ಖ್ಯಾತ ಜಾಗತಿಕ ಮುಸ್ಲಿಂ ವಿದ್ವಾಂಸ ಯೂಸುಫ್ ಅಲ್ ಖರ್ಝಾವಿ ಇನ್ನಿಲ್ಲ

0
210

ಸನ್ಮಾರ್ಗ ವಾರ್ತೆ

ದೋಹಾ/ಕತರ್: ಜಗತ್ತಿನ ಅತ್ಯಂತ ಪ್ರಭಾವಿ ಇಸ್ಲಾಮಿಕ್ ವಿದ್ವಾಂಸರಲ್ಲೊಬ್ಬರಾದ ಮತ್ತು ಮುಸ್ಲಿಂ ವಿದ್ವಾಂಸರ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾದ ಯೂಸುಫ್ ಅಲ್ ಖರ್ಝಾವಿ ಅವರು ಸೆಪ್ಟೆಂಬರ್ 26, ಸೋಮವಾರದಂದು ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರ ನಿಧನ ವಾರ್ತೆಯನ್ನು ಮೊದಲು ಅವರ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಕತಾರ್‌ನ ದೋಹಾದಲ್ಲಿ ನೆಲೆಸಿದ್ದ, ಈಜಿಪ್ಟ್ ಮೂಲದ ಮುಸ್ಲಿಂ ವಿದ್ವಾಂಸರಾದ ಯೂಸುಫ್ ಅಲ್ ಖರ್ಝಾವಿಯವರು ಸೆಪ್ಟೆಂಬರ್ 9, 1926 ರಂದು ಜನಿಸಿದರು. ತಮ್ಮ 9ನೇ ವರ್ಷದಲ್ಲಿ ಕುರ್‌ಆನನ್ನು ಸಂಪೂರ್ಣ ಕಂಠಪಾಠ ಮಾಡಿದರು. ಈಜಿಪ್ಟಿನ ಧಾರ್ಮಿಕ ಇಲಾಖೆಯ ಉದ್ಯೋಗಿಯಾಗಿ ಮತ್ತು ಅಲ್ ಅಝರ್ ಯೂನಿವರ್ಸಿಟಿಯ ಸಾಂಸ್ಕೃತಿಕ ಇಲಾಖೆ ಪ್ರಸಾರಾಂಗ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ನಿರ್ವಹಿಸಿದರು. 1961ರಿಂದ ಅವರು ಕತರ್ ನಲ್ಲಿ ವಾಸಿಸುತ್ತಿದ್ದಾರೆ.

ಕತರ್ ಸೆಕೆಂಡರಿ ರಿಲಿಜಿಯಸ್ ಇನ್ಸ್ಟಿಟ್ಯೂಟಿನ ಮುಖ್ಯಸ್ಥರಾಗಿಯೂ ಅವರು ಕೆಲಸ ಮಾಡಿದ್ದಾರೆ. 1973 ರಲ್ಲಿ ಕತರ್ ಯುನಿವರ್ಸಿಟಿ ಯ ಇಸ್ಲಾಮಿಕ್ ಸ್ಟಡೀಸ್ ಫ್ಯಾಕಲ್ಟಿಗೆ ರೂಪ ನೀಡಿದರು. 1978 ರಲ್ಲಿ ಕತರ್ ಯೂನಿವರ್ಸಿಟಿ ಯಲ್ಲಿ ಶರೀಯಾ ಆ್ಯಂಡ್ ಇಸ್ಲಾಮಿಕ್ ಸ್ಟಡೀಸ್ ಕಾಲೇಜನ್ನು ಆರಂಭಿಸಿದರು.

2004ರಲ್ಲಿ ಸ್ಥಾಪನೆಯಾದ ಮುಸ್ಲಿಂ ವಿದ್ವಾಂಸರ ಅಂತಾರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷರಾಗಿದ್ದರು ಮತ್ತು 14 ವರ್ಷಗಳ ಕಾಲ ಈ ಸ್ಥಾನದಲ್ಲಿ ಸೇವೆ ಸಲ್ಲಿಸಿದ್ದರು.

ಪ್ರಪಂಚದಾದ್ಯಂತ ಅಂದಾಜು 40–60 ಮಿಲಿಯನ್ ಪ್ರೇಕ್ಷಕರನ್ನು ಹೊಂದಿರುವ ಅಲ್ ಜಝೀರಾದಲ್ಲಿ ಪ್ರಸಾರವಾದ ”ಶರಿಯಾ ಆ್ಯಂಡ್ ಲೈಫ್” ಕಾರ್ಯಕ್ರಮಕ್ಕಾಗಿ ಖಾರ್ಝಾವಿ‌ಯವರು ಹೆಚ್ಚು ಹೆಸರು ವಾಸಿಯಾಗಿದ್ದರು. ಹಾಗೂ ಇಸ್ಲಾಮ್‌ ಆನ್‌ಲೈನ್(IslamOnline) ಎಂಬ ವೆಬ್‌ಸೈಟ್ ಆರಂಭಕ್ಕೆ ಸಹಕರಿಸಿದ್ದರಲ್ಲದೆ ಈ ವೆಬ್‌ಸೈಟ್‌ನ ಮುಖ್ಯ ಧಾರ್ಮಿಕ ವಿದ್ವಾಂಸರಾಗಿಯೂ ಕಾರ್ಯನಿರ್ವಹಿಸಿದ್ದರು.

ಅವರ ಪ್ರಭಾವಿಗಳಲ್ಲಿ ಇಬ್ನ್ ತೈಮಿಯಾ, ಇಬ್ನ್ ಕಯ್ಯಿಮ್, ಸಯ್ಯಿದ್ ರಶೀದ್ ರಿದಾ, ಹಸನ್ ಅಲ್-ಬನ್ನಾ, ಅಬುಲ್ ಹಸನ್ ಅಲಿ ಹಸನಿ ನದ್ವಿ, ಅಬುಲ್ ಅಲಾ ಮೌದೂದಿ ಮತ್ತು ನಯೀಮ್ ಸಿದ್ದಿಕೀಯವರು ಸೇರಿದ್ದಾರೆ.

ಜಾಗತಿಕವಾಗಿ ಅತ್ಯಂತ ಪ್ರಭಾವಿ ವಿದ್ವಾಂಸರಾಗಿದ್ದ ಅವರು 120ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ‘ದಿ ಲಾಫುಲ್ ಎಂಡ್ ದಿ ಪ್ರೊಹಿಬಿಟೆಡ್ ಇನ್ ಇಸ್ಲಾಮ್’, ‘ಇಸ್ಲಾಮ್: ದಿ ಫ್ಯೂಚರ್ ಸಿವಿಲೈಝೇಶನ್’ ಸೇರಿವೆ.

ಮುಸ್ಲಿಂ ವಿದ್ವಾಂಸರಾಗಿ ಅವರು ನೀಡಿದ ಕೊಡುಗೆಗಳಿಗೆ ಅವರು ಎಂಟು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ ಹಾಗೂ ಅವರು ಜಗತ್ತಿನ ಅತ್ಯಂತ ಪ್ರಭಾವಿ ಇಸ್ಲಾಮಿಕ್ ವಿದ್ವಾಂಸರಲ್ಲೊಬ್ಬರೆಂದು ಪರಿಗಣಿತರಾಗಿದ್ದರು.