ಉಪವಾಸಿಗರ ಸಮಾಗಮ ಈದುಲ್ ಫಿತ್ರ್

0
276

ಸನ್ಮಾರ್ಗ ವಾರ್ತೆ

✍️: Hashim Bannur | ಹಾಶಿಂ ಬನ್ನೂರು

ಜಗತ್ತಿನ ಮುಸ್ಲಿಂ ಬಾಂಧವರು ಇಂದು ಸಡಗರದಿಂದ ಸಂಭ್ರಮಿಸುವ ಸಮಯ. ರಂಝಾನ್ ಒಂದು ತಿಂಗಳ ಕಾಲ ನಿರಂತರ ಕೆಡುಕುಗಳಿಂದ ದೂರ ಉಳಿದು ಉಪವಾಸವಿದ್ದು, ಸಹರಿ , ಇಫ್ತಾರ್, ವಿಶೇಷ ನಮಾಝ್, ಪ್ರಾರ್ಥನೆ ಮತ್ತು ದಾನ ಧರ್ಮ ಮುಂತಾದ ಪುಣ್ಯ ಕಾರ್ಯಗಳನ್ನು ಪೂರೈಸಿ ಪವಿತ್ರ ರಮಝಾನ್ ತಿಂಗಳ ದಿನಗಳಲ್ಲಿ ಆರಾಧನೆಯಲ್ಲಿ ತಲ್ಲೀನರಾಗಿ ಧನ್ಯರಾಗುವ ಮೂಲಕ ಮುಸ್ಲಿಂ ಬಾಂಧವರು ದೇವರ ಪ್ರೀತಿಗೆ ಕರುಣೆಗೆ ಪಾತ್ರರಾಗುವ ಕ್ಷಣ.

ಮುಸ್ಲಿಮರ ವಿಶೇಷ ಎರಡು ಈದ್ ಹಬ್ಬ ಈದುಲ್ ಫಿತ್ರ್ , ಮತ್ತು ಈದುಲ್ ಅಝ್ಹಾ. ರಮಝಾನ್ ತಿಂಗಳು ಪೂರ್ಣಗೊಂಡು ಇಸ್ಲಾಮಿಕ್ ತಿಂಗಳ 10ನೇ ತಿಂಗಳು ಶವ್ವಾಲ್ ತಿಂಗಳ ಮೊದಲನೇ ದಿನ ಆಚರಿಸುವ ಹಬ್ಬ ಈದುಲ್ ಫಿತ್ರ್. ಚಂದ್ರ ದರ್ಶನ ಮೂಲಕ ರಮಝಾನ್ ಉಪವಾಸ ಪ್ರಾರಂಭ ಮತ್ತು ಈದುಲ್ ಫಿತ್ರ್ ಹಬ್ಬದ ದಿನವನ್ನು ನಿಗದಿ ಪಡಿಸುತ್ತಾರೆ. ಈದುಲ್ ಫಿತ್ರ್ ಹಬ್ಬವನು ಚಿಕ್ಕ ಪೆರ್ನಾಳ್ ಎಂಬ ಹೆಸರಿನಿಂದಲೂ ಕೂಡ ಕರೆಯುತ್ತಾರೆ.

ಇಸ್ಲಾಮಿಕ್ ಪಂಚ ಸ್ತಂಭಗಳ ಪೈಕಿ ಆಚರಿಸುವ ಎರಡು ಕರ್ಮಗಳು ಒಂದು ರಮಝಾನ್ ತಿಂಗಳ ಉಪವಾಸ ಮತ್ತು ಎರಡು ಧಾನ ನೀಡುವುದು ಇವೆರಡೂ ಕರ್ಮಗಳ ಆಚರಣೆ ರಮಝಾನ್ ಮತ್ತು ಈದ್ ದಿನಗಳ ಒಂದು ಭಾಗವಾಗಿದೆ. ಈ ಎರಡೂ ಕರ್ಮಗಳನ್ನು ಪ್ರತಿಯೊಬ್ಬ ಮುಸಲ್ಮಾನನು ಕಡ್ಡಾಯವಾಗಿ ಪಾಲನೆ ಮಾಡಬೇಕು.

