ಮೋದಿ ದ್ವೇಷ ಭಾಷಣ; ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಯತ್ನ ಎಂದ ರಾಹುಲ್ ಗಾಂಧಿ

0
168

ಸನ್ಮಾರ್ಗ ವಾರ್ತೆ

“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರಿಗೆ ವಿತರಿಸುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನದಲ್ಲಿ ಮಾಡಿರುವ ದ್ವೇಷ ಭಾಷಣ ದೇಶದಲ್ಲಿ ದೊಡ್ಡ ವಿವಾದವಾಗಿ ಪರಿಣಮಿಸಿದೆ. ಪ್ರಧಾನಿಯವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ‘ಪ್ರಧಾನಿ ಎಂಬ ಗೌರವಯುತ ಸ್ಥಾನಕ್ಕೆ ಅರ್ಹತೆ ಇಲ್ಲದ ವ್ಯಕ್ತಿ ನರೇಂದ್ರ ಮೋದಿ’ ಎಂದು ಜನರು ಕಿಡಿಕಾರುತ್ತಿದ್ದಾರೆ.

ಪ್ರಧಾನಿ ಮೋದಿಯವರ ಈ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್, “ಮೊದಲ ಹಂತದ ಮತದಾನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹತಾಶರಾಗಿದ್ದಾರೆ. ತಮ್ಮ ಸುಳ್ಳುಗಳ ಮೂಲಕ ಹಿಂದೂ-ಮುಸ್ಲಿಮರನ್ನು ಮತ್ತೆ ವಿಭಜಿಸುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದೆ.

ಮೋದಿಯವರ ಹೇಳಿಕೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ, ಮೋದಿಯವರ ದ್ವೇಷ ಭಾಷಣವು ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಎಂದಿದ್ದಾರೆ.

“ಮೊದಲ ಹಂತದ ಮತದಾನದ ನಿರಾಸೆಯ ನಂತರ ನರೇಂದ್ರ ಮೋದಿಯವರ ಸುಳ್ಳಿನ ಮಟ್ಟ ಎಷ್ಟು ಕುಸಿದಿದೆ ಎಂದರೆ ಭಯದಿಂದ ಅವರು ಈಗ ಸಾರ್ವಜನಿಕರ ಗಮನವನ್ನು ನೈಜ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಬಯಸಿದ್ದಾರೆ. ಕಾಂಗ್ರೆಸ್‌ನ ‘ಕ್ರಾಂತಿಕಾರಿ ಪ್ರಣಾಳಿಕೆ’ಗೆ ಸಿಗುತ್ತಿರುವ ಅಪಾರ ಬೆಂಬಲದ ಬಗ್ಗೆ ಟ್ರೆಂಡ್‌ಗಳು ಬರಲಾರಂಭಿಸಿವೆ. ದೇಶವು ಈಗ ತನ್ನ ಸಮಸ್ಯೆಗಳ ಮೇಲೆ ಮತ ಚಲಾಯಿಸುತ್ತದೆ, ಉದ್ಯೋಗ, ಕುಟುಂಬ ಮತ್ತು ಭವಿಷ್ಯಕ್ಕಾಗಿ ಮತ ಚಲಾಯಿಸುತ್ತದೆ. ಭಾರತ ದಾರಿ ತಪ್ಪುವುದಿಲ್ಲ” ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ಪವನ್ ಖೇರಾ ಮಾತನಾಡಿ, “ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹಿಂದೂ ಅಥವಾ ಮುಸ್ಲಿಂ ಎಂಬ ಪದಗಳ ಉಲ್ಲೇಖ ಎಲ್ಲಿಯೂ ಇಲ್ಲ. ನಾವು ನ್ಯಾಯದ ಬಗ್ಗೆ ಮಾತನಾಡಿದ್ದೇವೆ. ಯುವಕರು, ಬುಡಕಟ್ಟು ಜನಾಂಗದವರು, ಕಾರ್ಮಿಕರು, ಮಹಿಳೆಯರಿಗೆ ನ್ಯಾಯ ಎಂದಿದ್ದೇವೆ. ನಾವು ಅಂತಹ ಯಾವುದೇ ವಿಭಜಕ ಪದವನ್ನು ಬಳಸಿದ್ದೇವೆಯೇ ಎಂದು ಕಂಡುಹಿಡಿಯಲು ಜನರು ಇಂದು ನಮ್ಮ ಪ್ರಣಾಳಿಕೆಯನ್ನು ಓದುತ್ತಿದ್ದಾರೆ. ಅದಕ್ಕಾಗಿ ಪ್ರಧಾನಿಗೆ ಧನ್ಯವಾದಗಳು. ಕಾಂಗ್ರೆಸ್ ಅಂತಹ ಯಾವುದೇ ಪದಗಳನ್ನು ಬಳಸಿಲ್ಲ ಎಂದು ಅವರು ಅರಿತುಕೊಳ್ಳುತ್ತಿದ್ದಾರೆ. ನಮ್ಮ ಪ್ರಣಾಳಿಕೆಗಾಗಲೀ, ನಮ್ಮ ಮನಸ್ಸನ್ನಾಗಲೀ, ಸಂವಿಧಾನಕ್ಕಾಗಲೀ, ಸಮಾಜಕ್ಕಾಗಲೀ ಇಂತಹ ಪದಗಳಿಗೆ ಸ್ಥಾನವಿಲ್ಲ” ಹೇಳಿದ್ದಾರೆ.

