✍️ ಶೇಕ್ ಮುಹಮ್ಮದ್ ಕಾರಕ್ಕುನ್ನು
ಇಸ್ಲಾಮ್ ಧರ್ಮವು ಭಯ ಮತ್ತು ಹಸಿವು ಮುಕ್ತ ಸಮಾಜವನ್ನು ಕಲ್ಪಿಸುತ್ತದೆ. ಎಲ್ಲಾ ಮಾನವರ ಮೂಲಭೂತ ಅಗತ್ಯಗಳನ್ನು ಪೂರೈಸಬೇಕು ಎಂದು ಅದು ಬಯಸುತ್ತದೆ. ಇವುಗಳಲ್ಲಿ ಪ್ರಮುಖವಾದದ್ದು ಹಸಿವಿನಿಂದ ಮುಕ್ತಿ. “ಯಾರೂ ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ ಪ್ರವಾದಿಯವರು(ಸ) ಹೀಗೆ ಹೇಳಿರುವರು, ನೆರೆಯವನು ಹಸಿದಿರುವಾಗ ಹೊಟ್ಟೆ ತುಂಬ ಉಣ್ಣುವವನು ನಮ್ಮವನಲ್ಲ.”
ಮಾನವನ ಭೌತಿಕ ಅಗತ್ಯಗಳಲ್ಲಿ ಆಹಾರವು ಅತ್ಯಂತ ಮುಖ್ಯವಾಗಿದೆ. ಗುಲಿಸ್ತಾನ್ ಕಥೆಗಳಲ್ಲಿ, ಮುಹಮ್ಮದ್ ಸಅದಿ ಶಿರಾಸಿ ಹೇಳುತ್ತಾರೆ: “ಹಸಿವು ಎಂಬುದೇ ಇಲ್ಲದಿದ್ದರೆ, ಒಂದು ಗುಬ್ಬ ಚ್ಚಿಯೂ ಬೇಟೆಗಾರನ ಬಲೆಗೆ ಸಿಲುಕುತ್ತಿರಲಿಲ್ಲ. ಹಸಿವು ಇಲ್ಲದಿದ್ದರೆ, ಬೇಟೆಗಾರ ಬಲೆ ನೇಯುತ್ತಿರಲಿಲ್ಲ ಅಥವಾ ಬಲೆ ಬೀಸುತ್ತಿರಲಿಲ್ಲ.”
ಹಸಿವಿನಿಂದ ಒಂಟೆಯ ಸಗಣಿ ತಿನ್ನಲು ಮುಂದಾದ ಆಫ್ರಿಕನ್ ಮಗುವಿನ ಹೃದಯ ವಿದ್ರಾವಕ ಚಿತ್ರವು ದಶಕಗಳ ನಂತರವೂ ಅನೇಕ ಜನರ ಮನಸ್ಸಿನಲ್ಲಿ ಹಸಿರಾಗಿದೆ. ಹಸಿರೆಲೆಗಳನ್ನು ತಿಂದು ಹಸಿವು ತಣಿಸುತ್ತಿರುವ ಲಕ್ಷಾಂತರ ಜನರು ಪ್ರಪಂಚದ ವಿವಿಧ ಭಾಗಗಳಲ್ಲಿ ಇನ್ನೂ ಇದ್ದಾರೆ. ಸತ್ತ ಮಗುವಿನ ದೇಹವನ್ನು ಸುಟ್ಟು ತಿನ್ನಲು ಸಿದ್ಧರಿದ್ದ ಪೋಷಕರ ಬಗ್ಗೆ ದಲೈ ಲಾಮಾ ಮಾತನಾಡುತ್ತಾರೆ.
ಕನ್ಸರ್ನ್ ವರ್ಲ್ಡ್ವೈಡ್ ಮತ್ತು ವೆಲ್ತ್ ಹಂಗರ್ ಹೆಲ್ಪ್ನಿಂದ ವಾರ್ಷಿಕವಾಗಿ ಪ್ರಕಟಿಸಲ್ಪಡುವ ಗ್ಲೋಬಲ್ ಹಂಗರ್ ಇಂಡೆಕ್ಸ್ (GHI) ನೀಡುವ ಲೆಕ್ಕಾಚಾರದ ಪ್ರಕಾರ ಪ್ರಪಂಚವು 800 ಕೋಟಿ ಜನರಿಗೆ ಸಾಕಾಗುವಷ್ಟು ಆಹಾರವನ್ನು ಉತ್ಪಾದಿಸುತ್ತದೆ. ಆದರೂ 73 ಕೋಟಿ 36 ಲಕ್ಷ ಜನರು ಪ್ರತಿದಿನ ಹಸಿವಿನಿಂದ ಬಳಲುತ್ತಿದ್ದಾರೆ. ಅಂದರೆ 11 ಜನರಲ್ಲಿ ಒಬ್ಬರು ಹಸಿವಿನಿಂದ ಬಳಲುತ್ತಿದ್ದಾರೆ.
