ಏಸುಕ್ರಿಸ್ತರ ಸಂದೇಶ

0
127

ಸನ್ಮಾರ್ಗ ವಾರ್ತೆ

✍️ ನಜೀರ್ ಅಹಮದ ಖಾಜಿ, ಉಪನ್ಯಾಸಕರು ವಿಜಯಪುರ.

ಏಸುಕ್ರಿಸ್ತರಿಗೆ ಇಸ್ಲಾಮಿನಲ್ಲಿ ವಿಶೇಷ ಸ್ಥಾನಮಾನವಿದೆ.
ಡಿಸೆಂಬರ 25 ರಂದು ಕ್ರಿಸ್ಮಸ್ ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಕ್ರಿಸ್ಮಸ್ ಅಂದರೆ ಬಡವರಿಗೆ ಇಲ್ಲದವರಿಗೆ ದಾನ ಕೊಡುವದರ ಮೂಲಕ ಸಂತೋಷವನ್ನು ಪರಸ್ಪರ ಹಂಚಿಕೊಳ್ಳುವುದು.

ದಿನಾಂಕ 25 ರಂದು ವಿಶ್ವದಾದ್ಯಂತ ವಿಶೇಷ ಪ್ರಾಥ೯ನೆಗಳನ್ನು ಎಲ್ಲಾ ಚರ್ಚುಗಳಲ್ಲಿ ಉತ್ಸಾಹದಿಂದ ಆಚರಿಸುವ ದಿನ ಕ್ರಿಸ್ಮಸ್. ಅಂದು ಎಲ್ಲಾ ಚರ್ಚುಗಳು ದೀಪಗಳಿಂದ, ಆಕಾಶ ಬುಟ್ಟಿಗಳಿಂದ ಅಲಂಕರಿಸಲ್ಪಡುತ್ತವೆ. ಜಗತ್ತಿನ ಇತರ ನಂಬಿಕೆಯ ಜನರಿಗೂ ಕ್ರಿಸ್ಮಸ್ ಮಂಗಳಕರ ದಿನವಾಗಿದೆ. ವಿಶ್ವದ ಅನೇಕ ಭಾಗಗಳಲ್ಲಿ ಕ್ರಿಶ್ಚಿಯನ್ನೇತರರು ( ಹಿಂದುಗಳು, ಮುಸ್ಲಿಮರು, ಸಿಖ, ಜೈನ ಮುಂತಾದವರು) ತಮ್ಮ ಕ್ರಿಶ್ಚಿಯನ್ ಸ್ನೇಹಿತರನ್ನು ಶಾಂತಿಯ ಸಂದೇಶದೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ.

ಕ್ರಿಶ್ಚಿಯನ್‌ ಧರ್ಮವು ಸೆಮಿಟಿಕ್ ( semitic ) ಧರ್ಮವಾಗಿದೆ. ಇಸ್ಲಾಮ್ ಕೂಡ ಸೆಮಿಟಿಕ ಧರ್ಮವಾಗಿದೆ. ಏಸುಕ್ರಿಸ್ತರು ಇಸ್ಲಾಮಿನಲ್ಲಿಯೂ ಅತ್ಯಂತ ವಿಶೇಷ ಸ್ಥಾನ ಪಡೆದವರಾಗಿದ್ದಾರೆ. ಯೇಸು ಕ್ರಿಸ್ತರಲ್ಲಿ ನಂಬಿಕೆ ಇಡದವನು ಮುಸ್ಲಿಮ್ ಆಗಲು ಸಾಧ್ಯವಿಲ್ಲಾ. ಅವರು ಒಬ್ಬ ಅತ್ಯಂತ ಪ್ರಬಲ ಸಂದೇಶವಾಹಕರಾಗಿದ್ದರು. ಆ ದೇವರು ಕಾಲಕ್ಕನುಸಾರವಾಗಿ 1ಲಕ್ಷ 24 ಸಾವಿರ ಪ್ರವಾದಿಗಳನ್ನು ಜನರಿಗೆ ಉಪದೇಶಿಸುವ ಸಲುವಾಗಿ ಭೂಮಿಗೆ ಕಳುಹಿಸಿಕೊಟ್ಟನು. ಯೇಸು ಅವರಲ್ಲಿ ಒಬ್ಬರು ಮತ್ತು ಕೊನೆಯವರು ಪ್ರವಾದಿ ಮುಹಮ್ಮದ್ (ಸ) ಆಗಿದ್ದಾರೆ.

