✍️ ರಿಯಾಜ್ ಅಹ್ಮದ್ ಕೊಪ್ಪಳ
ಸದಸ್ಯರು, ಸೆಂಟರ್ ಫಾರ್ ಎಜುಕೇಶನಲ್ ರಿಸರ್ಚ್ ಆಂಡ್ ಎನಾಲಿಸೀಸ್(CERA)
ಪರೀಕ್ಷೆಯ ಫಲಿತಾಂಶ ಬಂದ ದಿನ, ಮಗು ಮನೆಗೆ ಬಂದೊಡನೆ ಕೇಳುವ ಮೊದಲ ಪ್ರಶ್ನೆ ಯಾವುದು ಗೊತ್ತೇ? “ಎಷ್ಟು ಪರ್ಸೆಂಟ್ ಬಂತು?” ಅಲ್ಲ. “ಅಪ್ಪ, ಈ ಬಾರಿಯೂ ನಾನೇ ಫಸ್ಟ್ ತಾನೇ?” ಎಂಬ ಆತಂಕ. ಮನೆಯಲ್ಲಿ, ಪಕ್ಕದ ಮನೆಯಲ್ಲಿ, ವಾಟ್ಸಾಪ್ ಗುಂಪುಗಳಲ್ಲಿ ಒಂದೇ ಚರ್ಚೆ — ಯಾರಿಗೆ ಎಷ್ಟು ಅಂಕ, ಯಾವ ಕಾಲೇಜಿನ ಕಟ್ಆಫ್ ಎಷ್ಟು, ಯಾವ ಕೋರ್ಸ್ಗೆ ಎಷ್ಟು ಪ್ಯಾಕೇಜ್. ಮಗು ಯಾವ ರೀತಿಯ ಮನುಷ್ಯನಾಗುತ್ತಿದೆ ಎಂಬ ಪ್ರಶ್ನೆಗೆ ಇಲ್ಲಿ ಜಾಗವೇ ಇಲ್ಲ.
ಇದು ಒಂದು ಮನೆಯ ಕಥೆಯಲ್ಲ; ಇಡೀ ವ್ಯವಸ್ಥೆಯ ಚಿತ್ರಣ. ನಮ್ಮ ಶಿಕ್ಷಣ ಇಂದು ಅಂಕಕೇಂದ್ರಿತ ಮತ್ತು ಪರೀಕ್ಷಾಕೇಂದ್ರಿತವಾಗಿದೆ. ಪಠ್ಯವನ್ನು ಅರ್ಥಮಾಡಿಕೊಳ್ಳುವುದಕ್ಕಿಂತ ಉರುಹೊಡೆಯುವುದೇ ಸುಲಭದ ದಾರಿಯಾಗಿದೆ. ಪ್ರಶ್ನೆ ಕೇಳುವ ಮಗುವನ್ನು “ತರಗತಿಗೆ ಅಡ್ಡಿ ಮಾಡುತ್ತಾನೆ” ಎಂದೂ, ಸುಮ್ಮನೆ ಉತ್ತರ ಬರೆಯುವ ಮಗುವನ್ನು “ಒಳ್ಳೆಯ ವಿದ್ಯಾರ್ಥಿ” ಎಂದೂ ಗುರುತಿಸುವ ಪದ್ಧತಿ ನಮ್ಮದು.
