ಮಧ್ಯಪ್ರದೇಶದಲ್ಲಿ ಹೆಚ್ಚಿದ ಕೊರೋನಾ ಸೋಂಕು ಪ್ರಕರಣಗಳು: ‘ಜಮಾಅತ್’ ಸದಸ್ಯರ ಮೇಲೆ ಮತ್ತೆ ಆರೋಪ ಹೊರಿಸಿದ ಸಿಎಂ ಚೌಹಾನ್!

0
987

ಸನ್ಮಾರ್ಗ ವಾರ್ತೆ

ಭೋಪಾಲ್,ಮೇ.10: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ರವರು ರಾಜ್ಯದಲ್ಲಿ ಕೊರೋನ ವೈರಸ್ ಹರಡಿರುವುದಕ್ಕೆ “ಜಮಾತಿ”ಯರೇ ಕಾರಣವೆಂದು ನಿರಂತರವಾಗಿ ಮತ್ತೊಮ್ಮೆ ದೂಷಿಸುತ್ತಿದ್ದಾರೆ. ಆದರೆ, ಕೊರೋನಾ ಸೋಂಕಿತರ ಸಂಖ್ಯೆಗಳು ವಿಭಿನ್ನ ಕಥೆಯನ್ನು ಹೇಳುತ್ತಿವೆ.

ರಾಜ್ಯ ಆರೋಗ್ಯ ಇಲಾಖೆ ಒದಗಿಸಿದ ಮಾಹಿತಿಯ ಪ್ರಕಾರ, ಏಪ್ರಿಲ್ 29 ರವರೆಗೆ, ರಾಜ್ಯದ ಒಟ್ಟು COVID-19 ರೋಗಿಗಳಲ್ಲಿ ಶೇಕಡಾ 4% ಪ್ರತಿಶತಕ್ಕಿಂತಲೂ ಕಡಿಮೆ ಸೋಂಕು ಪ್ರಕರಣಗಳು ತಬ್ಲೀಗ್ ಜಮಾಅತ್ ಸದಸ್ಯರಾಗಿದ್ದರು. “ರಾಜ್ಯದ 2,316 ರೋಗಿಗಳಲ್ಲಿ ಕೇವಲ 87 ಮಂದಿ ಜಮಾತಿಗಳಾಗಿದ್ದು, ಇದು ಒಟ್ಟು ಸಂಖ್ಯೆಯ 3.75% ರಷ್ಟಿದ್ದಾರೆ” ಎಂದು ಆರೋಗ್ಯ ಆಯುಕ್ತ ಫೈಜ್ ಅಹ್ಮದ್ ಕಿದ್ವಾಯ್ ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ ವಾರವೊಂದರಲ್ಲಿಯೇ, 2020 ರ ಮೇ 6 ರ ರಾಜ್ಯ ಆರೋಗ್ಯ ಬುಲೆಟಿನ್ ಪ್ರಕಾರ, COVID-19 ಪ್ರಕರಣಗಳಲ್ಲಿ 2,316 ರಿಂದ 3,138 ಪ್ರಕರಣಗಳಿಗೆ ಗಮನಾರ್ಹ ಏರಿಕೆಯಾಗಿದೆ. ಏರಿಕೆಯಾದ ಈ ಪ್ರಕರಣಗಳೊಂದಿಗೆ ಜಮಾಅತ್ ಸದಸ್ಯರಿಗೆ ಯಾವುದೇ ರೀತಿಯಲ್ಲಿಯೂ ಸಂಬಂಧವಿಲ್ಲ ಎಂದು ರಾಜ್ಯ ಅಧಿಕಾರಿಗಳು ದೃಢೀಕರಿಸಿದ್ದಾರೆ.

ಆರಂಭದಲ್ಲಿ, ಹಲವಾರು ಮಾಧ್ಯಮ ವೇದಿಕೆಗಳಲ್ಲಿ ಮಾತನಾಡಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರು ಮಧ್ಯಪ್ರದೇಶದಲ್ಲಿ COVID-19 ಪ್ರಕರಣಗಳು ಕಡಿಮೆ ಇದ್ದು, ಅವು ಮುಖ್ಯವಾಗಿ ಜಬಲ್ಪುರದವುಗಳಾಗಿವೆ ಎಂದು ಹೇಳಿದ್ದರು. ಆದಾಗ್ಯೂ, ಇಂದೋರ್ ಮತ್ತು ಭೋಪಾಲದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ತ್ವರಿತ ಏರಿಕೆ ಕಂಡುಬಂದಿದ್ದು, ಜಮಾಅತ್ ಸದಸ್ಯರ ಮೇಲೆ ಸೋಂಕು ಹರಡಿದ ಆರೋಪ ಹೊರಿಸಿದರು.

ಮುಖ್ಯ ವೈದ್ಯಕೀಯ ಆರೋಗ್ಯ ಅಧಿಕಾರಿಗಳ (ಸಿಎಮ್‌ಹೆಚ್‌ಒ) ಪ್ರಕಾರ ಮಧ್ಯಪ್ರದೇಶ ದಲ್ಲಿನ ಇಂದೋರ್, ಭೋಪಾಲ್, ಉಜ್ಜಯಿನಿ ಮತ್ತು ಜಬಲ್ಪುರ್ ನಗರಗಳಲ್ಲಿಯೇ ಒಟ್ಟು 80% ಪ್ರಕರಣಗಳಿದ್ದು ‘ಜಮಾತಿ’ ಗಳೊಂದಿಗೆ ಯಾವುದೇ ರೀತಿಯಲ್ಲಿ ಸಂಪರ್ಕವನ್ನು ಹೊಂದಿಲ್ಲ ಎಂದು ದೃಢೀಕರಿಸಿದ್ದಾರೆ. ಆದರೆ, ಆರೋಗ್ಯ ಸಚಿವರು ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷರು ಇಂತಹ ಕೋಮು ದ್ವೇಷಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.

“ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದು ಒಂದೂವರೆ ತಿಂಗಳಿಗಿಂತಲೂ ಹೆಚ್ಚು ಸಮಯವಾದರೂ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಸರಕಾರ ವಿಫಲವಾರುವುದನ್ನು ಮರೆಮಾಚಲು ಮುಖ್ಯಮಂತ್ರಿ ಚೌಹಾನ್ ಈ ರೀತಿ ಕೋಮು ಮನಸ್ಥಿತಿಯೊಂದಿಗೆ ಆರೋಪಗಳನ್ನು ಮಾಡುತ್ತಿದ್ದಾರೆ‌” ಎಂದು ಮಾಜಿ ಸಂಸದರು ಹಾಗೂ ರಾಜ್ಯ ಕಾಂಗ್ರೆಸ್ ಮಾಧ್ಯಮ ಉಸ್ತುವಾರಿ ಸಚಿವರಾದ ಜಿತು ಪತ್ವಾರಿ ಆರೋಪಿಸಿದರು.