2000 ವಷ೯ಗಳ ಹಿಂದೆ ದೇವರು ಏಸು ಅವರನ್ನು ಲೋಕಕ್ಕೆ ಕಳುಹಿಸಿದನು. ಅವರು ಸತ್ಯವನ್ನು ಎತ್ತಿ ಹಿಡಿದು ಜಗತ್ತಿನಲ್ಲಿ ಒಳ್ಳೆಯದನ್ನು ಪಸರಿಸುವಂತೆ ಮಾಡಿದರು. ಮತ್ತು ಕೆಡಕಿನ ನಿವಾರಣೆ ಮಾಡಿದರು. ಅವರು ನುಡಿದಂತೆ ನಡೆದರು. ಇಡೀ ಮಾನವ ಕುಲಕ್ಕೆ ನೀವು ನೆರೆ ಹೊರೆಯವರನ್ನು ಪ್ರೀತಿಸಿರಿ, ಇತರರನ್ನು ಸಹೋದರ ಸಹೋದರಿಯಂತೆ ಕಾಣಿರಿ ಎಂದರು.

ಏಸುಕ್ರಿಸ್ತರನ್ನು ಮೆಸ್ಸೀಯಾ ಅನ್ನುತ್ತಾರೆ. ಆ ದೇವರು ಯಹೂದ್ಯರನ್ನು ರಕ್ಷಿಸುವ ಸಲುವಾಗಿ ಪ್ರವಾದಿಗಳ ಮುಖಾಂತರ ಮೆಸ್ಸೀಯಾನನ್ನು ಕಳುಹಿಸಿದನು, ಆದರೆ ಆತನನ್ನು ಒಪ್ಪಿಕೊಳ್ಳದ ಯಹೂದ್ಯರ ಪಾಲಿಗೆ ಮಾತ್ರ ಮೆಸ್ಸಿಯನಾಗಲಿಲ್ಲಾ, ಬದಲಿಗೆ ಅವರ ನೈಜ ವ್ಯಕ್ತಿತ್ವನ್ನು ಕಂಡು ಹಿಡಿದ ಶತ್ರುವಾಗಿಯೇ ಉಳಿದ.

ಏಸು ಹೇಳಿದ್ದು ಒಬ್ಬ ದೇವರಲ್ಲಿ ವಿಶ್ವಾಸವಿಡಬೇಕು, ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಹಿಂಸಿಸುವವರಿಗೊಸ್ಕರ ಪ್ರಾಥೀ೯ಸಿರಿ, ದೇವರ ಪ್ರೀತಿಯನ್ನು ಮನುಷ್ಯರಲ್ಲಿ ಕಾಣಿರಿ ಎಂದು ಸಾರಿದರು. ಪ್ರೀತಿ, ಕ್ಷಮೆ, ಕರುಣೆ, ತ್ಯಾಗ ಇವುಗಳು ನ್ಯಾಯಕ್ಕಿಂತಲೂ ದೊಡ್ಡವು. ಇದ್ದವರು ಇಲ್ಲದವರಿಗೆ ಕೊಡಿ.

ಏಸು ಕ್ರಿಸ್ತರು ತನ್ನ ಶಿಷ್ಯರಿಗೆ ನಾನು ನಿಮಗೆ ಶಾಂತಿ ಕೊಡಲು ಬಂದಿದ್ದೇನೆ ಎನ್ನುವ ಮಾತು ಬೈಬಲ್ ನಲ್ಲಿ ಬರುತ್ತದೆ. ಇಸ್ಲಾಮ್ ಅಂದರೆ ಕೂಡ ಶಾಂತಿ. ಪ್ರವಾದಿ ಮುಹಮ್ಮದ್ (ಸ) ಕೂಡ ಶಾಂತಿಯ ಧೂತರಾಗಿದ್ದರು.

ಜಗತ್ತಿನಲ್ಲಿರುವ ಅಸತ್ಯವನ್ನು ತೊಲಗಿಸಿ ಸತ್ಯದ ಕಂಪನ್ನು ಬೀರಲು, ನಮ್ಮಲ್ಲಿರುವ ಕತ್ತಲನ್ನು ಹೋಗಲಾಡಿಸಿ ಬೆಳಕಿನಡೆಗೆ ನಮ್ಮನ್ನು ಮುನ್ನಡೆಸಲು ಸಾವಿನ ಕರಾಳ ಛಾಯೆಯಿಂದ ನಮ್ಮನ್ನು ಬಿಡುಗಡೆಗೊಳಿಸಿ ನಿತ್ಯಜೀವನದ ಸವಿ ನೀಡಲು ಆ ದೇವರು ಏಸುಕ್ರಿಸ್ತರನ್ನು ಭೂಮಿಗೆ ಸಂದೇಶವಾಹಕರ ರೂಪದಲ್ಲಿ ಕಳುಹಿಸಿದ ದಿನವಿದು.