ಇಂಥಹ ಹೊತ್ತಿನಲ್ಲಿ ನಮ್ಮ ನಡುವೆ ಮಿಲಾದುನ್ನಬಿ ಬರುತ್ತಿದೆ — ಪ್ರವಾದಿ ಮುಹಮ್ಮದ್ (ಸ) ಅವರ ಜನನದ ಸ್ಮರಣೆ. ಸಾಮಾನ್ಯವಾಗಿ ಈ ಸಂದರ್ಭ ಮೆರವಣಿಗೆ, ಮಸೀದಿಗಳ ಅಲಂಕಾರ ಮತ್ತು ಭಾಷಣಗಳಿಗೆ ಮಾತ್ರ ಸೀಮಿತವಾಗುತ್ತದೆ. ಆದರೆ ಈ ಸಂದರ್ಭವನ್ನು ಒಂದು ಆಚರಣೆಗಿಂತ ಹೆಚ್ಚಾಗಿ, ಮರುಪರಿಶೀಲನೆಯ ಅವಕಾಶವಾಗಿ ಬಳಸಿಕೊಳ್ಳಬಹುದಲ್ಲವೇ? ಸುಮಾರು ಹದಿನಾಲ್ಕು ಶತಮಾನಗಳ ಹಿಂದೆ ಪ್ರವಾದಿಯವರು ಅನುಸರಿಸಿದ ಬೋಧನಾ ಕ್ರಮ ಮತ್ತು ಕಟ್ಟಿದ ಕಲಿಕಾ ವ್ಯವಸ್ಥೆಯನ್ನು ಮತ್ತೊಮ್ಮೆ ತೆರೆದು ನೋಡಿದರೆ, ಇಂದಿನ ಶಿಕ್ಷಣ ಬಿಕ್ಕಟ್ಟಿಗೆ ಅಚ್ಚರಿ ಎನಿಸುವಷ್ಟು ಪ್ರಸ್ತುತವಾದ ಪಾಠಗಳು ಸಿಗುತ್ತವೆ. ಇದನ್ನು ಕೇವಲ ಧಾರ್ಮಿಕ ಇತಿಹಾಸವಾಗಿ ಓದುವ ಬದಲು, ಒಂದು ಜೀವಂತ ಶೈಕ್ಷಣಿಕ ಮಾದರಿಯಾಗಿ ಓದುವುದೇ ಈ ಲೇಖನದ ಪ್ರಯತ್ನ.
“ಓದು” ಎಂಬ ಮೊದಲ ಆಜ್ಞೆ
ಕುರ್ಆನ್ ಪ್ರವಾದಿಯವರಿಗೆ ಕೊಟ್ಟ ಮೊದಲ ಸಂದೇಶವೇ “ಇಕ್ರಾ” — ಓದು ಎಂಬ ಪದ (ಸೂರಾ ಅಲ್-ಅಲಕ್, 96:1). ಒಂದು ಧರ್ಮ ಸಂದೇಶದ ಆರಂಭಿಕ ಗಳಿಗೆಯಲ್ಲಿ, ಮೊದಲ ದೇವವಾಣಿಯಾಗಿ ಬರುವುದು ಆಚರಣೆಯ ವಿಧಿಯಲ್ಲ — ಓದು ಅಥವಾ ಜ್ಞಾನ. ಈ ವಾಣಿಯೇ ಇಡೀ ಇಸ್ಲಾಮೀ ಪರಂಪರೆಯ ಬುನಾದಿ ಎಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಮುಂದೆ ಕುರ್ಆನ್ ಸ್ಪಷ್ಟವಾಗಿ ಕೇಳುತ್ತದೆ: “ತಿಳಿದವರೂ ತಿಳಿಯದವರೂ ಸಮಾನರೇ?” (ಸೂರಾ ಅಝ್ಝುಮರ್ 39:9). ಪ್ರವಾದಿಯವರಿಗೇ “ನನ್ನ ಜ್ಞಾನವನ್ನು ವೃದ್ಧಿಸು” ಎಂದು ಪ್ರಾರ್ಥಿಸಲು ಕಲಿಸಲಾಗುತ್ತದೆ (ಸೂರಾ ತ್ವಾಹಾ, 20:114).
ಜ್ಞಾನಾರ್ಜನೆಯನ್ನು ಪ್ರತಿಯೊಬ್ಬರ ಮೇಲಿನ ಕಡ್ಡಾಯವೆಂದೂ, ಜ್ಞಾನಿಗಳನ್ನು ಪ್ರವಾದಿಗಳ ವಾರಸುದಾರರೆಂದೂ ಹೇಳಲಾಗಿದೆ. ಇಷ್ಟು ಒತ್ತು ಕೊಟ್ಟ ಜ್ಞಾನ ಕೇವಲ ಮಾಹಿತಿ ಸಂಗ್ರಹವಾಗಿರಲಿಲ್ಲ — ಚಿಂತನೆ (ತಫಕ್ಕುರ್) ಮತ್ತು ಆಳವಾದ ವಿಶ್ಲೇಷಣೆ (ತದಬ್ಬುರ್)ಗೆ ಪದೇಪದೇ ಕರೆ ನೀಡಲಾಗಿದೆ. ಓದುವುದೆಂದರೆ ಪಠಿಸುವುದಲ್ಲ, ಅರ್ಥ ಮಾಡಿಕೊಳ್ಳುವುದು ಎಂಬ ವ್ಯತ್ಯಾಸವನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು.