ಎಲ್ಲಾ ಮಕ್ಕಳ ಸಾವುಗಳಲ್ಲಿ ಅರ್ಧದಷ್ಟು ಅಪೌಷ್ಠಿಕತೆಯಿಂದ ಸಂಭವಿಸುತ್ತವೆ. ಪ್ರತೀ ವರ್ಷ ಒಂಬತ್ತು ಮಿಲಿಯನ್ ಜನರು ಹಸಿವಿನಿಂದ ಸಾಯುತ್ತಾರೆ. ಆಫ್ರಿಕಾದಲ್ಲಿ ಪ್ರತೀ ಐದು ಜನರಲ್ಲಿ ಒಬ್ಬರು ಪ್ರತಿದಿನ ಹಸಿವಿನಿಂದ ಸಾಯುತ್ತಾರೆ. ವಿಶ್ವದ ಜನಸಂಖ್ಯೆಯ ಶೇಕಡಾ 35 ರಷ್ಟು ಅಥವಾ 2.8 ಶತ ಕೋಟಿ ಜನರಿಗೆ ತಿನ್ನಲು ಸಾಕಷ್ಟು ಆಹಾರವಿಲ್ಲ.
ಅಂಕಿಅಂಶಗಳ ಪ್ರಕಾರ ಪ್ರತಿದಿನ ಐದು ವರ್ಷದೊಳಗಿನ 13,100 ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಐದು ವರ್ಷದೊಳಗಿನ ಮಕ್ಕಳ ಸಾವುಗಳಲ್ಲಿ ಶೇ. 50 ರಷ್ಟು ಅಪೌಷ್ಠಿಕತೆಯಿಂದ ಸಂಭವಿಸುತ್ತಿವೆ.
ಆಹಾರದ ಬೆಲೆ
ಹಸಿದ ವ್ಯಕ್ತಿಗೆ ಸಿಗುವ ಆಹಾರದ ಮೌಲ್ಯವನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಸ್ವೀಕರಿಸುವವರು ಅದನ್ನು ನೀಡುವವರಿಗೆ ತೋರಿಸುವ ಕೃತಜ್ಞತೆಗಳಿಗೆ ಗಡಿ ರೇಖೆಗಳಿರುವುದಿಲ್ಲ.
ಪೊನ್ನಾನಿಯ ಅಲವಿ ಮತ್ತು ಗೋವಿಂದನ್ ಕುಟ್ಟಿ ಆಪ್ತ ಸ್ನೇಹಿತರಾಗಿದ್ದರು. ಉತ್ತಮ ಸ್ನೇಹಿತರು. ಅಲವಿಯ ತಂದೆಗೆ ಒಂದು ವ್ಯಾಪಾರವಿತ್ತು. ಅಲವಿ ಯಾವಾಗಲೂ ತನ್ನ ತಂದೆಗೆ ತಿಳಿಯದೆ ತನ್ನ ಬಡ ಸ್ನೇಹಿತ ಗೋವಿಂದನ ಬಟ್ಟಲನ್ನು ಹಣ್ಣುಗಳಿಂದ ತುಂಬಿಸುತ್ತಿದ್ದನು. ಒಂದು ದಿನ, ಅವನು ಕದಿಯುವಾಗ ಸಿಕ್ಕಿಬಿದ್ದರೂ, ಅವನು ಯಾರಿಗಾಗಿ ಹಣ್ಣನ್ನು ಕದಿಯುತ್ತಿದ್ದೇನೆಂದು ತನ್ನ ತಂದೆಗೆ ಹೇಳಲಿಲ್ಲ. ಹೀಗಾಗಿ, ಅವನು ತನ್ನ ಸ್ನೇಹಿತನ ಸ್ವಾಭಿಮಾನವನ್ನು ರಕ್ಷಿಸಿದನು ಮತ್ತು ಅವನ ಹಸಿವನ್ನು ನೀಗಿಸಲು ದಾರಿ ಮಾಡಿಕೊಟ್ಟನು. ದಶಕಗಳ ನಂತರ, ಅಲವಿ ಒಬ್ಬ ಮಹಾನ್ ವ್ಯಕ್ತಿಯಾದನು. ಗೋವಿಂದನ್ಕುಟ್ಟಿ ಎಡಸ್ಸೇರಿ ಗೋವಿಂದನ್ ನಾಯರ್ ಎಂಬ ಪ್ರಮುಖ ಸಾಹಿತಿಯಾದರು.