ಇಂದು ರಾಜಸ್ಥಾನದ ಬನ್ಸ್‌ವಾರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಪ್ರಧಾನಿ ಮೋದಿಯೇ ಖುದ್ದು ಮುಸಲ್ಮಾನರ ವಿರುದ್ಧ ದ್ವೇಷ ಭಾಷಣಗೈದಿದ್ದು, ದೊಡ್ಡ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಟೀಕಿಸುವ ಭರದಲ್ಲಿ ಮುಸ್ಲಿಮ್ ಸಮುದಾಯವನ್ನು ಎಳೆದು ತಂದ ಮೋದಿ, “ಈ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮ್ ಸಮುದಾಯಕ್ಕೆ ನೀಡುವುದೇ ಕಾಂಗ್ರೆಸ್‌ನ ಗ್ಯಾರಂಟಿ” ಎಂದು ಹೇಳಿಕೆ ನೀಡಿದ್ದಾರೆ.

“ಈ ದೇಶದ ಸಂಪತ್ತಿನ ಮೊದಲ ಅಧಿಕಾರ ಇರುವುದು ಮುಸ್ಲಿಮರಿಗೆ ಎಂದು ಈ ಮೊದಲಿದ್ದ ಕಾಂಗ್ರೆಸ್ ಸರ್ಕಾರ ಹೇಳಿತ್ತು. ಇದರ ಅರ್ಥ ಏನೆಂದರೆ, ದೇಶದ ಸಂಪತ್ತನ್ನು ಒಟ್ಟುಗೂಡಿಸಿ, ಯಾರಿಗೆ ಹೆಚ್ಚು ಮಕ್ಕಳಿದ್ದಾರೋ ಅವರಿಗೆ ನೀಡುವುದಾಗಿದೆ. ನುಸುಳುಕೋರರಿಗೆ ಹಂಚಲಿದೆ. ನೀವು ಕಷ್ಟಪಟ್ಟು ದುಡಿದು ಗಳಿಸಿದ ಸಂಪತ್ತು, ಹಣವನ್ನು ನುಸುಳುಕೋರರಿಗೆ ನೀಡಬೇಕೇ? ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ? ಇದು ಕಾಂಗ್ರೆಸ್‌ನ ಪ್ರಣಾಳಿಕೆ ಹೇಳುತ್ತಿದೆ. ದೇಶದ ಜನರ ವೈಯಕ್ತಿಕ ಆಸ್ತಿಗಳನ್ನು ಕಸಿದು, ಅವುಗಳನ್ನು ಕಾಂಗ್ರೆಸ್ ಮುಸ್ಲಿಮರಿಗೆ ನೀಡಲಿದೆ. ಇದು ನಗರ ನಕ್ಸಲರ ಯೋಚನೆಯಾಗಿದೆ. ನಮ್ಮ ಹೆಣ್ಣು ಮಕ್ಕಳ ಮಂಗಳಸೂತ್ರ ಕೂಡ ಉಳಿಯುವುದಿಲ್ಲ. ಅಲ್ಲಿಯವರೆಗೂ ಬೇಕಾದರೆ ಕಾಂಗ್ರೆಸ್ ಹೋಗಬಹುದು ಎಂದು ನಾನು ಹೇಳಬಯಸುತ್ತೇನೆ” ಎಂದು ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ದ್ವೇಷ ಭಾಷಣಗೈದಿದ್ದಾರೆ.

LEAVE A REPLY

Please enter your comment!
Please enter your name here