ಸುಫ್ಫಾದಿಂದ ಮದೀನಾದವರೆಗೆ: ಒಂದು ಸಾಂಸ್ಥಿಕ ಮಾದರಿ
ಪ್ರವಾದಿಯವರ ಕೊಡುಗೆ ಕೇವಲ ಮಾತು ಮತ್ತು ಆದರ್ಶಗಳಿಗೆ ನಿಲ್ಲಲಿಲ್ಲ; ಅವರು ಒಂದು ಕಲಿಕಾ ವ್ಯವಸ್ಥೆಯನ್ನು ಕಟ್ಟಿದರು. ಮದೀನಾ ಮಸೀದಿಯ ಒಂದು ಮೂಲೆಯಲ್ಲಿದ್ದ “ಸುಫ್ಫಾ” — ಇದು ಇತಿಹಾಸದ ಮೊದಲ ವಸತಿಸಹಿತ ಕಲಿಕಾ ಕೇಂದ್ರಗಳಲ್ಲಿ ಒಂದೆನ್ನಬಹುದು. ಇಲ್ಲಿ ಬಡವ-ಶ್ರೀಮಂತ, ಸ್ಥಳೀಯ-ಪರದೇಶಿ ಎಂಬ ಭೇದವಿಲ್ಲದೆ ವಿದ್ಯಾರ್ಥಿಗಳು ಒಟ್ಟಿಗೇ ಉಳಿದು ಕಲಿಯುತ್ತಿದ್ದರು, ಊಟ ಹಂಚಿಕೊಳ್ಳುತ್ತಿದ್ದರು. ಮಸೀದಿ ಕೇವಲ ಪ್ರಾರ್ಥನಾ ಸ್ಥಳವಾಗಿರಲಿಲ್ಲ; ಅದು ಏಕಕಾಲದಲ್ಲಿ ಪಾಠಶಾಲೆ, ಗ್ರಂಥಾಲಯ ಮತ್ತು ಚರ್ಚಾವೇದಿಕೆಯೂ ಆಗಿತ್ತು.
ಇಲ್ಲಿ ಬೋಧನೆ ನಡೆಯುತ್ತಿದ್ದುದು ಒಬ್ಬ ವ್ಯಕ್ತಿ ಮಾತನಾಡುತ್ತಾ, ಉಳಿದವರು ಬರೆದುಕೊಳ್ಳುತ್ತಾ ಕುಳಿತುಕೊಳ್ಳುವ ಏಕಮುಖ ಉಪನ್ಯಾಸದ ರೂಪದಲ್ಲಲ್ಲ. ಸಣ್ಣ ಗುಂಪುಗಳಲ್ಲಿ ಕುಳಿತು ಚರ್ಚಿಸುವುದು, ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಕಲಿಸುವುದು (ಇಂದು ಇದನ್ನು “Peer Learning” ಎನ್ನುತ್ತೇವೆ), ಮತ್ತು ಪ್ರತಿಯೊಬ್ಬರ ಪ್ರಶ್ನೆಗೂ ಸಮಯ ಕೊಡುವುದು — ಇವು ಆ ವ್ಯವಸ್ಥೆಯ ಭಾಗವಾಗಿದ್ದವು. ಕಲಿಕೆ ಕೇವಲ ಪಠ್ಯಕ್ಕೆ ಸೀಮಿತವಾಗಿರಲಿಲ್ಲ; ಬರವಣಿಗೆ, ಭಾಷೆ, ವೈದ್ಯಕೀಯ ಜ್ಞಾನ, ಯುದ್ಧತಂತ್ರ, ಆಡಳಿತ — ಹೀಗೆ ಬದುಕಿಗೆ ಬೇಕಾದ ವೈವಿಧ್ಯಮಯ ಕೌಶಲಗಳಿಗೂ ಜಾಗವಿತ್ತು. ಬದ್ರ್ ಯುದ್ಧದ ನಂತರ, ಸೆರೆಸಿಕ್ಕ ಕೆಲವು ಶತ್ರು ಪಡೆಯವರಿಗೆ ‘ಹತ್ತು ಮದೀನಾ ಮಕ್ಕಳಿಗೆ ಬರೆಯಲು-ಓದಲು ಕಲಿಸಿದರೆ ಬಿಡುಗಡೆ’ ಎಂಬ ಷರತ್ತು ವಿಧಿಸಲಾಗಿತ್ತು ಎಂಬ ಘಟನೆಯನ್ನು ಗಮನಾರ್ಹ — ಜ್ಞಾನವನ್ನು ಯುದ್ಧದ ಪರಿಹಾರವಾಗಿಯೂ ಬಳಸಿದ ದೂರದೃಷ್ಟಿ ಅದು. ಇಂದಿನ ಭಾಷೆಯಲ್ಲಿ ಹೇಳುವುದಾದರೆ, ಇದೊಂದು ವಿಕೇಂದ್ರೀಕೃತ, ಸಮುದಾಯ-ಆಧಾರಿತ, ಬಹು-ಕೌಶಲ ಕಲಿಕಾ ವ್ಯವಸ್ಥೆ.
