ಈಜಿಪ್ಟ್: ಪುಟ್ಬಾಲಿಗ ಮುಹಮ್ಮದ್ ಸಲಾಹ್‌ರಿಂದ ಕೊರೋನ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್‌ಗಳ ಪೂರೈಕೆ

0
451

ಸನ್ಮಾರ್ಗ ವಾರ್ತೆ

ಕೈರೋ,ಜ.6: ಲಿವರ್ಪೂಲ್ ಪುಟ್‍ಬಾಲ್ ಕ್ಲಬ್‍ನ ಈಜಿಪ್ಟ್ ಸೂಪರ್ ಸ್ಟಾರ್‌ ಮುಹಮ್ಮದ್ ಸಲಾಹ್ ಕೊರೋನ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರುಗಳನ್ನು ತಲುಪಿಸಿದ್ದಾರೆ. ಆಕ್ಸಿಜನ್ ಸಿಲಿಂಡರ್‌ಗಳನ್ನು ಅವರು ಈಜಿಪ್ಟ್ ಬಾಸ್ಯೌರ್ ಸೆಂಟರ್ ಆಸ್ಪತ್ರೆಗೆ ತಲುಪಿಸಿದ್ದು ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್‌ಗಳ ಕೊರತೆಯ ಕಾರಣದಿಂದ ಸಾವುಗಳು ಸಂಭವಿಸಿದೆ ಎಂಬ ವಾರ್ತೆ ಅವರ ಗಮನಕ್ಕೆ ಬಂದಿದ್ದು ಕೂಡಲೇ ಸಲಾಹ್ ನಾಗ್ರಿಗ್ ಚ್ಯಾರಿಟಿ ಅಸೋಸಿಯೇಶನ್ ಮೂಲಕ ಸಿಲಿಂಡರ್‌ಗಳ ವ್ಯವಸ್ಥೆ ಮಾಡಿದರು.

ಚ್ಯಾರಿಟಿ ಕಾರ್ಯಕ್ರಮದಲ್ಲಿ ಸಲಾಹ್ ಸಕ್ರಿಯವಾಗಿದ್ದು ದೇಶದಲ್ಲಿ ಕೊರೋನ ತೀವ್ರಗೊಂಡ ಪ್ರದೇಶಗಳಿಗೆ ವೆಂಟಿಲೇಟರ್, ಆಹಾರ, ಇತರ ಅಗತ್ಯ ವಸ್ತುಗಳನ್ನು ತಲುಪಿಸಿ ಕೊಟ್ಟಿದ್ದರು. ಕಳೆದ ಎಪ್ರಿಲ್‍ನಲ್ಲಿ ಸಾವಿರಾರು ಟನ್ ಆಹಾರ ವಸ್ತುಗಳನ್ನು ನಾಗ್ರಿಗ್, ಬಸ್ಯೌರ್, ಗರ್ಭಿಯ ಗವರ್ನರಟ್‍ಗಳಿಗೆ ಅವರು ವಿತರಿಸಿದ್ದಾರೆ. ಹಲವು ಕುಟುಂಬಗಳಿಗೆ ಅವರು ಆರ್ಥಿಕ ಸಹಾಯವನ್ನು ಒದಗಿಸುತ್ತಿದ್ದಾರೆ.

2018ರ ಡಿಸೆಂಬರಿನಲ್ಲಿ ಬಸ್ಯೌರ್ ಆಸ್ಪತ್ರೆಗೆ ಆರ್ಥಿಕ ನೆರವು ನೀಡಿದ್ದರು. ಮನೆ ಕಟ್ಟಲು, ಕುಡಿಯುವ ನೀರು ವಿತರಣೆಗೆ ಜಮೀನು ಒದಗಿಸಿದ್ದರು. ಕಳೆದ ನವೆಂಬರ್ 13ಕ್ಕೆ ಕೊರೋನ ಅವರಿಗೂ ದೃಢಪಟ್ಟಿದ್ದು ಹಲವು ಪಂದ್ಯಗಳನ್ನು ಕಳೆದುಕೊಂಡಿದ್ದರು. ಸಿಲಿಂಡರ್ ಇಲ್ಲದೆ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಸಂಭವಿಸಿಲ್ಲ. ಈ ಕುರಿತ ಸುದ್ದಿ ಸುಳ್ಳು ಎಂದು ಈಜಿಪ್ಟ್ ಸರಕಾರದ ಆರೋಗ್ಯ ಸಚಿವ ಹಲಾ ಸಯಾದ್ ಹೇಳಿದರು. ಈಜಿಪ್ಟ್‌ನಲ್ಲಿ ಈವರೆಗೆ 1,44,583 ಕೊರೋನ ಕೇಸುಗಳು ದೃಢಪಟ್ಟಿದ್ದು 7,918 ಮಂದಿ ಮೃತಪಟ್ಟಿದ್ದಾರೆ.