ಮುಂಬೈ ಕನ್ನಡಿಗರು, ತುಳುವರು ಹುಟ್ಟೂರಿಗೆ ಮರಳುವ ಬಗ್ಗೆ ಅಪಸ್ವರಗಳು ಆಕ್ಷೇಪಾರ್ಹ ಮತ್ತು ಅಕ್ಷಮ್ಯ: ವೆಲ್ಫೇರ್ ಪಾರ್ಟಿ

0
790

ಸನ್ಮಾರ್ಗ ವಾರ್ತೆ

ಮಂಗಳೂರು, ಜೂ,9: ನೆರೆಯ ಮಹಾರಾಷ್ಟ್ರ ರಾಜ್ಯದ ಮುಂಬೈ, ಪುಣೆ, ಮತ್ತು ವಿವಿಧೆಡೆಗಳಲ್ಲಿ ತಮ್ಮ ಉಪಜೀವನಕ್ಕಾಗಿ ತಲುಪಿ ಬದುಕನ್ನು ಕಂಡುಕೊಂಡ ಬಡಪಾಯಿಗಳು ಇಂದು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಕೊರೋನಾ ಮಾರಕ ರೋಗಕ್ಕೆ ಸಂಭಂಧಪಟ್ಟಂತೆ ಅಲ್ಲಿನ ಪರಿಸ್ಥಿತಿ ಕರ್ನಾಟಕಕ್ಕಿಂತಲೂ ಶೋಚನೀಯವಾಗಿದ್ದು, ಸಂಕಷ್ಟಕ್ಕೆ ಸಿಲುಕಿರುವ, ವಿಶೇಷವಾಗಿ ಕರಾವಳಿ ವಲಯದ ತುಳುವರನ್ನು ಸೇರಿದಂತೆ ಎಲ್ಲಾ ಕನ್ನಡಿಗರು ಅವರವರ ಹುಟ್ಟೂರಿನ ಮನೆಗಳಿಗೆ ತಲುಪಬೇಕಾದ ಅನಿವಾರ್ಯ ಮತ್ತು ಅಸಹಾಯಕತೆಯಲ್ಲಿಯೂ ಕೊರಗುತ್ತಿದ್ದಾರೆ.

ಆದರೆ, ಅವರಿಗೆ ಬೇಕಾದ ವ್ಯವಸ್ಥೆ ಕಾರ್ಯಗಳನ್ನು ಬಹಳ ತುರ್ತಾಗಿ ಕೈಗೊಳ್ಳಬೇಕಾದ ಅಲ್ಲಿನ ಸಂಸದೆಯೇ ಅವರನ್ನು ಊರಿಗೆ ಬರಬೇಡಿ, ಪಾಸ್ ತಡೆಹಿಡಿಯಬೇಕು ಎಂಬಿತ್ಯಾದಿಯಾಗಿ ಹೇಳಿಕೆ ನೀಡುತ್ತಿರುವುದು ಅವರ ಸ್ಥಾನಕ್ಕೆ ಶೋಭೆಯಲ್ಲವೆಂದು ವೆಲ್ಪೇರ್ ಪಾರ್ಟಿ ಆಪ್ ಇಂಡಿಯಾ ಇದರ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಜನರು ಮಹಾರಾಷ್ಟ್ರ ರಾಜ್ಯದ ಎಲ್ಲೆಡೆಗಳಿಂದ ಹುಟ್ಟೂರ ಪ್ರಯಾಣಕ್ಕೆ ಸಿದ್ಧರಾಗಿರುವುದು ಯಾವುದೇ ಮೋಜಿನ ಪ್ರವಾಸಕ್ಕಾಗಿಯಲ್ಲವೆಂಬ ವಾಸ್ತವಿಕತೆಯನ್ನರಿತು ತನ್ನ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆ ಶೋಭಾ ಕರಂದ್ಲಾಜೆ ತನ್ನ ಬಾಯಿ ಚಪಲ ತೀರಿಸಲು ಸಮಾಜದಲ್ಲಿ ಮತೀಯ ಒಡಕುಂಟು ಮಾಡುವ ರೀತಿಯಲ್ಲಿ ದ್ವೇಷದ ಹೇಳಿಕೆಗಳನ್ನು ನೀಡುತ್ತಾ ಕುಖ್ಯಾತಿಯನ್ನು ಗಳಿಸಿದ್ದಾರೆ. ವೈಯುಕ್ತಿಕವಾಗಿ ವರ್ಚಸ್ಸು ಕಳೆದುಕೊಂಡಿದ್ದರೂ, ಅವರು ತಾನು ಪ್ರತಿನಿಧಿಸುವ ಕ್ಷೇತ್ರದ ಜನರ ಬಗ್ಗೆ ಮಾತನಾಡುವಾಗ ಅಲ್ಲಿನ ಸಂಸತ್ ಸದಸ್ಯೆ ಎಂಬ ಸ್ಥಾನದ ಗೌರವವನ್ನೂ ಉಳಿಸುವ ಮಾತಾಗಿರಬೇಕಿತ್ತು. ಅದು ಬಿಟ್ಟು ಇವರ ಬೇಜವಾಬ್ದಾರಿ ಹೇಳಿಕೆಗಳು ಖಂಡನೀಯವೆಂದು ಹೇಳಿದ ಸುಲೈಮಾನ್ ಕಲ್ಲರ್ಪೆಯವರು ಹೇಳಿದರು.

ಒಂದೊಮ್ಮೆ ಇದು ಚುನಾವಣೆ ಸಂಧರ್ಭವಾಗಿದ್ದಲ್ಲಿ ಮತ್ತು ಅದೇ ಜನರು ಅವರಿಗೆ ಮತದಾನ ನೀಡಲು ಬರುವುದಾಗಿದ್ದಲ್ಲಿ ಅವರು ಲಂಗುಲಗಾಮಿಲ್ಲದ ಹಾಗೆ ಹೇಳಿಕೆ ನೀಡಿ ಜನರು ತಮ್ಮ ತಮ್ಮ ತಾಯ್ನಾಡಿಗೆ ಬರುವುದನ್ನು ತಡೆಯುತ್ತಿದ್ದರೇ? ಎಂದು ಖಾರವಾಗಿ ಪ್ರಶ್ನಿಸಿದ ಅವರು, ಒಬ್ಬ ಜನಪ್ರತಿನಿಧಿಯಾಗಿ ಅವರು ಈ ರೀತಿಯಲ್ಲಿ ಬಾಲಿಶ ಹೇಳಿಕೆಯನ್ನು ನೀಡಿರುವುದು ಆಕ್ಷೇಪಾರ್ಹವಾಗಿದೆ. ಆದ್ದರಿಂದ ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಅವಿಭಜಿತ ದ. ಕ. ಜಿಲ್ಲೆಯ ಮುಂಬೈಯಲ್ಲಿ ನೆಲೆಸಿರುವ ಇದೀಗ ಊರನ್ನು ಸೇರಬಯಸಿರುವ ಎಲ್ಲಾ ಮುಂಬೈ ಕನ್ನಡಿಗರಿಗೆ ವ್ಯವಸ್ಥೆ ಕಲ್ಪಿಸಲು ಸರಕಾರ ಮುಂದಾಗಬೇಕಿದೆ. ಎಂದು ಅವರು ಆಗ್ರಹಿಸಿದರು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.