ಉತ್ತರಕ್ಕಿಂತ ಪ್ರಶ್ನೆ ಮುಖ್ಯ
ಈ ವ್ಯವಸ್ಥೆಯ ಒಳಗೆ ನಡೆಯುತ್ತಿದ್ದ ಬೋಧನಾ ಶೈಲಿಯಲ್ಲಿ ಅತ್ಯಂತ ಗಮನ ಸೆಳೆಯುವ ಅಂಶವೆಂದರೆ, ಪ್ರವಾದಿ(ಸ)ಯವರು ಉತ್ತರ ಒಪ್ಪಿಸುತ್ತಿರಲಿಲ್ಲ, ಪ್ರಶ್ನೆ ಎಸೆಯುತ್ತಿದ್ದರು. “ನಿಜವಾದ ಬಡವ ಯಾರು?” ಎಂದು ಸಹಚರರನ್ನು ಕೇಳಿದಾಗ, ಬಡತನ ಎಂಬುದು ಕೇವಲ ಜೇಬಿನ ಸ್ಥಿತಿಯಲ್ಲ, ಒಳಗಿನ ಶೂನ್ಯತೆ ಎಂಬ ಆಲೋಚನೆಗೆ ಆ ಪ್ರಶ್ನೆಯೇ ದಾರಿ ಮಾಡಿಕೊಟ್ಟಿತು. “ನಿಜವಾದ ಬಲಶಾಲಿ ಯಾರು?” ಎಂಬ ಪ್ರಶ್ನೆ, ಬಲ ಎಂದರೆ ಇನ್ನೊಬ್ಬರನ್ನು ಸೋಲಿಸುವ ಸಾಮರ್ಥ್ಯವಲ್ಲ, ಸಿಟ್ಟಿನ ಕ್ಷಣದಲ್ಲಿ ತನ್ನನ್ನು ತಾನು ನಿಯಂತ್ರಿಸಿಕೊಳ್ಳುವ ಶಕ್ತಿ ಎಂಬ ಗ್ರಹಿಕೆಗೆ ಕೇಳುಗರನ್ನು ತಂದು ನಿಲ್ಲಿಸಿತು. “ನಿಮ್ಮಲ್ಲಿ ಅತ್ಯುತ್ತಮನು ಯಾರು?” ಎಂಬ ಪ್ರಶ್ನೆಗೆ, ಅತ್ಯುತ್ತಮನೆಂದರೆ ಅತಿ ಹೆಚ್ಚು ಅಂಕ ಗಳಿಸಿದವನಲ್ಲ, ಇತರರಿಗೆ ಅತಿ ಹೆಚ್ಚು ಪ್ರಯೋಜನಕಾರಿಯಾದವನು ಎಂಬ ಉತ್ತರ ಬಂತು.
