ಮೋದಿಯವರ ದೀಪದ ಸಂದೇಶಕ್ಕೆ ಟೀಕೆಗಳ ಬಿರುಸು ಬಾಣ: ಇನ್ನು, ಮೊಂಬತ್ತಿಗೂ ಬರ ಎಂದ ಕಣ್ಣನ್ ಗೋಪಿನಾಥನ್

0
1257

ಸನ್ಮಾರ್ಗ ವಾರ್ತೆ

ನವದೆಹಲಿ, ಏಪ್ರಿಲ್ 3- ಎಪ್ರಿಲ್ ಐದರ ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ತಮ್ಮ ಮನೆಯಲ್ಲಿ ಎಲ್ಲರೂ ಒಂಬತ್ತು ನಿಮಿಷ ದೀಪ ಬೆಳಗಿಸಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಸಂದೇಶಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.

ಸಂಸದ ಶಶಿತರೂರ್, ಸಾಹಿತಿ ರಾಮಚಂದ್ರ ಗುಹಾ, ಕಣ್ಣನ್ ಗೋಪಿನಾಥನ್ ಸಹಿತ ಅನೇಕ ಮಂದಿ ಮೋದಿಯವರ ಕರೆಯನ್ನು ಲೇವಡಿ ಮಾಡಿದ್ದಾರೆ.

ಟಾರ್ಚ್, ಬ್ಯಾಟರಿ ಹಾಗೂ ಮೊಂಬತ್ತಿಗೆ ಈ ದೇಶದಲ್ಲಿ ಈವರೆಗೂ ಬರ ಬಂದಿರಲಿಲ್ಲ. ಈಗ ಅದಕ್ಕೂ ಬರ ಬಂದೀತು ಎಂದು ಕಣ್ಣನ್ ಗೋಪಿನಾಥನ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿಯವರ ಕರೆಯನ್ನು ಟೀಕಿಸಿರುವ ಸಂಸದ ಶಶಿ ತರೂರ್ ಅವರು, ಮೋದಿ ಅವರು ಪ್ರಧಾನಿಯನ್ನು ಪ್ರಧಾನ ಶೋ ಮ್ಯಾನ್ ಎಂದು ಕುಟುಕಿದ್ದಾರೆ.

 

ಜನರ ಸಂಕಟ, ಅಗತ್ಯಗಳು, ಆರ್ಥಿಕ ದುಸ್ಥಿತಿ ಮುಂತಾದವುಗಳ ಬಗ್ಗೆ ಒಂದಕ್ಷರವನ್ನೂ ಹೇಳದೆ ಪ್ರಧಾನಿಯವರು ಕೇವಲ ಶೋ ನಡೆಸಿದ್ದಾರೆ ಎಂದವರು ಟ್ವೀಟ್ ಮಾಡಿದ್ದಾರೆ. ಲಾಕ್ ಡೌನ್ ನಂತರದ ಸಮಸ್ಯೆಗಳೋ ಅಥವಾ ಮುಂದಿನ ಯೋಜನೆಗಳೋ ಯಾವುದರ ಬಗ್ಗೆಯೂ ಪ್ರಧಾನಿಯವರು ಮಾತಾಡಿಲ್ಲ. ಇದು ಭಾರತದ ಪ್ರಧಾನಿಯವರ ಫೀಲ್ ಗುಡ್ ಅವತರಣಿಕೆ ಇಂದು ಅವರು ಟ್ವೀಟ್ ಮಾಡಿದ್ದಾರೆ

ಅದೇವೇಳೆ ರಾಮಚಂದ್ರ ಗುಹಾ ಅವರು ಕೂಡ ಪ್ರಧಾನಿಯವರ ಸಂದೇಶವನ್ನು ಪ್ರಶ್ನಿಸಿದ್ದು ಇದು ಈ ದುರ್ದಿನ ಕಾಲದ ಪ್ರಹಸನವಾಗಿದೆ ಎಂದು ಹೇಳಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ 9.0 ಎಂದು ಅವರು ಇದಕ್ಕೆ ಹೆಸರಿಸಿದ್ದಾರೆ.

ಓರ್ವ ಮಹಾನ್ ಚಿಂತಕ ಒಂದು ಸಂದರ್ಭದಲ್ಲಿ ಹೀಗೆ ಹೇಳಿದ್ದರು: ಇತಿಹಾಸ ಪುನರಾವರ್ತನೆಯಾಗಲಿದೆ. ಮೊದಲು ಅದು ದುರಂತವಾಗಿ ಬಳಿಕ ಪ್ರಹಸನವಾಗಿ ಬರುತ್ತದೆ. ದುರಂತ ಕಾಲದ 21ನೇ ಶತಮಾನದ ಭಾರತದಲ್ಲಿ ನಾವು ಪ್ರಹಸನವನ್ನು ನೋಡುತ್ತಿದ್ದೇವೆ ಎಂದವರು ಟ್ವೀಟ್ ಮಾಡಿದ್ದಾರೆ.

ಮೋದಿ ಇನ್ನೂ ಕೂಡ ವಾಸ್ತವವನ್ನು ಅರಿತಿಲ್ಲ ಎಂದು ತೃಣಮೂಲ ಕಾಂಗ್ರೆಸ್ಸಿನ ಸಂಸದೆ ಮಹುವ ಮೊಯಿತ್ರ ಹೇಳಿದ್ದಾರೆ. ಭಾರತದ ಒಟ್ಟು ಆಂತರಿಕ ಉತ್ಪಾದನೆಯ ಎಂಟರಿಂದ ಹತ್ತು ಶೇಕಡಾಕ್ಕೆ ಸಮಾನವಾದ ಆರ್ಥಿಕ ಪ್ಯಾಕೇಜನ್ನು ಮೋದಿಯವರು ಘೋಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಾಜಿ ಅರ್ಥ ಸಚಿವ ಪಿ. ಚಿದಂಬರಂ ಕೂಡ ಟ್ವೀಟ್ ಮಾಡಿದ್ದು, ನೀವು ಹೇಳುವ ಮಾತುಗಳನ್ನು ನಾವು ಆಲಿಸುವೆವು, ಹಾಗೆಯೇ ನೀವು ಆರೋಗ್ಯ ಮತ್ತು ಅರ್ಥ ತಜ್ಞರು ಹೇಳುವ ಮಾತುಗಳನ್ನೊಮ್ಮೆ ಆಲಿಸಿ ಎಂದವರು ಹೇಳಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.