ಅತ್ಯಾಚಾರ ಮಾಡಿದಾತನನ್ನು 25 ಸಲ ಇರಿದು ಕೊಲೆ ಮಾಡಿದ ಸಂತ್ರಸ್ತೆ

0
1272

ಸನ್ಮಾರ್ಗ ವಾರ್ತೆ

ಭೋಪಾಲ,ಅ.15: ಹದಿನೈದು ವರ್ಷಗಳಿಂದ ತನ್ನನ್ನು ಬೆದರಿಸಿ ಅತ್ಯಾಚಾರ ಮಾಡುತ್ತಿದ್ದ ವ್ಯಕ್ತಿಯನ್ನು 31 ವರ್ಷದ ಮಹಿಳೆ ಚೂರಿಯಿಂದ 25 ಸಾರಿ ಇರಿದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ಮಂಗಳವಾರ ರಾತ್ರೆ ನಡೆದಿದೆ. ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕೊಲೆ ಮಾಡಿದ ಬಳಿಕ ಮಹಿಳೆಯೇ ಪೊಲೀಸರಿಗೆ ಕರೆ ಮಾಡಿ ತಿಳಿಸಿದರೆಂದು ಗುನಾದ ಕಂಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮ್ ಪ್ರಕಾಶ್ ವರ್ಮ ತಿಳಿಸಿದರು.

ಕೊಲೆಯಾದ ಬ್ರಿಜ್ ಭೂಷಣ್ ಶರ್ಮ ಮಹಿಳೆಯ ನೆರೆ ಮನೆಯ ನಿವಾಸಿಯಾಗಿದ್ದು, ಮಹಿಳೆ ಹದಿನಾರು ವರ್ಷದವಳಾಗಿದ್ದಾಗ 2005ರಲ್ಲಿ ಮೊದಲ ಬಾರಿ ಈತ ಅತ್ಯಾಚಾರ ಮಾಡಿದ್ದ. ಅತ್ಯಾಚಾರದ ವೀಡಿಯೊ ಚಿತ್ರೀಕರಿಸಿದ ಶರ್ಮ ಹಲವು ಬಾರಿ ಬೆದರಿಸಿ ಅತ್ಯಾಚಾರ ಮಾಡಿದ್ದಾನೆ.

ನಂತರ ಮಹಿಳೆಯನ್ನು ಗುನಾಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೂ ಶರ್ಮ ಆಕೆಯ ಹಿಂದೆ ಬಿದ್ದಿದ್ದ. ಮನೆಗೆ ಬಂದು ಬೆದರಿಕೆ ಹಾಕ ತೊಡಗಿದ್ದ. ಕಳೆದ ದಿವಸ ಶರ್ಮ ಮನೆಗೆ ಬಂದು ಕಿರುಕುಳ ನೀಡಲು ತೊಡಗಿದ್ದಾನೆ. ಮಹಿಳೆಯ ಪತಿ ಮನೆಯಲ್ಲಿರಲಿಲ್ಲ. ಇಬ್ಬರು ಮಕ್ಕಳು ಬೇರೆ ಕೋಣೆಯಲ್ಲಿ ಮಲಗಿದ್ದರು. ಮಹಿಳೆ ಅಡಿಗೆ ಕೋಣೆಯಿಂದ ಚೂರಿ ತಂದು ವ್ಯಕ್ತಿಯನ್ನು ಇರಿದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಮೇಲೆ ಸೆಕ್ಷನ್202ರ ಅನ್ವಯ ಕೊಲೆ ಕೃತ್ಯಕ್ಕೆ ಕೇಸು ದಾಖಲಿಸಿಕೊಳ್ಳಲಾಗಿದೆ.