ತನ್ನ ಬಾಲ್ಯದಲ್ಲಿ ಹಸಿವನ್ನು ನೀಗಿಸಿಕೊಳ್ಳಲು ಒಂದು ಮಾರ್ಗವನ್ನು ಒದಗಿಸಿದ ಅಲವಿಯು ತನ್ನ ಮೇಲೆ ಎಷ್ಟು ಪ್ರಭಾವ ಬೀರಿದನು ಮತ್ತು ಅದು ಕೋಮು ಸಾಮರಸ್ಯಕ್ಕೆ ಹೇಗೆ ದಾರಿಯಾಯಿತು ಎಂಬುದನ್ನು ಎಡಸ್ಸೇರಿ ಅವರ ಕವಿತೆಗಳು ವಿವರಿಸುತ್ತವೆ.
`ದಿ ಆಲ್ಕೆಮಿಸ್ಟ್’ ಸೇರಿದಂತೆ ವಿಶ್ವಪ್ರಸಿದ್ಧ ಕೃತಿಗಳ ಲೇಖಕ ಬ್ರೆಝಿಲಿಯನ್ ಕಾದಂಬರಿಕಾರ ಪೌಲೊ ಕೊಯೆಲ್ಹೋ ತನ್ನ ಹಸಿವನ್ನು ನೀಗಿಸಲು ಆಹಾರ ನೀಡಿದ ವ್ಯಾಪಾರಿಯನ್ನು ಹುಡುಕುತ್ತಾ ಹೋದ ಕಥೆಯು ಎಲ್ಲರಿಗೂ ತಿಳಿದಿದೆ.
ಹಸಿದವರನ್ನು ಹುಡುಕುವವರು
ಉಮರ್ ಅಲ್-ಫಾರೂಕ್ ಅವರು ಮಾನವ ಇತಿಹಾಸದಲ್ಲಿ ಇಂದಿಗೂ ತಮ್ಮ ವ್ಯಕ್ತಿತ್ವದ ತೇಜಸ್ಸಿನಿಂದ ಎಲ್ಲರನ್ನೂ ಬೆರಗುಗೊಳಿಸಿರುವ ಆಡಳಿತಗಾರ. ಅವರತ್ತ ಗಮನ ಸೆಳೆದ ಅನೇಕ ಆಡಳಿತಾತ್ಮಕ ಮಾದರಿಗಳು ಮತ್ತು ಘಟನೆಗಳಿವೆ. ಅವುಗಳಲ್ಲಿ ಅತ್ಯಂತ ಗಮನಾರ್ಹವಾದದ್ದು ಹಸಿದವರನ್ನು ಹುಡುಕುವ ಅವರ ಪ್ರಯಾಣ. ಆ ಅಪ್ರತಿಮ ಜೀವನದ ಅಚ್ಚಳಿಯದ ಮಾದರಿಗಳು ಇತಿಹಾಸದ ಪುಟವನ್ನು ಅಲಂಕರಿಸಿವೆ.
ಖಲೀಫ ಉಮರುಲ್ ಫಾರೂಕ್ ರಾತ್ರಿಯಲ್ಲಿ ಜನರ ಯೋಗಕ್ಷೇಮ ಮತ್ತು ಕ್ಷಾಮದ ಸ್ಥಿತಿಯನ್ನು ಸ್ವತಃ ನೋಡಲು ಪ್ರಯಾಣಿಸುತ್ತಿದ್ದಾಗ, ಒಂದು ಮನೆಯಿಂದ ಮಕ್ಕಳ ಅಳು ಕೇಳಿಸಿತು. ಮಕ್ಕಳು ಒಲೆಯ ಮೇಲೆ ಏನನ್ನೋ ಕುದಿಸುತ್ತಿದ್ದ ಮಹಿಳೆಯ ಸುತ್ತಲೂ ಕುಳಿತುಕೊಂಡು ಜೋರಾಗಿ ಅಳುತ್ತಿದ್ದರು. ಮಕ್ಕಳು ಹಸಿವಿನಿಂದ ಅಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡ ಖಲೀಫರು ಮಹಿಳೆಯೊಡನೆ ತಾನು ಏನು ಬೇಯಿಸುತ್ತಿದ್ದಿ ಎಂದು ಕೇಳುತ್ತಾರೆ.