ಒಂದು ಸಿದ್ಧ ಉತ್ತರವನ್ನು ಒಪ್ಪಿಸಿದರೆ ಅದು ಒಂದು ದಿನ ಮಾತ್ರ ಉಳಿಯುತ್ತದೆ; ಆದರೆ ಕೇಳುಗನನ್ನೇ ಪ್ರಶ್ನಿಸಿ ಯೋಚಿಸುವಂತೆ ಮಾಡಿದರೆ, ಆ ಉತ್ತರವನ್ನು ಆತ ಸ್ವತಃ ಕಂಡುಕೊಳ್ಳುತ್ತಾನೆ, ಅದು ಜೀವಮಾನವಿಡೀ ಉಳಿಯುತ್ತದೆ. ನಿಷ್ಕ್ರಿಯ ಕೇಳುಗರನ್ನು ಸಕ್ರಿಯ ಚಿಂತಕರನ್ನಾಗಿ ಪರಿವರ್ತಿಸುವುದೇ ಈ ವಿಧಾನದ ನಿಜವಾದ ಶಕ್ತಿ. ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ, ಗ್ರಹಿಕೆಯ ಮಟ್ಟ ಬೇರೆಬೇರೆ ಎಂಬುದನ್ನು ಗುರುತಿಸಿ, ಒಬ್ಬೊಬ್ಬರಿಗೂ ಒಂದೊಂದು ರೀತಿಯಲ್ಲಿ ವಿವರಿಸುತ್ತಿದ್ದ ಈ ಪದ್ಧತಿಯು, ಇಂದಿನ ಶಿಕ್ಷಣ ವ್ಯವಸ್ಥೆಯ “ಒಂದೇ ಅಳತೆಗೋಲಿನಲ್ಲಿ ಎಲ್ಲರನ್ನೂ ಅಳೆಯುವ” ಕ್ರಮಕ್ಕೆ ನೇರ ವಿರುದ್ಧ ಮಾದರಿಯಾಗಿದೆ.
ಅಹಂಕಾರ ಮುರಿಯುವ ಜ್ಞಾನ ಮತ್ತು ನಡತೆ
ಪ್ರವಾದಿ ಚರ್ಯೆ ಕಲಿಸುವ ಇನ್ನೊಂದು ಮೂಲಭೂತ ತತ್ವವಿದೆ — ಇಲ್ಮ್ (ಜ್ಞಾನ) ಮತ್ತು ಅಖ್ಲಾಕ್ (ನಡತೆ) ಬೇರೆಬೇರೆ ಅಲ್ಲ; ಇವೆರಡೂ ಒಂದಕ್ಕೊಂದು ಬೆಸೆದುಕೊಂಡಿರುವ ಅವಿಭಾಜ್ಯ ಅಂಗಗಳು. ಜ್ಞಾನ ಬೆಳೆದಂತೆ ಅಹಂಕಾರ ಬೆಳೆಯಬಾರದು, ವಿನಯ ಬೆಳೆಯಬೇಕು ಎಂಬ ಎಚ್ಚರಿಕೆ ಪದೇಪದೇ ಬರುತ್ತದೆ. ಶಿಕ್ಷಣದ ಗುರಿ ಕೇವಲ ಉದ್ಯೋಗ ಗಿಟ್ಟಿಸುವುದಲ್ಲ; ಸಂಪೂರ್ಣ ಮನುಷ್ಯನನ್ನು ಕಟ್ಟುವುದು.
ಇಲ್ಲಿಯೇ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಗೂ, ಪ್ರವಾದಿ ಮಾದರಿಗೂ ಇರುವ ಅಂತರ ಎದ್ದು ಕಾಣುತ್ತದೆ. ನಾವು ಅತ್ಯುತ್ತಮ ಎಂಜಿನಿಯರ್ಗಳನ್ನೂ, ವೈದ್ಯರನ್ನೂ ಸೃಷ್ಟಿಸುತ್ತಿದ್ದೇವೆ ನಿಜ. ಆದರೆ ಅಷ್ಟೇ ಪ್ರಾಮಾಣಿಕವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆ — ಉತ್ತಮ ಮನುಷ್ಯರನ್ನೂ ಸೃಷ್ಟಿಸುತ್ತಿದ್ದೇವೆಯೇ? ವಂಚನೆ, ಭ್ರಷ್ಟಾಚಾರ, ಪರಿಸರ ನಾಶ, ಸಾಮಾಜಿಕ ಸಂವೇದನೆಯ ಕೊರತೆ — ಇವೆಲ್ಲ ಡಿಗ್ರಿ ಇಲ್ಲದವರಿಂದ ಆಗುತ್ತಿಲ್ಲ, ಬಹುತೇಕ ಬಾರಿ ಅತ್ಯಂತ “ವಿದ್ಯಾವಂತ”ರೆನಿಸಿಕೊಂಡವರಿಂದಲೇ ಆಗುತ್ತಿದೆ. ಸಹಾನುಭೂತಿ, ನ್ಯಾಯಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಯಿಲ್ಲದ ಪದವಿ ಬರೀ ಕಾಗದದ ತುಂಡು ಮಾತ್ರ.
