ರಾಷ್ಟ್ರಕ್ಕೆ ಮಾದರಿಯಾಗುವಂತೆ ಕಿಯೊನಿಕ್ಸ್‌ ಸಂಸ್ಥೆಯನ್ನು ರೂಪಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಕರೆ

0
247

ಸನ್ಮಾರ್ಗ ವಾರ್ತೆ

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕಿಯೊನಿಕ್ಸ್‌ ಸಂಸ್ಥೆಗೆ ಇರುವ ದೀರ್ಘಾವಧಿ ಅನುಭವ ಹಾಗೂ ಹೆಜ್ಜೆ ಗುರುತುಗಳನ್ನು ಅವಲೋಕಿಸಿದರೆ ಸಂಸ್ಥೆ ಅಗಾಧ ರೀತಿಯಲ್ಲಿ ಬೆಳೆದು, ರಾಷ್ಟ್ರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿ ನಿಲ್ಲಬೇಕಿತ್ತು, ಸಂಸ್ಥೆ ಇನ್ನು ಮುಂದೆ ಸಮರ್ಪಕವಾಗಿ ಸವಾಲುಗಳನ್ನು ತೆಗೆದುಕೊಳ್ಳುವ ಮೂಲಕ ರಾಷ್ಟ್ರದ ಅತ್ಯುತ್ತಮ ಸಂಸ್ಥೆಗಳ ಸಾಲಿನಲ್ಲಿ ನಿಲ್ಲಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಪ್ರಿಯಾಂಕ್‌ ಖರ್ಗೆ ಹೇಳಿದರು.

ಕಿಯೋನಿಕ್ಸ್‌ ಸಂಸ್ಥೆಯ ಅಧ್ಯಕ್ಷರೂ ಆದ ಸಚಿವರು ಸಂಸ್ಥೆಯ 47ನೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಮಾತನಾಡಿ ಕರ್ನಾಟಕದಲ್ಲಿ ವಿದ್ಯುನ್ಮಾನ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರಿ ಕಂಪನಿಯಾಗಿ ಕಿಯೋನಿಕ್ಸ್ ಸಂಸ್ಥೆಯು 1976ರಲ್ಲಿ ಕರ್ನಾಟಕ ಸರ್ಕಾರ ನೀಡಿದ 10 ಲಕ್ಷ ರೂ. ಆರಂಭಿಕ ಬಂಡವಾಳದ ಮೂಲಕ ಸ್ಥಾಪನೆಯಾಯಿತು ಎಂದು ಹೇಳಿದರು.

ನಮ್ಮ ಹಿರಿಯರ ದೂರದೃಷ್ಟಿಯ ಫಲವಾಗಿ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್‌ ಕ್ಷೇತ್ರದಲ್ಲಿ ಉದ್ದಿಮೆಗಳನ್ನು ಉತ್ತೇಜಿಸುವ ಸಂಸ್ಥೆಯೊಂದು ರೂಪುಗೊಂಡಿತು, ಆದರೆ ಈ ಸಂಸ್ಥೆಯನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸಲು ಸಾಧ್ಯವಾಗದೇ ಹೋಗಿರಬಹುದು ಎಂದು ಅಭಿಪ್ರಾಯಪಟ್ಟರು. ರಾಷ್ಟ್ರಕ್ಕೆ ಮಾದರಿಯಾಗಿ ಈ ಸಂಸ್ಥೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕರು, ಪರಿಣತರು ಹಾಗೂ ಸಂಸ್ಥೆಯ ನೌಕರರಿಂದ ಅಭಿಪ್ರಾಯ ಸಂಗ್ರಹಿಸಲು ಸಚಿವರು ಸೂಚಿಸಿದರು.

ಸಮಾರಂಭದ ಆರಂಭದಲ್ಲಿ ಸಚಿವರು ಕಿಯೋನಿಕ್ಸ್‌ ಸಂಸ್ಥೆಯ ಸಂಸ್ಥಾಪಕರಾದ ಆರ್.‌ ಕೆ. ಬಾಳಿಗಾ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

1979ರಲ್ಲಿ 332 ಎಕರೆ ವಿಸ್ತೀರ್ಣದಲ್ಲಿ ಕಿಯೋನಿಕ್ಸ್‌ ಎಲೆಕ್ಟ್ರಾನಿಕ್ಸ್‌ ಸಿಟಿಯನ್ನು ಸ್ಥಾಪಿಸಲಾಯಿತು, ಇದರಿಂದಾಗಿ ಬೆಂಗಳೂರು ನಗರವು ಇಂಡಿಯಾದ ಸಿಲಿಕಾನ್‌ ವ್ಯಾಲಿಯಾಗಿ ಪ್ರಸಿದ್ಧಗೊಂಡಿತು ಎಂದು ಕಿಯೊನಿಕ್ಸ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಸಂಗಪ್ಪ ಹೇಳಿದರಲ್ಲದೆ, ಅಂದು ಪ್ರಾರಂಭವಾದ ಕಿಯೋನಿಕ್ಸ್‌ ಸಂಸ್ಥೆಯು ಕಪ್ಪು- ಬಿಳುಪು ಮತ್ತು ವರ್ಣ ಟಿವಿ ಉತ್ಪಾದನಾ ಘಟಕ, ವೈರ್‌ಲೆಸ್‌ ಉಪಕರಣಗಳ ಉತ್ಪಾದನೆ, ಹೈ ವೋಲ್ಟೇಜ್‌ ರೆಸಿಸ್ಟರ್ಸ್‌ ಉತ್ಪಾದನೆಗಳಲ್ಲಿ ತೊಡಗಿಸಕೊಂಡಿತ್ತು. 1992ರಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಗಣಕ ಯಂತ್ರ ತರಬೇತಿ ನೀಡುವ ಉದ್ದೇಶದಿಂದ ಕರ್ನಾಟಕದಾದ್ಯಂತ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಯಿತು ಎಂದು ತಿಳಿಸಿದರು.

ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಏಕರೂಪ್‌ ಕೌರ್‌ ಹಾಗೂ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.