ಏಸು ಕ್ರಿಸ್ತರು ದೇವರ ಅನುಮತಿಯಿಂದ ಹುಟ್ಟಿದ ಕುರುಡರು, ಮತ್ತು ಕುಷ್ಠ ರೋಗಿಗಳನ್ನು ಗುಣ ಪಡಿಸುತ್ತಿದ್ದರು, ಸತ್ತವರಿಗೆ ಮರು ಜೀವ ಕೊಡುತ್ತಿದ್ದರು. ಹಿಂದಿನ ಯಹೂದಿಯರ ನಿಯಮಗಳನ್ನು ಧೃಡಿಕರಿಸಲು ಆ ಅಲ್ಲಾಹನು ಅವರನ್ನು ಭೂಮಿಗೆ ಕಳುಹಿಸಿದನು.

ಪವಿತ್ರ ಕುರ್ ಆನಿನಲ್ಲಿ ಏಸು ಕ್ರಿಸ್ತರನ್ನು 25 ಸಲ ಪ್ರಸ್ತಾಪಿಸಲಾಗಿದೆ. ಬೇರೆ ಬೇರೆ ಅಧ್ಯಾಯಗಳಲ್ಲಿ ಇದು ಉಲ್ಲೇಖಿಸಲಾದ ಇತರ ಎಲ್ಲಾ ಪ್ರವಾದಿಗಳಿಗಿಂತಲೂ ಹೆಚ್ಚಾಗಿರುತ್ತದೆ. ಏಸು ಕ್ರಿಸ್ತರ ತಾಯಿಯ ಬಗ್ಗೆ ಒಂದು ಅಧ್ಯಾಯ 19 ಮೇರಿ ಪವಿತ್ರ ಕುರ್ ಆನಿನಲ್ಲಿ ಪ್ರಸ್ತಾಪಿಸಲಾಗಿದೆ. ದೇವರು ನಿನಗೆ ಒಂದು ಸಂತೋಷ ಸುದ್ದಿಯನ್ನು ಕೊಟ್ಟಿದ್ದಾನೆ, ಏಸು ಕ್ರಿಸ್ತರ ಬಗ್ಗೆ. ಮೇರಿ ನಿನ್ನ ಮಗ ಈ ಜಗತ್ತಿನಲ್ಲಿ ದೇವರಿಗೆ ಸ್ಮರಿಸುವವರಲ್ಲಿ ಗೌರವಾನ್ವಿತನಾಗಿರುತ್ತಾನೆ, ಪ್ರತಿಫಲಾಪೆಕ್ಷೆ ಇಲ್ಲದ ನಿಸ್ವಾಥ೯ ಸೇವೆಯೇ ದೇವರ ಸೇವೆ, ಅದು ನಿಮ್ಮಲ್ಲಿ ಬೆಳೆಯಬೇಕು, ಅದು ಕಾಯ೯ದಲ್ಲಿ ನಡತೆಯಲ್ಲಿ ಕಂಡು ಬರಬೇಕು ಎಂದು ಅವರು ಹೇಳಿದ್ದಾರೆ.

ಕೋಪ ತಾಪದಲ್ಲಿ ನೊಂದು ಬೆಂದ ಮನಗಳಿಗೆ ಸ್ವಾಂತನವಾಗಿ ಶಾಂತಿಯ ಚಿಲುಮೆಯಾಗಿ, ನಲುಗಿದ ಹೃದಯಗಳಿಗೆ ಆಸರೆಯಾಗಿ, ಪ್ರೀತಿಯಿಲ್ಲದೇ ಬರಿದಾದ ಬಾಳಿಗೆಗಳಿಗೆ ಆಸರೆಯಾಗಿ, ಪ್ರೀತಿಯಿಲ್ಲದೇ ಬರಿದಾದ ಬಾಳಿಗೆ ವರವಾಗಿ, ಪಾಪದ ಅಂಧಕಾರದಲ್ಲಿ ತೊಳಲಾಡುತ್ತಿರುವವರಿಗೆ ಆಶಾಕಿರಣವಾಗಿ ಯೇಸುಕ್ರಿಸ್ತ ಆವತರಿಸಿದರು.