ಇಂದಿನ ವ್ಯವಸ್ಥೆಗೆ ಪ್ರಾಯೋಗಿಕ ಅಳವಡಿಕೆ
ಸಂಪೂರ್ಣ ಬೋಧನಾ ಶೈಲಿ ಬದಲಿಸುವುದು ಒಂದೇ ದಿನದಲ್ಲಿ ಸಾಧ್ಯವಿಲ್ಲ ನಿಜ, ಆದರೆ ಈ ಮಾದರಿಯಿಂದ ಇಂದೇ ಎತ್ತಿಕೊಳ್ಳಬಹುದಾದ ಕೆಲವು ಆಳ ಅಂಶಗಳಿವೆ:
- ಉಪದೇಶದ ಬದಲು ಪ್ರಶ್ನೆ: ಪ್ರತಿ ಪಾಠದ ಕೊನೆಯಲ್ಲಿ “ಏನು ಕಲಿತೆವು” ಎಂಬುದನ್ನು ಶಿಕ್ಷಕರೇ ಒಪ್ಪಿಸುವ ಬದಲು, ವಿದ್ಯಾರ್ಥಿಗಳಿಂದಲೇ ಒಂದೆರಡು ಪ್ರಶ್ನೆ ಕೇಳಿಸುವ ಅಭ್ಯಾಸ ರೂಢಿಸುವುದು. ಇದಕ್ಕೆ ಹೊಸ ಪಠ್ಯಕ್ರಮ ಬೇಕಿಲ್ಲ, ಕೇವಲ ಶಿಕ್ಷಕರ ತರಬೇತಿಯಲ್ಲಿ ಬದಲಾವಣೆ ಸಾಕು.
- ಅಂಕಗಳಾಚೆಗಿನ ಮೌಲ್ಯಮಾಪನ: ರಿಪೋರ್ಟ್ ಕಾರ್ಡ್ನಲ್ಲಿ ಕೇವಲ ಅಂಕಗಳಷ್ಟೇ ಅಲ್ಲದೆ, ಸಹಪಾಠಿಗಳೊಂದಿಗಿನ ವರ್ತನೆ, ಗುಂಪು ಕೆಲಸದಲ್ಲಿನ ಸಹಕಾರ, ಮತ್ತು ಪ್ರಾಮಾಣಿಕತೆಯನ್ನು ದಾಖಲಿಸುವ ಒಂದು ಸರಳ ಚೌಕಟ್ಟು ಜಾರಿಯಾಗಬೇಕು.
- ಸಮುದಾಯ-ಆಧಾರಿತ ‘ಪೀರ್ ಲರ್ನಿಂಗ್’: ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಕಲಿಸುವ ಗುಂಪುಗಳನ್ನು ಪ್ರತಿ ಶಾಲೆಯಲ್ಲೂ ವಾರಕ್ಕೊಮ್ಮೆಯಾದರೂ ಏರ್ಪಡಿಸುವುದು. ಬಡ ಮಕ್ಕಳಿಗೆ ಟ್ಯೂಷನ್ ಕೊಡಿಸಲಾಗದ ಮನೆಗಳಿಗೆ ಇದು ವಿಶೇಷವಾಗಿ ಪ್ರಯೋಜನಕಾರಿ.
- ಬಹು-ಸಾಮರ್ಥ್ಯಗಳ ಮನ್ನಣೆ: ಎಲ್ಲರನ್ನೂ ಒಂದೇ ಪರೀಕ್ಷೆಯ ಅಳತೆಗೋಲಿನಲ್ಲಿ ಅಳೆಯುವ ಬದಲು, ಕೈಕಸುಬು, ಕಲೆ, ಕ್ರೀಡೆ, ಸಾಮಾಜಿಕ ಸೇವೆಯಂತಹ ಬೇರೆಬೇರೆ ಸಾಮರ್ಥ್ಯಗಳಿಗೂ ಮನ್ನಣೆ ಕೊಡುವ ವ್ಯವಸ್ಥೆ ಸ್ಥಾಪಿಸುವುದು.
