ಗಣೇಶ ವಿಸರ್ಜನೆ: ಮಿಲಾದ್ ಮೆರವಣಿಗೆ ಮುಂದೂಡಿ ಭಾವೈಕ್ಯತೆ ಮೆರೆದ ಬೆಳಗಾವಿಯ ಮುಸ್ಲಿಂ ಮುಖಂಡರು

0
534

ಸನ್ಮಾರ್ಗ ವಾರ್ತೆ

ಬೆಳಗಾವಿ: ಸೆ.28ರಂದು ಗಣೇಶ ವಿಸರ್ಜನಾ ಮೆರವಣಿಗೆ ನಡೆಯಲಿದ್ದು, ಇದಕ್ಕೆ ಯಾವುದೇ ರೀತಿಯ ತೊಡಕಾಗಬಾರದೆಂಬ ಉದ್ದೇಶದಿಂದ ಮುಸ್ಲಿಮ್ ಮುಖಂಡರು ಮಿಲಾದ್ ಮೆರವಣಿಗೆಯನ್ನು ಮುಂದೂಡಿದ್ದಾರೆ. ಆ ಮೂಲಕ ಹಿಂದೂ-ಮುಸ್ಲಿಮ್ ಭಾವೈಕ್ಯತೆಗೆ ಮತ್ತೊಂದು ಸಾಕ್ಷಿಯಾಗಿದೆ.

ಬುಧವಾರ ಬೆಳಗಾವಿಯ ಮುಸ್ಲಿಮ್ ಮತ್ತು ಜಮಾಅತ್‌ ಸಂಘಟನೆಯ ಮುಖಂಡರು ಹಾಗೂ ಬೆಳಗಾವಿ ಉತ್ತರ ಶಾಸಕ ರಾಜು ಸೇಠ್ ಸಭೆ ನಡೆಸಿದ್ದು, ನಗರದಲ್ಲಿ ಹಿಂದೂ-ಮುಸ್ಲಿಮ್ ಭಾವೈಕ್ಯತೆಗೆ ಯಾವುದೇ ಧಕ್ಕೆಯಾಗಬಾರದೆಂದು ಮಿಲಾದ್‌ ಹಬ್ಬದ ಆಚರಣೆಯನ್ನು ಎರಡು ದಿನಗಳ ಮಟ್ಟಿಗೆ ಮುಂದೂಡಿದ್ದಾರೆ. ಅಕ್ಟೋಬರ್ 1 ರಂದು ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ.

ಮುಸ್ಲಿಂ ಸಮುದಾಯದ ನಿರ್ಧಾರವನ್ನು ಬೆಳಗಾವಿ ಗಣೇಶ ಮಂಡಳಿಯ ಮುಖಂಡರು ಮತ್ತು ಸಾರ್ವಜನಿಕರು ಸ್ವಾಗತಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.

ಬೆಳಗಾವಿ ನಗರ ಸೂಕ್ಷ್ಮ ಪ್ರದೇಶವಾಗಿದ್ಧು, ಈ ಹಿಂದೆ ಅನೇಕ ಬಾರಿ ಹಿಂದೂ-ಮುಸ್ಲಿಮ್ ಸಮುದಾಯದ ನಡುವೆ ಗಲಾಟೆಗಳು ನಡೆದಿದ್ದವು. ಈ ಬಾರಿ, ಅಂತಹ ಯಾವುದೇ ಘಟನೆಗಳು ನಡೆಯಬಾರದೆಂದು ಮುಸ್ಲಿಮ್ ಮುಖಂಡರು ಎಚ್ಚರಿಕೆ ವಹಿಸಿದ್ದಾರೆ. ಈ ಕಾರಣಕ್ಕೆ ಮಿಲಾದ್ ಆಚರಣೆಯನ್ನೇ ಮುಂದೂಡಲಾಗಿದೆ.

ಮಾಧ್ಯಮಗಳ ಜೊತೆಗೆ ಮಾತನಾಡಿರುವ ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ, ಶಾಸಕ ರಾಜು ಸೇಠ್, “ಸಿರತ್ ಕಮಿಟಿ, ಅಂಜುಮನ್ ಸಂಸ್ಥೆ, ಎಲ್ಲ ಜಮಾಅತ್ ಧರ್ಮ ಗುರುಗಳು ಸೇರಿಕೊಂಡು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಕಾರಣಕ್ಕೆ ಮಿಲಾದ್ ಮೆರವಣಿಗೆ ಮುಂದೂಡಲಾಗಿದೆ. ‌ಹಿಂದೂಗಳ ಗಣೇಶೋತ್ಸವ ಮೆರವಣಿಗೆಗೆ ನಾವೂ ಹೋಗುತ್ತೇವೆ. ನಮ್ಮ ಹಬ್ಬಕ್ಕೆ ಹಿಂದೂ ಸಮಾಜ ಬಾಂಧವರನ್ನೂ ಆಹ್ವಾನಿಸುತ್ತೇವೆ. ಇದರಿಂದ ಸೌಹಾರ್ದಯುತ ವಾತಾವರಣ ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು.

ಜಮಾಅತ್ ಸಂಘಟನೆಯ ಮುಖಂಡರಾದ ಯಾಸಿನ್ ಮಖಾನಂದಾರ್ ಅವರು ಮಾಧ್ಯಮ ಜೊತೆ ಮಾತನಾಡಿದ್ದು, ಮಿಲಾದ್ ಮೆರವಣಿಗೆ 2 ದಿನಗಳ ಕಾಲ ಮುಂದೂಡಿದ್ದೇವೆ. ಅಕ್ಟೋಬರ್ 1 ರಂದು ಮಿಲಾದ್ ಮೆರವಣಿಗೆ ನಡೆಯುತ್ತದೆ” ಎಂದು ತಿಳಿಸಿದ್ಧಾರೆ.