ಟ್ರಂಪ್ ಸುಂಕದ ಮುಂದೆ ಮೋದಿ ಸೌಮ್ಯವಾಗಿ ಮಣಿಯುತ್ತಾರೆ; ರಾಹುಲ್ ಗಾಂಧಿ ಟೀಕೆ

0
1052

ಸನ್ಮಾರ್ಗ ವಾರ್ತೆ

ದೆಹಲಿ: ಅಮೆರಿಕದೊಂದಿಗೆ ಭಾರತ ಒಪ್ಪಂದ ಮಾಡಿಕೊಳ್ಳಲಿದೆ ಎಂಬ ಹಿನ್ನೆಲೆಯಲ್ಲಿ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಒಪ್ಪಂದವು ಸಂಪೂರ್ಣವಾಗಿ ಭಾರತಕ್ಕೆ ಲಾಭದಾಯಕವಾಗಿರುವಾಗ ಮಾತ್ರ ಸಹಿ ಮಾಡಲಾಗುವುದು, ರಾಷ್ಟ್ರ ಹಿತಾಸಕ್ತಿ ಯಾವಾಗಲೂ ಮೊದಲ ಪ್ರಾಶಸ್ತ್ಯ” ಎಂದು ಪಿಯೂಷ್ ಗೋಯಲ್ ಅವರು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ‘ಎಕ್ಸ್’ ನಲ್ಲಿ ಟ್ವೀಟ್ ಮಾಡುತ್ತಾ “ಪಿಯೂಷ್ ಗೋಯಲ್ ಎಷ್ಟು ಎದೆ ತಟ್ಟಿದರೂ ಪರವಾಗಿಲ್ಲ, ಟ್ರಂಪ್ ಅವರ ಸುಂಕದ ಗಡುವಿಗೆ ಮೋದಿಯವರು ಸೌಮ್ಯವಾಗಿ ಮಣಿಯುತ್ತಾರೆ ಎಂಬುದು ನನಗೆ ಗೊತ್ತಿದೆ” ಎಂದು ಟೀಕಿಸಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜುಲೈ 9ರೊಳಗೆ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಗಡುವು ನಿಗದಿಪಡಿಸಿದ್ದು, ಇದರ ನಡುವೆ ಈ ವಾಕ್ಸಮರ ನಡೆದಿದ್ದು ಗಮನಾರ್ಹವಾಗಿದೆ. ಭಾರತ ಮತ್ತು ಅಮೆರಿಕದ ನಡುವಿನ ಹೊಸ ವ್ಯಾಪಾರ ಒಪ್ಪಂದದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೋಯಲ್, “ಮುಕ್ತ ವ್ಯಾಪಾರ ಒಪ್ಪಂದಗಳು ಎರಡೂ ದೇಶಗಳಿಗೆ ಲಾಭವಾಗಬೇಕು, ಭಾರತದ ವಾಣಿಜ್ಯ ಹಿತಾಸಕ್ತಿಯು ಯಾವಾಗಲೂ ಪ್ರಮುಖವಾಗಿರಬೇಕು” ಎಂದು ಸ್ಪಷ್ಟಪಡಿಸಿದರು.

ಇತ್ತ, ಅಮೆರಿಕದ ಟ್ರಂಪ್ ಸರಕಾರವು, ಭಾರತೀಯ ಉತ್ಪನ್ನಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವುದಕ್ಕೆ ಪ್ರತಿಯಾಗಿ ಭಾರತವೂ ಅಮೆರಿಕದ ಕೆಲ ಉತ್ಪನ್ನಗಳ ಮೇಲೆ ಪ್ರತಿಸುಂಕ ವಿಧಿಸಲು ತೀರ್ಮಾನಿಸಿದ್ದು, ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳು ಒತ್ತಡಕ್ಕೆ ಒಳಗಾಗುವ ಸಾಧ್ಯತೆ ವ್ಯಕ್ತವಾಗಿದೆ.

ಇದರ ಜೊತೆಗೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವೇಷ ಕೊನೆಗೊಂಡಿದೆ ಎಂಬ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗೆ ಪ್ರಧಾನಿ ಮೋದಿ ಯಾವುದೇ ಪ್ರತಿಕ್ರಿಯೆ ನೀಡದಿರುವುದನ್ನೂ ಕಾಂಗ್ರೆಸ್ ತೀವ್ರವಾಗಿ ಟೀಕಿಸಿದೆ. ಪ್ರಧಾನಿ ಮೌನವಾಗಿ ಕುಳಿತುಕೊಂಡಿರುವುದು ನಾಜೂಕಾದ ರಾಜತಾಂತ್ರಿಕ ವಿಷಯಗಳ ಬಗ್ಗೆ ನಿರ್ಲಕ್ಷ್ಯವಲ್ಲದೆ ಇನ್ನೇನು ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಎತ್ತಿದೆ.