- ಮದರಸಾಗಳ ಶೈಕ್ಷಣಿಕ ನವೀಕರಣ: ಮಸೀದಿ-ಆಧಾರಿತ ಮದರಸಾಗಳಲ್ಲಿಯೂ ಕುರ್ಆನ್ ಮತ್ತು ಹದೀಸ್ ಬೋಧನೆ ಕೇವಲ ಪಠಣಕ್ಕೆ ಸೀಮಿತವಾಗದೆ, ಮಕ್ಕಳಿಂದ ಪ್ರಶ್ನೆ ಕೇಳಿಸಿ, ಚರ್ಚಿಸಿ, ಇಂದಿನ ಬದುಕಿಗೆ ಅನ್ವಯಿಸುವ ರೀತಿಯಲ್ಲಿ ಕಲಿಸುವ ಪದ್ಧತಿ ರೂಢಿಸುವುದು.
ಸಾರ್ವಕಾಲಿಕ ಮಾರ್ಗದರ್ಶಿ
ಪ್ರವಾದಿ ಪ್ರೇಮದ ಮಿಲಾದುನ್ನಬಿ ಬರೀ ಜನ್ಮದಿನದ ಆಚರಣೆಯಾಗಿ ಉಳಿದರೆ, ಅದು ಪ್ರವಾದಿಯವರ ಬದುಕಿನ ಒಂದಂಶ ಪಾಠವನ್ನಷ್ಟೇ ನಾವು ಕಲಿತಂತೆ. ಪ್ರಶ್ನಿಸುವ ಧೈರ್ಯ, ಆಲಿಸುವ ತಾಳ್ಮೆ, ಪ್ರತಿಯೊಬ್ಬರನ್ನೂ ಅವರವರ ಇತಿಮಿತಿಗೆ ತಕ್ಕಂತೆ ಅರ್ಥಮಾಡಿಕೊಳ್ಳುವ ಸೂಕ್ಷ್ಮತೆ, ಜ್ಞಾನವನ್ನು ವಿನಯದ ಜೊತೆ ಬೆಸೆಯುವ ಪ್ರಜ್ಞೆ — ಇವು ಯಾವುದೇ ಕಾಲಕ್ಕೂ ಅನ್ವಯಿಸುವ ಶೈಕ್ಷಣಿಕ ಸೂತ್ರಗಳು. ಈ ಆಚರಣೆಯ ದಿನ ಮೆರವಣಿಗೆ ಮುಗಿದ ಮೇಲೆ, ಮನೆಗೆ ಮರಳಿದ ಮೇಲೆ ನಾವು ನಮ್ಮ ಮಕ್ಕಳನ್ನು ಕೇಳಬೇಕಾದ ಪ್ರಶ್ನೆ ಇರುವುದು ಇಲ್ಲಿಯೇ — “ಇವತ್ತು ಎಷ್ಟು ಪ್ರಶ್ನೆ ಕೇಳಿದೆ?”
ನಮ್ಮ ಶಾಲಾ-ಕಾಲೇಜುಗಳು ಕೇವಲ ಉದ್ಯೋಗಿಗಳನ್ನು ಸಿದ್ಧಪಡಿಸುವ ಯಂತ್ರಗಳಾಗಬಾರದು; ಸಂವೇದನಾಶೀಲ, ಜವಾಬ್ದಾರಿಯುತ ಪ್ರಜೆಗಳನ್ನು ರೂಪಿಸುವ ಕೇಂದ್ರಗಳಾಗಬೇಕು. ಅಂಕಗಳಿಗಿಂತ ಮಿಗಿಲಾಗಿ ಮನುಷ್ಯತ್ವದ ಮೌಲ್ಯಗಳನ್ನು ಮರಳಿ ಕೇಂದ್ರಸ್ಥಾನಕ್ಕೆ ತರುವುದೇ ಇಂದಿನ ತುರ್ತು. ಅದನ್ನು ಸಾಧಿಸಲು ಹೊಸ ಸಿದ್ಧಾಂತ ಬೇಕಿಲ್ಲ — ಹದಿನಾಲ್ಕು ಶತಮಾನಗಳ ಹಿಂದೆಯೇ ಕಲಿಸಲ್ಪಟ್ಟ ಪಾಠ, ಇವತ್ತಿಗೂ ಕಾಯುತ್ತಿದೆ.












