ರೋಚಕ ಫೈನಲ್ ಪಂದ್ಯ: ಇಂಗ್ಲೆಂಡ್ ವಿರುದ್ಧ 7 ರನ್ ಗಳಿಂದ ಜಯಿಸಿ ಟ್ರೋಫಿ ಗೆದ್ದ ಟೀಮ್ ಇಂಡಿಯಾ

0
7069

ಸನ್ಮಾರ್ಗ ಕ್ರೀಡಾ ಲೋಕ

ಪುಣೆ: ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಇಂದು ನಡೆದ ಮೂರನೆಯ ಹಾಗೂ ಫೈನಲ್ ಏಕದಿನ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 7 ರನ್ ಗಳ ರೋಚಕ ಜಯಗಳಿಸುವ ಮೂಲಕ ಟ್ರೋಫಿ ಗೆದ್ದಿತು.

ಎರಡನೇ ಏಕದಿನ ಪಂದ್ಯದಲ್ಲಿ 6 ವಿಕೆಟ್ ಗಳ ಜಯಗಳಿಸುವ ಮೂಲಕ ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-1 ಸಮಬಲ ಸಾಧಿಸಿತ್ತು.

ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ್ದ 330 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ ಗುರಿ 322 ರನ್ ಮಾಡಲಷ್ಟೇ ಶಕ್ತವಾಯಿತು. ಆ ವೇಳೆಗೆ 9 ವಿಕೆಟ್ ಕಳೆದುಕೊಂಡಿತ್ತು.

ಇಂಗ್ಲೆಂಡ್ ಪರವಾಗಿ ಸ್ಯಾಮ್ ಕರನ್ ಏಕಾಂಗಿಯಾಗಿ ಹೋರಾಟ ನಡೆಸಿದರೂ ಕೂಡ ಕೊನೆಯಲ್ಲಿ ಸಫಲರಾಗದೇ ನಿರಾಶೆಗೊಳಗಾದರು.

ಕೊನೆಯ ಓವರ್ ನಲ್ಲಿ 14 ರನ್‌ ಗಳ ಅವಶ್ಯಕತೆ ಇದ್ದಾಗ ಬೌಲಿಂಗ್ ನಡೆಸಿದ ಯುವ ಬೌಲರ್ ನಟರಾಜನ್ ನ ಮೊದಲ ಬಾಲನ್ನು ಬೌಂಡರಿ ಗಟ್ಟಿದರೂ ಎರಡನೇ ರನ್ ತೆಗೆಯುವ ಭರದಲ್ಲಿ ಕ್ರೀಸ್ ನಲ್ಲಿ ಸ್ಯಾಮ್ ಕರನ್ ಜಾರಿ ಬಿದ್ದದ್ದರಿಂದ ನಾನ್ ಸ್ಟ್ರೈಕ್ ನಲ್ಲಿದ್ದ ಮಾರ್ಕ್ ವುಡ್ ರನ್ ತೆಗೆಯುವಾಗ ಉತ್ತಮ ಕ್ಷೇತ್ರ ರಕ್ಷಣೆ ಮಾಡಿದ ಹಾರ್ದಿಕ್ ಪಾಂಡ್ಯ ರನೌಟ್ ಮಾಡಿದರು.ಬಳಿಕ ಉಳಿದ ಐದು ಚೆಂಡುಗಳನ್ನು ಎದುರಿಸಿ ಒಂದು ಬೌಂಡರಿ ಬಾರಿಸಿದರೂ ಕೂಡ ಜಯ ದಕ್ಕಲಿಲ್ಲ.

322 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು 7 ರನ್ ಗಳಿಂದ ಸೋಲೊಪ್ಪಬೇಕಾಯಿತು. ಸ್ಯಾಮ್ ಕರಣ್ 95 ರನ್ ಗಳಿಸಿ ಔಟಾಗದೇ ಉಳಿದರು.

ಉಳಿದಂತೆ ಭಾರತದ ಪರ ಶಾರ್ದುಲ್ ಠಾಕೂರ್ 67 ಕ್ಕೆ 4, ಭುವನೇಶ್ವರ್ ಕುಮಾರ್ 42 ಕ್ಕೆ 3 ಹಾಗೂ ನಟರಾಜನ್ 73 ರನ್ ನೀಡಿ‌ 1 ವಿಕೆಟ್ ಗಳಿಸಿದರು.

ಟೀಮ್ ಇಂಡಿಯಾ 48.2 ಓವರ್‌ಗಳಲ್ಲಿ 10 ಕ್ಕೆ 329 ರನ್ ಗಳಿಸಿದರು.

ಶಿಖರ್ ಧವನ್ (67), ರಿಷಭ್ ಪಂತ್ (78) ಮತ್ತು ಹಾರ್ದಿಕ್ ಪಾಂಡ್ಯ (64) ಭಾರತದ ಪರ ಅರ್ಧಶತಕ ದಾಖಲಿಸಿದ್ದರು.

ಮಾರ್ಕ್ ವುಡ್ ಇಂಗ್ಲೆಂಡ್ ಪರ ಮೂರು ವಿಕೆಟ್ ಪಡೆದರು. ಸ್ಯಾಮ್ ಕುರ್ರನ್, ರೀಸ್ ಟೋಪ್ಲಿ, ಬೆನ್ ಸ್ಟೋಕ್ಸ್, ಮೊಯೀನ್ ಅಲಿ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:
ಟೀಮ್ ಇಂಡಿಯಾ

48.2 ಓವರ್‌ಗಳಲ್ಲಿ 329 ಕ್ಕೆ ಆಲೌಟ್

ಇಂಗ್ಲೆಂಡ್:
50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ
322