತ್ತು. ನನ್ನ ದೇಶವನ್ನು ನಾನು ಎಷ್ಟು ಪ್ರೀತಿಸುತ್ತಿದ್ದೇನೆ ಎಂಬುದು ನನಗೆ ಗೊತ್ತು” ಎಂದು ಪ್ರಿಯಾಂಕಾ ಗಾಂಧಿ ತಿಳಿಸಿದರು.

“ಮೋದಿಯವರು ರಾಜವಂಶದ ರಾಜಕೀಯವನ್ನು ಮಾತ್ರ ನೋಡುತ್ತಾರೆ. ಅವರು ಎಂದಿಗೂ ದೇಶಭಕ್ತಿ, ದೇಶ ಸೇವೆಯನ್ನು ನೋಡುವುದಿಲ್ಲ. ಅವರು ಎಂದಿಗೂ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು. ಪ್ರಿಯಾಂಕಾ ಅವರ ಭಾಷಣದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

LEAVE A REPLY

Please enter your comment!
Please enter your name here