ಆ ಮಹಿಳೆ ಹೇಳಿದಳು: “ಇದು ನೀರು. ನಾನು ಇದನ್ನು ಕಲ್ಲಿನ ತುಂಡುಗಳನ್ನು ಹಾಕಿ ಕುದಿಸುತ್ತಿದ್ದೇನೆ. ಮಕ್ಕಳು ಆಹಾರ ಎಂದು ಭಾವಿಸಿ ಅಳುವುದನ್ನು ನಿಲ್ಲಿಸಲೆಂದು ಹೀಗೆ ಮಾಡುತ್ತಿದ್ದೇನೆ. ಮಕ್ಕಳು ಹಸಿವಿನಿಂದ ಅಳುತ್ತಿದ್ದಾರೆ. ಖಲೀಫ ಉಮರ್ ನಮ್ಮನ್ನು ಮರೆತಿದ್ದಾರೆ.”
ಈ ಮಾತುಗಳು ಉಮರುಲ್ ಫಾರೂಕ್ ಅವರ ಹೃದಯಕ್ಕೆ ಇರಿದಂತಾಯಿತು. ಅವರು ತುಂಬಾ ದುಃಖಿತರಾದರು. ಅವರು ಆ ಮಹಿಳೆಗೆ ತಾನು ಯಾರೆಂದು ಹೇಳಲಿಲ್ಲ. ಅವರು ಅಲ್ಲಿಂದ ಮರಳಿ ಖಜಾನೆಯಿಂದ ಗೋಧಿ ಹಿಟ್ಟು ಮತ್ತು ಇತರ ಅಗತ್ಯ ವಸ್ತುಗಳ ಚೀಲವನ್ನು ಹೊತ್ತು ಕೊಂಡು ಆ ಮಹಿಳೆಯ ಮನೆಗೆ ತಲುಪಿಸಿ ಅದರಿಂದ ಸ್ವತಃ ಆಹಾರ ಬೇಯಿಸಿ ಮಕ್ಕಳಿಗೂ ಆಕೆಗೂ ಬಡಿಸಿಕೊಟ್ಟು ಅವರು ತಿನ್ನುವುದನ್ನು ನೋಡಿ ನಿಂತು ಬಿಟ್ಟರು.
ಆ ಮಹಿಳೆಗೆ ಇದು ಖಲೀಫಾ ಉಮರುಲ್ ಫಾರೂಕ್ ಎಂದು ತಿಳಿದಿರಲಿಲ್ಲ. ಖಲೀಫ ಉಮರ್ ತನ್ನನ್ನು ಹುಡುಕುತ್ತಿರುವವರು ಬರುವ ಮೊದಲು ಅವರ ಬಳಿ ತಲುಪುವ ಕೆಲಸವನ್ನು ಮಾಡುತ್ತಿದ್ದರು. ಅಂತಹ ವಿಧಾನಗಳೇ ಅವರನ್ನು ಮಾನವ ಇತಿಹಾಸದಲ್ಲಿ ವಿಶಿಷ್ಟವಾಗಿಸಿದವು.
ಮಿತಿಯಿಲ್ಲದ ಆತ್ಮಸಂತ್ರಪ್ತಿ
ಅನೇಕ ಜನರಿಗೆ ವಿಭಿನ್ನ ನೆಚ್ಚಿನ ಆಹಾರಗಳಿವೆ. ಅಲ್ಲದೆ, ಅವರು ತಮ್ಮ ನೆಚ್ಚಿನ ಆಹಾರವನ್ನು ತಿನ್ನುವುದರಿಂದ ಪಡೆಯುವ ತೃಪ್ತಿ ಎಷ್ಟು ಕಾಲ ಇರುತ್ತದೆ? ಎಲ್ಲರಿಗೂ, ಇದು ಕೆಲವೇ ಗಂಟೆಗಳಾಗಿರುತ್ತದೆ. ಆತ್ಮ ಸಂತೃಪ್ತಿಯಿಂದ ಇತರರಿಗಾಗಿ ಕೆಲಸ ಮಾಡುವುದರಿಂದ ಅವರು ಪಡೆಯುವ ಆನಂದಕ್ಕೆ ಹೋಲಿಸಿದರೆ, ಅದು ತುಂಬಾ ಕಡಿಮೆ ಮತ್ತು ಅತ್ಯಲ್ಪವಾಗಿರುತ್ತದೆ.
