ಮಾತೃಭಾಷೆ ಕೇವಲ ಭಾಷೆಯಲ್ಲ; ಅದು ಸಂಬಂಧಗಳ ಉಸಿರು

0
183

✍️ ಆಸೀಫ್ ಇಕ್ಬಾಲ್, ನೆಕ್ಕಿಲಾಡಿ

ನಮ್ಮ ಮಕ್ಕಳು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳನ್ನು ಕಲಿಯಲಿ, ಉನ್ನತ ಶಿಕ್ಷಣ ಪಡೆಯಲಿ, ಜಗತ್ತಿನೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡಲಿ. ಆದರೆ ಈ ಪ್ರಯಾಣದಲ್ಲಿ ಅವರು ತಮ್ಮ ಮನೆಯ ಭಾಷೆಯನ್ನು ಕಳೆದುಕೊಳ್ಳಬಾರದು. ಮಾತೃಭಾಷೆ ಎಂದರೆ ಕನ್ನಡ ಮಾತ್ರವಲ್ಲ. ಅದು ತುಳು ಆಗಿರಬಹುದು, ಬ್ಯಾರಿ ಆಗಿರಬಹುದು, ಕೊಂಕಣಿ, ಕೊಡವ, ಉರ್ದು ಅಥವಾ ನಮ್ಮ ಕುಟುಂಬದ ತಲೆಮಾರುಗಳು ಪ್ರೀತಿಯಿಂದ ಮಾತನಾಡಿಕೊಂಡು ಬಂದ ಯಾವುದೇ ಭಾಷೆಯಾಗಿರಬಹುದು.

ಇಂದು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸುವುದು ಸಾಮಾನ್ಯವಾಗಿದೆ. ಅದರ ಜೊತೆಗೆ ಮನೆಯಲ್ಲಿಯೂ ಮಕ್ಕಳೊಂದಿಗೆ ಇಂಗ್ಲಿಷ್‌ನಲ್ಲೇ ಮಾತನಾಡುವುದು ಒಂದು ರೀತಿಯ ಶೋಕಿಯಾಗಿ ಬೆಳೆದಿದೆ. ಇದರ ಪರಿಣಾಮವನ್ನು ನಾವು ತಕ್ಷಣ ಗಮನಿಸದೇ ಇರಬಹುದು. ಆದರೆ ಒಂದು ದಿನ…

ಅಜ್ಜ ತನ್ನ ಮೊಮ್ಮಗನೊಂದಿಗೆ ಮಾತನಾಡಲು ಬಯಸುತ್ತಾನೆ. ಅಜ್ಜಿಗೆ ತನ್ನ ಮೊಮ್ಮಗಳೊಂದಿಗೆ ಮನಬಿಚ್ಚಿ ಮಾತನಾಡಬೇಕೆನಿಸುತ್ತದೆ. ಮಾವ, ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ, ಮಾವಂದಿರು ತಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಬಯಸುತ್ತಾರೆ. ಮಕ್ಕಳಿಗೂ ಅವರೊಂದಿಗೆ ಆತ್ಮೀಯವಾಗಿರಬೇಕೆಂಬ ಆಸೆಯಿರುತ್ತದೆ. ಆದರೆ ಭಾಷೆ ಅರ್ಥವಾಗುವುದಿಲ್ಲ. ಪ್ರೀತಿ ಇದೆ, ಸಂಬಂಧ ಇದೆ, ಆತ್ಮೀಯತೆ ಇದೆ. ಆದರೆ ಮಾತುಗಳ ನಡುವೆ ಒಂದು ಕಾಣದ ಗೋಡೆ ನಿಂತಿರುತ್ತದೆ. ಅಜ್ಜಿ ಹೇಳುವ ಹಳೆಯ ಕಥೆಯ ಅರ್ಥ ಮಗುವಿಗೆ ತಿಳಿಯುವುದಿಲ್ಲ. ಅಜ್ಜ ಹೇಳುವ ಜೀವನದ ಅನುಭವ ಮಗುವಿನವರೆಗೆ ತಲುಪುವುದಿಲ್ಲ. ಸಂಬಂಧಿಕರು ಮುದ್ದಿನಿಂದ ಕರೆಯುವ ಪದಗಳ ಅರ್ಥವೇ ಮಗುವಿಗೆ ಗೊತ್ತಾಗುವುದಿಲ್ಲ. ಹೀಗೆ ನಿಧಾನವಾಗಿ ಒಂದೇ ಕುಟುಂಬದ ಎರಡು ತಲೆಮಾರುಗಳ ನಡುವೆ ಅಂತರ ಬೆಳೆಯುತ್ತದೆ.

