ಸನ್ಮಾರ್ಗ ವಾರ್ತೆ
ಶ್ರೀನಗರ: ಕಾಶ್ಮೀರದಲ್ಲಿ ಬಿಜೆಪಿ, ಪಿಡಿಪಿ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿದ್ದ ಮೆಹಬೂಬ ಮುಫ್ತಿಯವರ ಪಾಸ್ಪೋರ್ಟ್ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ದೇಶದ ಸುರಕ್ಷತೆಯ ಕಾರಣ ನೀಡಿ ಅವರ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಸ್ವತಃ ಮುಫ್ತಿಯವರೇ ಟ್ವೀಟ್ ಮಾಡಿದ್ದಾರೆ.
ದೇಶದ ಸುರಕ್ಷೆಗೆ ಬೆದರಿಕೆಯೆಂಬ ಸಿಐಟಿ ವರದಿಯಿದೆ. ಆದುದರಿಂದ ಪಾಸ್ಪೋರ್ಟ್ ಅಧಿಕಾರಿ ತನ್ನ ಅರ್ಜಿಯನ್ನು ತಿರಸ್ಕರಿಸಿದರು. ಓರ್ವ ಮಾಜಿ ಮುಖ್ಯಮಂತ್ರಿಗೆ ಪಾಸ್ ಪೋರ್ಟ್ ಪಡೆಯುವುದಕ್ಕೆ ಸಾಧ್ಯವಿಲ್ಲದ ಮತ್ತು ದೇಶಕ್ಕೆ ಬೆದರಿಕೆಯಾಗಿದ್ದಾರೆ ಎನ್ನುವ ಪರಿಸ್ಥಿತಿಯಿದೆ. ಇದು ಆಗಸ್ಟ್ 2019ರ ನಂತರ ಕಾಶ್ಮೀರದಲ್ಲಿ ನೆಲೆಸಿರುವ ಪರಿಸ್ಥಿತಿ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
ಪಾಸ್ಪೋರ್ಟ್ ಕಚೇರಿ ನೀಡಿದ ತಿರಸ್ಕೃತ ಅರ್ಜಿಯ ಸಹಿತ ಉತ್ತರದೊಂದಿಗೆ ಟ್ವೀಟ್ ಮಾಡಿರುವ ಅವರು, ರಾಜ್ಯವೊಂದರ ಮಾಜಿ ಮುಖ್ಯಮಂತ್ರಿಗೆ ಪಾಸ್ ಪೋರ್ಟ್ ಪಡೆಯಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಡಿಸೆಂಬರಿನಲ್ಲಿ ಮುಫ್ತಿ ಪಾಸ್ಪೋರ್ಟಿಗೆ ಅರ್ಜಿ ಸಲ್ಲಸಿದ್ದರು. ಆದರೆ ಮುಫ್ತಿಯ ಪಾಸ್ ಪೋರ್ಟ್ ಕೊಡಲಾಗದು ಎಂದು ಪೊಲೀಸರು ವರದಿ ನೀಡಿದ್ದಾರೆ.
2019 ಆಗಸ್ಟಿನಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬೆನ್ನಿಗೆ ಒಂದು ವರ್ಷಕ್ಕೂ ಹೆಚ್ಚು ಮುಫ್ತಿ ಗೃಹ ಬಂಧನದಲ್ಲಿದ್ದರು. ಕಳೆದ ಅಕ್ಟೋಬರಿನಲ್ಲಿ ಇವರ ಬಿಡುಗಡೆ ಆಗಿತ್ತು. ಈಗ ಕಪ್ಪುಹಣ ಬಿಳಿ ಮಾಡಿದ ಆರೋಪಕ್ಕೆ ಸಂಬಂಧಿಸಿ ಮುಫ್ತಿ ವಿರುದ್ಧ ಕೇಸು ದಾಖಲಿಸಲಾಗಿದೆ.












