ಸ್ಟ್ಯಾನ್ ಸ್ವಾಮಿ ಮಾವೋವಾದಿ- ಎನ್‍ಐಎ

0
443

ಸನ್ಮಾರ್ಗ ವಾರ್ತೆ

ಮುಂಬೈ,ಅ.15: ಭೀಮ ಕೊರೆಗಾಂವ್, ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಕೇರಳ ಮೂಲದ ಫಾ.ಸ್ಟ್ಯಾನ್ ಸ್ವಾಮಿ ನಿಷೇಧಿತ ಸಿಪಿಐ (ಮಾವೋವಾದಿಯಿಸ್ಟ್) ಚಟುವಟಿಕೆಗಳನ್ನು ವಿಸ್ತರಿಸಲು ಕಾಮ್ರೆಡ್ ಮೋಹನ್‍ನಿಂದ 8 ಲಕ್ಷ ರೂಪಾಯಿ ಸ್ವೀಕರಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‍ಐಎ) ಹೇಳಿದೆ.

ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಕಳೆದ ದಿವಸ ವಿಶೇಷ ಎನ್‍ಐಎ ಕೋರ್ಟಿನಲ್ಲಿ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಈ ಆರೋಪವನ್ನು ಸೇರಿಸಲಾಗಿದೆ. ನಕ್ಸಲ್‌ಬರಿಯ ಐವತ್ತು ವರ್ಷ ಎಂಬ ಪುಸ್ತಕ, ಸಿಪಿಐ (ಮಾವೊಯಿಸ್ಟ್) ಕೇಂದ್ರ ಸಮಿತಿಯ ಸಕ್ರ್ಯೂಲರ್‌ಗಳು, ಪತ್ರಿಕಾ ಕಟಿಂಗ್ಸ್‌ಗಳು, ಆದಿವಾಸಿಗಳನ್ನು ಸಂಘಟಿಸಲು ವಿಜಯ್ ದಾದ ಎಂಬವರಿಗೆ ಬರೆದ ಪತ್ರ ಇವು ಸ್ಟ್ಯಾನ್ ಸ್ವಾಮಿಯವರ ಮನೆಯಲ್ಲಿ ಪತ್ತೆಯಾಗಿದೆ ಎಂದು ಎನ್‍ಐಎ ಹೇಳಿದೆ.

ಸ್ಟ್ಯಾನ್ ಸ್ವಾಮಿಯ ಚಟುವಟಿಕೆಗಳನ್ನು ವಿವರಿಸಿ ಒಬ್ಬ ಕಾಮ್ರೆಡ್ ಪ್ರಕಾಶ್ ಮತ್ತು ಈಗಾಗಲೇ ಬಂಧನದಲ್ಲಿರುವ ವಕೀಲೆ ಸುಧಾ ಭಾರದ್ವಾಜ್‍ರ ನಡುವೆ ನಡೆದ ಪತ್ರ ವ್ಯವಹಾರವು ಸುರೇಂದ್ರ ಗಾಡ್ಗಲಿಂಗಿನಿಂದ ಪತ್ತೆಯಾಗಿದೆ ಎಂದು ಎನ್‍ಐಎ ಹೇಳಿದೆ.

ಸ್ಟ್ಯಾನ್ ಸ್ವಾಮಿ ಸಹಿತ ಬಂಧನದಲ್ಲಿರುವವರು ನಿರಪರಾಧಿಗಳು ಅವರ ವಿರುದ್ಧ ಏಜೆನ್ಸಿ ನೀಡಿದ ಸಾಕ್ಷ್ಯಗಳನ್ನು ನೋಡಿದ್ದೇನೆ ಎಂದು ಹೇಳಿದ ವಕೀಲ ಮಿಹಿರ್ ದೇಸಾಯಿ, ಆರೋಪ ಪಟ್ಟಿ ಬರೆಯಲು ಉಪಯೋಗಿಸಿದ ಕಾಗದದ ಬೆಲೆಯಷ್ಟೂ ಈ ಸಾಕ್ಷ್ಯಗಳ ಮೌಲ್ಯವಿಲ್ಲ ಎಂದು ಆರೋಪಿಸಿದ್ದಾರೆ.