ಆದ್ದರಿಂದ ರಮಝಾನ್ ತಿಂಗಳು ಧಾನ ನೀಡೂದು ಬಹಳ ಮಹತ್ವದ ಕಾರ್ಯವಾಗಿದೆ. ಹಣ ಮತ್ತು ಧಾನ್ಯ ಹಾಗೂ ಇನ್ನಿತರ ದೈನಂದಿನ ಬಳಕೆಗೆ ಅವಶ್ಯಕವಾದ ವಸ್ತುಗಳನ್ನು ಬಡವರಿಗೆ ದಾನವಾಗಿ ನೀಡುತ್ತಾರೆ. ಆಯಾ ಪ್ರದೇಶದ ಜನರ ಆಹಾರವನ್ನು ಗೋಧಿ, ಜೋಳ, ಅಕ್ಕಿ, ಬೇಳೆ ದಾನದ ರೂಪದಲ್ಲಿ ನೀಡಲಾಗುತ್ತದೆ.

ಇಸ್ಲಾಮಿನ ಪವಿತ್ರ ಗ್ರಂಥ ಕುರ್ ಆನ್ ಅವತರಣೆಗೊಂಡದ್ದು ರಮಝಾನ್ ತಿಂಗಳಿನಲ್ಲಾಗಿದೆ. ಕುರ್ ಆನ್ ಪರಿಪೂರ್ಣ ಪಠಣ ಮಾಡುವುದು ಈ ತಿಂಗಳ ವಿಶೇಷ.

ರಮಝಾನ್ ಒಂದು ತಿಂಗಳು ನಿರಂತರವಾಗಿ ಉಪವಾಸ ಇರುವುದರಿಂದ ಆರೋಗ್ಯ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇದು ಧಾರ್ಮಿಕ ಮತ್ತು ವೈಜ್ಞಾನಿಕವಾಗಿ ಸಾಬೀತಾಗಿದೆ.

ನಿರಂತರವಾಗಿ ಒಂದು ತಿಂಗಳ ಕಾಲ ಉಪವಾಸವಿದ್ದು ಉಪವಾಸಿಗರ ಸಂತೋಷಕ್ಕಾಗಿ ಈದ್ ಹಬ್ಬವನ್ನು ಎಲ್ಲರೂ ಒಂದಾಗಿ ಒಗ್ಗಟ್ಟಾಗಿ ಆಚರಿಸುತ್ತಾರೆ. ಈದ್ ದಿನದಂದು ಎಲ್ಲಾ ಮುಸ್ಲಿಂ ಬಾಂಧವರು ಸೇರಿ ಈದ್ಗಾ ಅಥವಾ ಮಸೀದಿಗೆ ತಕ್ಬೀರ್ ಹೇಳುತ್ತಾ ಹಬ್ಬದ ಶುಭವನ್ನು ಕೋರುತ್ತಾ ತೆರಳಿ ಈದ್ ನಮಾಝ್ ನಿರ್ವಹಿಸುತ್ತಾರೆ. ಈದ್ ಸಂದೇಶ ಸಾರುವ ಪ್ರವಚನ, ಸರ್ವ ಸಹೋದರರಿಗಾಗಿ ಮತ್ತು ನಾಡಿನ ಶಾಂತಿ ಸಮಾಧಾನಕ್ಕಾಗಿ ವಿಶೇಷ ಪ್ರಾರ್ಥನೆ ಮಾಡುತ್ತಾರೆ, ಸುಗಂಧ ದ್ರವ್ಯಗಳು ಹೊಸ ಉಡುಪು ಧರಿಸುವುದು, ಮನೆಗಳಲ್ಲಿ ಊಟ ಪದಾರ್ಥಗಳನ್ನು ಮತ್ತು ಸಿಹಿ ಪದಾರ್ಥಗಳನ್ನು ಮಾಡಿ ಎಲ್ಲರಿಗೂ ಹಂಚುತ್ತಾರೆ. ಎಲ್ಲರೂ ಪರಸ್ಪರ ಹಸ್ತ ಲಾಘವ, ಆಲಿಂಗನ ಮಾಡಿ ದ್ವೇಷವನ್ನು ಮರೆತು ಸ್ನೇಹವನ್ನು ಕೋರಿ ಪ್ರೀತಿಯಿಂದ ಒಂದಾಗುತ್ತಾರೆ. ಕುಟುಂಬಸ್ಥರ, ಸ್ನೇಹಿತರ ನೆರೆಹೊರೆಯವರ, ಮನೆಗೆ ಬೇಟಿ ನೀಡುತ್ತಾರೆ, ಪರಸ್ಪರ ಹಬ್ಬದ ಸಂದೇಶ ಸಂತೋಷಗಳನ್ನು ಹಂಚಿಕೊಳ್ಳುತ್ತಾರೆ. ಶರೀರ ಮತ್ತು ಮನಸ್ಸು ಶುದ್ಧೀಕರಣವೇ ರಮಝಾನ್ ಮತ್ತು ಈದ್ ಆಚರಣೆಯ ಮುಖ್ಯ ಉದ್ದೇಶ.