ಸನ್ಮಾರ್ಗ ವಾರ್ತೆ
ನಾಗ್ಪುರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷ ತುಂಬಲಿರುವ ಸಮಯದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. “75 ವರ್ಷವಾದರೆ ಸಂತೋಷದಿಂದ ಇತರರಿಗೆ ದಾರಿ ಮಾಡಿಕೊಡಬೇಕು” ಎಂಬ ಭಾಗವತ್ ಅವರ ಮಾತು, ಪ್ರಧಾನಿ ಮೋದಿಯವರಿಗೆ ಪರೋಕ್ಷವಾಗಿ ಹೇಳಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
ನಾಗ್ಪುರದಲ್ಲಿ ನಡೆದ ಆರ್ಎಸ್ಎಸ್ ಹಿರಿಯ ನಾಯಕ ಮೊರೊಪಂತ್ ಪಿಂಗ್ಲಾ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್, “ಶಾಲು ಹೊದಿಸಿ ಗೌರವಿಸುತ್ತಾರೆ ಅಂದರೆ, ಅದು ನಿವೃತ್ತಿಯಾಗುವ ಸೂಚನೆಯಾಗಿದೆ’ ಎಂದು ಮೊರೋಪಂತ್ ಹೇಳಿದ ಮಾತುಗಳನ್ನು ಉಲ್ಲೇಖ ಮಾಡಿದರು. “ಅವರು ವೃದ್ಧರಾಗಿಯೂ ಅವರಲ್ಲಿ ದೇಶಸೇವೆಯ ಜ್ವಾಲೆ ನಂದಿರಲಿಲ್ಲ, ಆದರೆ ಇತರರಿಗೆ ಅವಕಾಶ ಕೊಡಬೇಕು ಎಂಬ ಹಿತದೃಷ್ಟಿಯಿಂದ ಅವರು ಮೌಲ್ಯಮಾಪನ ಮಾಡಿದ್ದರು,” ಎಂದು ಭಾಗವತ್ ಹೇಳಿದರು.
ಈ ಹೇಳಿಕೆ ಪ್ರಧಾನಿ ಮೋದಿ ಮತ್ತು ಭಾಗವತ್ ಇಬ್ಬರೂ ಮುಂದಿನ ಸೆಪ್ಟೆಂಬರ್ನಲ್ಲಿ 75 ವರ್ಷವನ್ನು ಪೂರೈಸಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆಯ ಸಂಸದ ಸಂಜಯ್ ರಾವತ್, “ಮೋದಿ ಅವರು ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮುಂತಾದವರನ್ನು 75 ವರ್ಷ ತುಂಬಿದ ನಂತರ ಪಕ್ಷದಿಂದ ನಿವೃತ್ತಿ ಹೊಂದುವಂತೆ ಒತ್ತಾಯಿಸಿದ್ದರು. ಇದೇ ಮಾನದಂಡವನ್ನು ಅವರಿಗೂ ಅನ್ವಯಿಸಬೇಕೆಂದು ಭಾಗವತ್ ಸೂಚಿಸುತ್ತಿದ್ದಾರಾ?” ಎಂಬ ಪ್ರಶ್ನೆ ಎತ್ತಿದ್ದಾರೆ.
ಭಾಗವತ್ ಅವರ ಹೇಳಿಕೆಯ ನಂತರ, ಬಿಜೆಪಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ. ಈ ಮಾತು ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ಹೇಳಲಾಗಿಲ್ಲ ಮತ್ತು ಮೋದಿ ಅವರಿಗೆ ಈಗಾಗಲೇ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಎಂದು ಬಿಜೆಪಿ ಹೇಳಿದೆ. ಐದು ವರ್ಷಗಳ ಹಿಂದೆಯೇ ಈ ವಿಷಯವನ್ನು ಸ್ಪಷ್ಟಪಡಿಸಲಾಗಿತ್ತು ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಮೋಹನ್ ಭಾಗವತ್ ಅವರು ಹೇಳಿಕೆ ನೀಡಿದ ಅದೇ ದಿನ, ಅಮಿತ್ ಶಾ ಅವರು ಮತ್ತೊಂದು ಕಾರ್ಯಕ್ರಮದಲ್ಲಿ ತಮ್ಮ ನಿವೃತ್ತಿಯ ಬಳಿಕ ತಾನು ಕೈಗೊಳ್ಳುವ ಆಕಾಂಕ್ಷೆಗಳ ಬಗ್ಗೆ ಮಾತನಾಡಿದ್ದು ಗಮನಾರ್ಹ.
ತಾನು ಯಾವಾಗ ನಿವೃತ್ತಿಯಾಗುತ್ತೇನೆ ಎಂದು ಅವರು ಸ್ಷಷ್ಟವಾಗಿ ಹೇಳದಿದ್ದರೂ, ನಿವೃತ್ತಿಯ ನಂತರ ವೇದಗಳು, ಉಪನಿಷತ್ತುಗಳು ಮತ್ತು ಸಾವಯವ ಕೃಷಿಗೆ ತಮ್ಮ ಸಮಯವನ್ನು ವಿನಿಯೋಗಿಸಲು ಬಯಸುವುದಾಗಿ ಅಮಿತ್ ಶಾ ಹೇಳಿದರು.












