ಕೊರೋನಾ ಹೆಚ್ಚಳದ ಮಧ್ಯೆ ಶವ ಸಾಗಿಸುವ ‘ಮುಕ್ತಿವಾಹನ’ ದ ಜೊತೆಗೆ ಫೋಟೊ ಶೂಟ್ ನಡೆಸಿದ ಬಿಜೆಪಿ ನಾಯಕ: ತೀವ್ರ ಆಕ್ರೋಶ

0
309

ಸನ್ಮಾರ್ಗ ವಾರ್ತೆ

ಭೋಪಾಲ್: ಮಧ್ಯಪ್ರದೇಶದಲ್ಲಿ ಮೃತ ದೇಹ ಒಯ್ಯುವ ವಿವಿಧ ಆಸ್ಪತ್ರೆಗಳಿಗೆ ನೀಡಿದ ಮುಕ್ತಿ ವಾಹನಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಫೋಟೋಗಳಿಗೆ ಪೋಸ್ ನೀಡಿ ಹಬ್ಬವನ್ನಾಗಿ ಆಚರಿಸಿದ ಮಧ್ಯ ಪ್ರದೇಶ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅಲೋಕ್ ಶರ್ಮಾರ ವಿರುದ್ಧ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆ ವ್ಯಕ್ತವಾಗಿದೆ.

ಆಸ್ಪತ್ರೆಗೆ ಕೊಡುವ ಆರು ಮುಕ್ತಿ ವಾಹನಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ವಾಹನಗಳ ಮುಂದೆ ನಿಂತೂ ಫೋಟೊ ತೆಗೆಸುತ್ತಾ ಫೋಸ್ ಕೊಡುತ್ತಾ ನಿಂತು ಸರಕಾರದ ಸಾಧನೆ ಎಂಬಂತೆ ಬಿಂಬಿಸಿದ್ದರು‌.‌

ಈ ಕಾರ್ಯಕ್ರಮದ ನಂತರ ವಾಹನವನ್ನು ಆಸ್ಪತ್ರೆಗಳಿಗೆ ಹಸ್ತಾಂತರಿಸಲಾಯಿತಾದರೂ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತಲ್ಲದೇ, ನೆಟ್ಟಿಗರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತು.

ಮಧ್ಯ ಪ್ರದೇಶ ಸೇರಿದಂತೆ ದೇಶಾದ್ಯಂತ ಕೊರೋನಾ ಹೆಚ್ಚಳವಾಗುತ್ತಾ ಜನರು ಸರಿಯಾದ ರೀತಿಯ ಚಿಕಿತ್ಸೆ ಇಲ್ಲದೆ ಜೀವನ್ಮರಣ ಸ್ಥಿತಿಯಲ್ಲಿ ಹೊರಳಾಡುತ್ತಿರುವುದಾಗಿ ಈ ಪೋಟೋಶೂಟ್ ಭಾರೀ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

ಶವ ಸಾಗಿಸುವ ಮುಕ್ತಿ ವಾಹನಗಳ ಮುಂದೆ ಫೋಟೊ ಶೂಟ್ ನಡೆಸುವುದರ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಪ್ರತಿಕ್ರಿಯಿಸಿ, ವಾಹನಕ್ಕೆ ಫ್ಲ್ಯಾಗ್ ಆಫ್ ಮಾಡುವಾಗ ಒಂದು ವಾಹನದೊಳಗೆ ಒಂದು ಮೃತದೇಹ ಇತ್ತು . ಹೆಚ್ಚು ಸಮಯ ಕಾದು ಕಾರ್ಯಕ್ರಮ ಮುಗಿದ ನಂತರ ಅದನ್ನು ಸ್ಮಶಾನಕ್ಕೆ ತಲುಪಿಸಲಾಯಿತು ಎಂದು ಹೇಳಿದೆ. ದುರಂತದಲ್ಲಿಯೂ ಫೋಟೊ ಶೂಟ್ ನ ಅವಕಾಶವನ್ನು ಬಿಜೆಪಿ ಕಳಕೊಳ್ಳುವುದಿಲ್ಲ ಎಂದು ಪ್ರದೇಶ ಕಾಂಗ್ರೆಸ್ ನಾಯಕ ನರೇಂದ್ರ ಸಲೂಜ ವ್ಯಂಗ್ಯವಾಡಿದ್ದಾರೆ.

ತೆಂಗಿನಕಾಯಿ ಒಡೆದು ಪ್ರಾರ್ಥನೆ ಕಾರ್ಯಕ್ರಮ ಮುಗಿದ ಬಳಿಕ ಇಂದೋರಿನ ಆಸ್ಪತ್ರೆಗೆ ತುರ್ತಾಗಿ ತಲುಪಿಸಬೇಕಾಗಿದ್ದ ಆಕ್ಸಿಜನ್ ಟ್ಯಾಂಕರ್ ಮುಂದೆ ಬಿಜೆಪಿ ಸಚಿವ ತುಲ್ಸಾರಾಂ ಸಿಲಾತ್ ಫೋಟೊ ತೆಗೆಸಿದ ಮೇಲೆ ಕಳುಹಿಸಿ ಕೊಟ್ಟಿದ್ದಾರೆ ಎಂದು ಸಲೂಜ ಆರೋಪಿಸಿದ್ದಾರೆ.

ಕೊರೋನಾ ಹರಡಿ ಜನರಿಗೆ ಆಕ್ಸಿಜನ್ ಕೊರತೆಯಿಂದ ಬಳಲುವ ಸಂದರ್ಭದಲ್ಲಿ ಇವರು ಹೀಗೆ ಮಾಡುತ್ತಿದ್ದಾರೆ ಎಂದು ಸಲೂಜ ಬೆಟ್ಟು ಮಾಡಿದರು.

ಇದೇ ವೇಳೆ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ವೇಳೆ ವ್ಯಾನಿನೊಳಗೆ ಮೃತದೇಹ ಇರಲಿಲ್ಲ. ಕೂಡಲೇ ವಾಹನವನ್ನು ಆಸ್ಪತ್ರೆಗೆ ಹಸ್ತಾಂತರಿಸಿದೆವು. ಇದು ಸುಳ್ಳು ಅರೋಪ ಎಂದು ಬಿಜೆಪಿ ನಾಯಕ ಅಲೋಕ್ ಶರ್ಮಾ ವಿವಾದ ಉಂಟಾದ ಬಳಿಕ ಆಜ್‍ತಕ್‍ ಜೊತೆಗೆ ಹೇಳಿದ್ದಾರೆ.