ಇವತ್ತು ಸಿರಿವಂತಿಕೆ ಅಮಲನಲ್ಲಿ ಜನರು ನಾವು ನಮ್ಮವರು ಎಂಬುದನ್ನು ಮರೆಯುತ್ತಿದ್ದಾರೆ. ಪರಿಸ್ಥಿತಿ ಇದೇ ತರಹ ಮುಂದುವರಿದರೆ ಮುಂದಿನ ದಿನಗಳಲ್ಲಿ ಪರಸ್ಪರ ದ್ವೇಷ, ಅಸೂಯೆಯಿಂದ ಜೀವನ ನಡೆಸುವ ಪ್ರಸಂಗ ಬರಬಹುದು. ಈ ಹಿನ್ನಲೆಯಲ್ಲಿ ಯೇಸುಕ್ರಿಸ್ತ, ಕೊನೆಯ ಪ್ರವಾದಿ ಮುಹಮ್ಮದ(ಸ) ಜನಿಸಿ, ಸರಳತೆ, ಸಹನೆ, ಪ್ರೀತಿ ವಿಶ್ವಾಸಗಳನ್ನು ಜನರಲ್ಲಿ ಬೆಳೆಸಲು ಮುಂದಾದರು. ಇವತ್ತು ಜಗತ್ತಿಗೆ ಯೇಸುಕ್ರಿಸ್ತ ಮತ್ತು ಮುಹಮ್ಮದ್ (ಸ)ಅವರ ತತ್ವ ಸಂದೇಶ ಹೆಚ್ಚು ಅಗತ್ಯವಾಗಿದೆ.

ಧಮ೯, ಜಾತಿ, ಭೇದ, ಕೀಳರಿಮೆ, ತಾರತಮ್ಯ ಬಿಟ್ಟು ನಾವೆಲ್ಲ ಒಂದೇ ಎನ್ನುವ ಸಹಾಯ ಮನೋಭಾವನೆ ಬೆಳೆಸಿಕೊಂಡು ಪರಸ್ಪರ ಅಭಿವೃದ್ಧಿ ಹೊಂದಬೇಕು. ಅಂತಾ ಯೇಸು ಅವರು ಹೇಳಿದ್ದಾರೆ. ಕ್ರಿಸ್ಮಸ್ ಬಂಧುತ್ವ ಬೆಸೆಯುವ ಹಬ್ಬವಾಗಿದೆ. ಇಂದು ರಾಷ್ಟಗಳ ನಡುವೆ, ಧಮ೯ಗಳ ನಡುವೆ ಉದ್ವಿಗ್ನತೆ, ಸಂಷ೯ಗಳು ಹೆಚ್ಚಾಗಿದೆ. ಕ್ರೂರ ಹಿಂಸೆಯ ಬಿಸಿಗಾಳಿ ಬೀಸಿ ದ್ವೇಷ ಹೊಗೆಯಾಡುತ್ತಿದೆ, ಇದರಲ್ಲಿ ನೊಂದು ಬೆಂದು ನಲುಗಿರುವ ಅನೇಕ ಜನರು ಬೀದಿ ಪಾಲಾಗಿದ್ದಾರೆ. ಹೀಗೆ ಹಸಿವು ರೋಗಗಳಿಂದ ನರಳುತ್ತಿರುವ, ಭವಿಷ್ಯವಿಲ್ಲದೇ ತೋಳಲಾಡುತ್ತಿದ್ದಾರೆ.

ಕ್ರಿಸ್ಮಸ್ ಎಂಬುದು ಸವ೯ರಿಗೂ ಭರವಸೆಯ ಆಶಾಕಿರಣವಾಗಿ ಹೊಸ ಬದುಕಿಗೆ ಆಹ್ವಾನವಿನ್ನೀಯಲಿ, ಇದರ ಅನುಗ್ರಹ, ಸುಖ ಶಾಂತಿಯ ಅನುಭವ ನಮ್ಮ ಎಲ್ಲರಿಗೂ ನಿರಂತರವಾಗಿರಲಿ, ಕ್ರಿಸ್ಮಸ್‌ ಅನುಗ್ರಹದೊಂದಿಗೆ ಹೊಸ ವಷ೯ದ ಹೊಸ ಬದುಕಿಗೆ ಮುನ್ನಡಿ ಇರಿಸುವಂತಾಗಲಿ.