ಇದು ಕೇವಲ ಭಾಷೆಯ ನಷ್ಟವಲ್ಲ. ಅದರೊಂದಿಗೆ ಕುಟುಂಬದ ನೆನಪುಗಳು, ಸಂಸ್ಕೃತಿ, ಹಳೆಯ ಕಥೆಗಳು, ಸಂಬಂಧಗಳ ಆತ್ಮೀಯತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ಸುಂದರ ಮಾಧ್ಯಮವೂ ಕಳೆದುಹೋಗುತ್ತದೆ. ನಾವು ಮಕ್ಕಳಿಗೆ ಉತ್ತಮ ಶಾಲೆ ಕೊಡುತ್ತಿದ್ದೇವೆ. ಉತ್ತಮ ಭವಿಷ್ಯ ಕೊಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಅವರ ಬೇರುಗಳೊಂದಿಗೆ ಮಾತನಾಡುವ ಭಾಷೆಯನ್ನು ಕೊಡುತ್ತಿದ್ದೇವೆಯೇ? ಮಕ್ಕಳು ಹೊರಗಿನ ಜಗತ್ತಿನೊಂದಿಗೆ ಮಾತನಾಡಲು ಕಲಿಯುತ್ತಿದ್ದಾರೆ. ಆದರೆ ತಮ್ಮವರೊಂದಿಗೆ ಹೃದಯದಿಂದ ಮಾತನಾಡುವ ಭಾಷೆಯನ್ನು ಕಳೆದುಕೊಳ್ಳುತ್ತಿದ್ದರೆ, ಅದು ನಿಜವಾದ ಪ್ರಗತಿಯೇ?

ಒಂದು ದಿನ ಅಜ್ಜ-ಅಜ್ಜಿ ನಮ್ಮ ನಡುವೆ ಇರಲಾರರು. ಸಂಬಂಧಿಕರ ಭೇಟಿಗಳು ಕಡಿಮೆಯಾಗಬಹುದು. ಆಗ ಉಳಿಯುವುದು ಅವರ ಫೋಟೋಗಳು, ನೆನಪುಗಳು ಮತ್ತು ಅವರು ಹೇಳುತ್ತಿದ್ದ ಮಾತುಗಳು. ಆ ಮಾತುಗಳ ಭಾಷೆಯೇ ಅರ್ಥವಾಗದಿದ್ದರೆ? “ಅವರು ನನ್ನನ್ನು ಎಷ್ಟು ಪ್ರೀತಿಸುತ್ತಿದ್ದರು” ಎಂಬುದು ಗೊತ್ತಾಗಬಹುದು. ಆದರೆ “ಅವರು ನನ್ನೊಂದಿಗೆ ಏನು ಹೇಳುತ್ತಿದ್ದರು” ಎಂಬುದು ಗೊತ್ತಾಗದೇ ಹೋಗಬಹುದು. ಅದು ನಮ್ಮ ಮಕ್ಕಳಿಗೆ ನಾವು ಕೊಡಬಾರದ ಒಂದು ನೋವು. ಆದ್ದರಿಂದ ಮಕ್ಕಳಿಗೆ ಇಂಗ್ಲಿಷ್ ಕಲಿಸೋಣ. ಅವರಿಗೆ ಜಗತ್ತಿನ ಬಾಗಿಲುಗಳನ್ನು ತೆರೆದುಕೊಡೋಣ. ಆದರೆ ಮನೆಯ ಬಾಗಿಲು ಮುಚ್ಚುವುದು ಬೇಡ.

ಅಜ್ಜ-ಅಜ್ಜಿಯರ ಮಾತು ಕೇಳುವಂತೆ ಮಾಡೋಣ. ಸಂಬಂಧಿಕರೊಂದಿಗೆ ಮಾತನಾಡುವಂತೆ ಮಾಡೋಣ. ತಮ್ಮ ಕುಟುಂಬದ ಭಾಷೆಯಲ್ಲಿ ನಗುವಂತೆ ಮಾಡೋಣ. ತಮ್ಮದೇ ಭಾಷೆಯಲ್ಲಿ ಪ್ರೀತಿಯನ್ನು ಅನುಭವಿಸುವಂತೆ ಮಾಡೋಣ. ಮಕ್ಕಳಿಗೆ ರೆಕ್ಕೆಗಳು ಬೇಕು — ಜಗತ್ತನ್ನು ಹಾರಲು. ಆದರೆ ಬೇರುಗಳೂ ಬೇಕು ತಮ್ಮವರನ್ನು ಮರೆಯದಿರಲು. 

ಇಂಗ್ಲಿಷ್ ಕಲಿಯಲಿ ನಮ್ಮ ಮಕ್ಕಳು. ಆದರೆ, ತಮ್ಮವರ ಮಾತು ಅರ್ಥವಾಗದಷ್ಟು ದೂರವಾಗಬಾರದು. ಭಾಷೆಯ ಅಂತರದಿಂದ ಸಂಬಂಧಗಳ ಅಂತರವಾಗದಿರಲಿ. ಮಾತೃಭಾಷೆ ಮನೆಯ ಭಾಷೆಯಾಗಿ ಉಳಿದರೆ, ಮನೆಯ ಪ್ರೀತಿಯೂ ತಲೆಮಾರುಗಳಿಂದ ತಲೆಮಾರಿಗೆ ಉಳಿಯುತ್ತದೆ.