ಮುಡಿಪು ಇಫ್ತಾರ್ ಕೂಟ: ಪ್ರಕರಣ ದಾಖಲಿಸಿದ ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ

0
1115

ಸನ್ಮಾರ್ಗ ವಾರ್ತೆ

ಮಂಗಳೂರು: ಉಳ್ಳಾಲ ತಾಲೂಕಿನ ಮುಡಿಪು ಜಂಕ್ಷನ್ ನಲ್ಲಿ ಆಟೋ ರಾಜಾಕನ್ಮಾರ್ ಎಂಬ ದ.ಕ. ರಿಕ್ಷಾ ಚಾಲಕರ ಯೂನಿಯನ್ ವಾರಗಳ ಹಿಂದೆ ಬೃಹತ್ ಸೌಹಾರ್ದ ಕೂಟವನ್ನು ಏರ್ಪಡಿಸಿತ್ತು.

ರಸ್ತೆಯ ಒಂದು ಭಾಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಇನ್ನೊಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಸರಾಗ ವ್ಯವಸ್ಥೆಯನ್ನು ಮಾಡಿ ಈ ಇಫ್ತಾರ್ ಕೂಟವನ್ನು ನಡೆಸಲಾಗಿತ್ತು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯೂ ಆಗಿರಲಿಲ್ಲ. ಹಿಂದೂ ಮುಸ್ಲಿಮರು ಜೊತೆ ಸೇರಿಕೊಂಡು ಈ ಇಫ್ತಾರ್ ಕೂಟವನ್ನು ಸಂಘಟಿಸಿದ್ದರು ಮತ್ತು ಬಹಳ ಸೌಹಾರ್ದಯುತವಾಗಿ ಇಫ್ತಾರ್ ಕೂಟ ನೆರವೇರಿತ್ತು.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಈ ಇಫ್ತಾರ್ ಕೂಟದ ವಿಡಿಯೋ ವೈರಲ್ ಆಗಿತ್ತು ಮತ್ತು ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಿರುವುದಕ್ಕಾಗಿ ಟೀಕೆಗಳು ವ್ಯಕ್ತವಾಗಿದ್ದುವು. ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ಈ ಟೀಕೆ ಮತ್ತು ಚರ್ಚೆಯನ್ನೇ ಪರಿಗಣಿಸಿ ಚುನಾವಣಾ ಆಯೋಗವು ಸಂಘಟಕರಾದ ಆಟೋ ರಾಜಾಕನ್ಮಾರ್ ಪದಾಧಿಕಾರಿಗಳಿಗೆ ನೋಟಿಸು ಜಾರಿಗೊಳಿಸಿದೆ. ಅಲ್ಲದೆ ಆ ಬಳಿಕ ಪ್ರಕರಣವನ್ನೂ ದಾಖಲಿಸಿದೆ.

ಆದರೆ ಈ ಇಫ್ತಾರ್ ಕೂಟದ ಬಳಿಕ ನಡೆದ ದ.ಕನ್ನಡ ಕಾಂಗ್ರೆಸ್ ಮತ್ತು ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಇದಕ್ಕಿಂತಲೂ ಹೆಚ್ಚು ರಸ್ತೆ ತಡೆ ನಡೆಸಲಾಗಿತ್ತು. ರೋಡ್ ಶೋ ನಡೆಸಲಾಗಿತ್ತು ಮತ್ತು ಆಂಬುಲೆನ್ಸ್ ಗಳಿಗೂ ಜಾಗ ಸಿಗದೆ ಪರದಾಡಬೇಕಾಯಿತು. ಗಂಟೆಗಟ್ಟಲೆ ಈ ರೋಡ್ ಶೋ ನಡೆಯಿತು. ಇದರ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆದರೆ ಚುನಾವಣಾ ಅಧಿಕಾರಿಗಳು ಈವರೆಗೆ ರಸ್ತೆ ತಡೆದು ಈ ರೋಡ್ ಶೋ ನಡೆಸಿದ್ದಕ್ಕಾಗಲಿ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಲಿ ನೋಟಿಸು ಜಾರಿಗೊಳಿಸಿಲ್ಲ, ಕೇಸೂ ದಾಖಲಿಸಿಲ್ಲ ಎಂದು ಹೇಳಲಾಗಿದ್ದು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ರಾಜಕಾರಣಿಗಳಿಗೆ ಒಂದು ನ್ಯಾಯ ಮತ್ತು ಬಡ ರಿಕ್ಷಾ ಚಾಲಕರಿಗೆ ಇನ್ನೊಂದು ನ್ಯಾಯವೇಕೆ ಎಂಬ ಪ್ರಶ್ನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಎತ್ತಲಾಗಿದೆ. ಮುಡಿಪು ಪ್ರದೇಶದ ನಾಗರಿಕರೂ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ. ಸಾಧ್ಯವಿದ್ದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೆ ಕೇಸು ದಾಖಲಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚುನಾವಣಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.

ಇದೆ ವೇಳೆ ಮುಡಿಪು ಸೌಹಾರ್ದ ಇಫ್ತಾರ್ ಕೂಟಕ್ಕೆ ಸಂಬಂಧಿಸಿ ಆಯೋಜಕರು ಮತ್ತು ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿದ ಕಾರ್ಯಕ್ರಮವನ್ನು ಸನ್ಮಾರ್ಗ ನ್ಯೂಸ್ ಚಾನೆಲ್ ಪ್ರಸಾರ ಮಾಡಿದ್ದು ಅದನ್ನು ಚುನಾವಣಾ ಅಧಿಕಾರಿಗಳು ವೀಕ್ಷಿಸಲಿ ಎಂದು ಆಯೋಜಕರು ಹೇಳಿದ್ದಾರೆ. ತಪ್ಪು ಗ್ರಹಿಕೆಯಿಂದ ಪ್ರಕರಣದ ದಾಖಲಿಸಿರುವ ಚುನಾವಣಾ ಅಧಿಕಾರಿಗಳು ಕೂಡಲೇ ತಪ್ಪನ್ನು ತಿದ್ದಿಕೊಂಡು ಪ್ರಕರಣವನ್ನು ಹಿಂಪಡೆಯಲಿ ಎಂದು ಆಯೋಜಕರು ಒತ್ತಾಯಿಸಿದ್ದಾರೆ.