ಮಧ್ಯಪ್ರದೇಶದಲ್ಲಿ ಟ್ರಕ್ ಪಲ್ಟಿ: ಮಾವಿನ ಹಣ್ಣಿನೊಳಗೆ ಅಡಗಿ ಕುಳಿತಿದ್ದ ಐವರು ವಲಸೆ ಕಾರ್ಮಿಕರ ಸಾವು

0
830

ಸನ್ಮಾರ್ಗ ವಾರ್ತೆ

ಜಬಲ್ಪುರ್,ಮೇ.10: ಮಧ್ಯಪ್ರದೇಶದ ನರಸಿಂಗ್‌ಪುರದ ಪಾಥಾ ಗ್ರಾಮದ ಬಳಿ ಟ್ರಕ್ ಪಲ್ಟಿಯಾಗಿ ಐದು ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಅಪಘಾತದಲ್ಲಿ 11 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಟ್ರಕ್‌ನಲ್ಲಿ ಇಬ್ಬರು ಚಾಲಕರು ಮತ್ತು ಕಂಡಕ್ಟರ್ ಸೇರಿದಂತೆ ಒಟ್ಟು 18 ಜನರು ಇದ್ದರು. ಈ ಪೈಕಿ 15 ಮಂದಿ ಹೈದರಾಬಾದ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ವಲಸೆ ಕಾರ್ಮಿಕರೆಲ್ಲರೂ ಮಾವಿನ ಟ್ರಕ್‌ನಲ್ಲಿ ಕುಳಿತು ಆಗ್ರಾಕ್ಕೆ ತೆರಳುತ್ತಿದ್ದರೆಂದು ವರದಿಯಾಗಿದೆ.

ನರಸಿಂಗ್‌ಪುರ ಮತ್ತು ಸಿಯೋನಿ ಗಡಿಯ ನಡುವೆ ಎನ್‌ಎಚ್ 44 ರಲ್ಲಿ ಈ ಅಪಘಾತ ಸಂಭವಿಸಿದೆ. 15 ವಲಸೆ ಕಾರ್ಮಿಕರು ಅಪಘಾತದಿಂದಾಗಿ ಟ್ರಕ್‌ನ ಕೆಳಗೆ ಸಿಕ್ಕಿಹಾಕಿಕೊಂಡಿದ್ದರು. ಅಪಘಾತದ ಮಾಹಿತಿ ದೊರೆತ ಕೂಡಲೇ ಕಲೆಕ್ಟರ್ ಮತ್ತು ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿದ್ದು, ಎಲ್ಲ ವಲಸೆ ಕಾರ್ಮಿಕರು ಟ್ರಕ್‌ನಲ್ಲಿ ಅಡಗಿಕೊಂಡು ಮನೆಗೆ ತೆರಳಲು ಯತ್ನಿಸುತ್ತಿದ್ದರು ಎಂದು ನರಸಿಂಗ್‌ಪುರ ಕಲೆಕ್ಟರ್ ದೀಪಕ್ ಸಕ್ಸೇನಾ ತಿಳಿಸಿದ್ದಾರೆ.

ಸಿವಿಲ್ ಸರ್ಜನ್ ಅನಿತಾ ಅಗರ್ವಾಲ್ ಅವರ ಪ್ರಕಾರ, ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಅವರಲ್ಲಿ ಒಬ್ಬರಿಗೆ ತಲೆಗೆ ಗಂಭೀರ ಗಾಯವಾಗಿದ್ದರೆ, ಇನ್ನೊಬ್ಬರಿಗೆ ಮೂಳೆ ಮುರಿತವಿದೆ. ಗಾಯಗೊಂಡ ಇತರರ ಸ್ಥಿತಿ ಸ್ಥಿರವಾಗಿರುತ್ತದೆ. ಅಲ್ಲದೇ, ಗಾಯಗೊಂಡವರಲ್ಲಿ ಒಬ್ಬರಿಗೆ ಮೂರು ದಿನಗಳಿಂದ ಶೀತ,ಕೆಮ್ಮು ಮತ್ತು ಜ್ವರವಿದ್ದುದು ತಿಳಿದು ಬಂದಿದ್ದು; ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ 18 ಜನರ ಮಾದರಿಗಳನ್ನು ಕೊರೋನಾ ಪರೀಕ್ಷೆಗಾಗಿ ಕಳುಹಿಸಲಾಗಿದೆ.