ಪ್ರವಾದಿಯವರ(ಸ) ಮಗಳು ಫಾತಿಮಾ ಗರ್ಭಿಣಿಯಾಗಿದ್ದರು. ಅವರಿಗೆ ವಿಶಿಷ್ಟವಾದ ಖರ್ಜೂರ ತಿನ್ನಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಆದರೆ ಅವರ ಪ್ರೀತಿಯ ಪತಿ ಹಝ್ರತ್ ಅಲಿ(ರ) ಬಡವರಾಗಿದ್ದರು, ಆದ್ದರಿಂದ ಅವರು ತನ್ನ ಆಸೆಯನ್ನು ವ್ಯಕ್ತಪಡಿಸಲು ಹಿಂಜರಿದರು. ಒಂದು ದಿನ, ಅವರು ಒಟ್ಟಿಗೆ ಇದ್ದಾಗ, ಖರ್ಜೂರ ದೊರೆತಿದ್ದರೆ ಒಳ್ಳೆಯದು ಎಂದು ಫಾತಿಮಾ ಹೇಳಿದರು. ಆಗ ಅಲಿ(ರ)ಯವರು ತಕ್ಷಣ ಮಾರುಕಟ್ಟೆಗೆ ಹೋಗಿ ಕೆಲವು ಖರ್ಜೂರಗಳನ್ನು ಎರವಲು ಪಡೆದುಕೊಂಡು ಬಂದರು. ಹಿಂತಿರುಗುವಾಗ, ಒಬ್ಬ ವ್ಯಕ್ತಿ ಅಲಿಯವರನ್ನು ಬಳಿ ಕರೆದು ತನಗೆ ಜೋರಾಗಿ ಹಸಿವಾಗುತ್ತಿದೆ, ನಾನು ಈ ಹಸಿವನ್ನು ತಾಳಲಾರೆ, ಏನಾದರೂ ನೀಡುವಂತೆ ಕೇಳಿ ಕೊಂಡನು.
ಇದನ್ನು ಕೇಳಿದ ಅಲಿ(ರ) ಹೆಚ್ಚು ಯೋಚಿಸದೆ ತನ್ನಲ್ಲಿದ್ದ ಖರ್ಜೂರದ ಪ್ಯಾಕೆಟ್ ಅನ್ನು ಅವನಿಗೆ ಕೊಟ್ಟು ಬರಿಗೈಯಲ್ಲಿ ಮನೆಗೆ ಹಿಂತಿರುಗಿದರು. ಬಳಿಕ ಪತ್ನಿಯೊಡನೆ ನಡೆದ ಘಟನೆಯನ್ನು ವಿವರಿಸಿದರು. ಇದನ್ನು ಆಲಿಸಿದ ಫಾತಿಮಾ(ರ), ನೀವು ಅವುಗಳನ್ನು ತಂದು ನಾನು ತಿಂದಿದ್ದರೆ, ನನಗೆ ಸ್ವಲ್ಪ ಸಮಯದವರೆಗೆ ಸಂತೋಷವಾಗುತ್ತಿತ್ತು. ಆದರೆ ನೀವು ನಿಮ್ಮ ಜೀವನದ ಕೊನೆಯವರೆಗೂ ಸಂತೋಷದಿಂದ ನೆನಪಿನಲ್ಲಿ ಉಳಿಯುವ ಕಾರ್ಯವನ್ನು ಮಾಡಿದ್ದೀರಿ. “ನನಗೆ ಅಂತಹ ಜೀವನ ಸಂಗಾತಿಯನ್ನು ನೀಡಿದ ಅಲ್ಲಾಹನಿಗೆ ಎಲ್ಲಾ ಸರ್ವಸ್ತುತಿಗಳು” ಎಂದು ಹೇಳಿದರು.
ಅಂತಹ ಒಳ್ಳೆಯ ಕಾರ್ಯಗಳ ಸುದ್ದಿ ಕೂಡ ಎಲ್ಲರಿಗೂ ತುಂಬಾ ಹೃದಯಸ್ಪರ್ಶಿ ಮತ್ತು ತೃಪ್ತಿಕರವಾಗಿರುತ್ತದೆ. ಅಂತಹ ಘಟನೆಗಳು ಇತಿಹಾಸದಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳಲು ಮತ್ತು ಪೀಳಿಗೆಯಿಂದ ಪೀಳಿಗೆಗೆ ರವಾನಿಸಲ್ಪಡಲು ಇದೇ ಕಾರಣ.












