ದಿಲ್ಲಿಯಲ್ಲಿ ಮುಸ್ಲಿಮರ ಮತಗಳು ಕಾಂಗ್ರೆಸ್ ಪಾಲಾಗಿವೆ- ಕೇಜ್ರಿವಾಲ್

0
464

ಹೊಸದಿಲ್ಲಿ,ಮೇ 18: ಲೋಕಸಭಾ ಚುನಾವಣೆಯಲ್ಲಿ ದಿಲ್ಲಿಯ ಮುಸ್ಲಿಂ ಮತಗಳು ಕೊನೆಯ ಕ್ಷಣಗಳಲ್ಲಿ ಕಾಂಗ್ರೆಸ್ ಪಾಲಾಗಿವೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು. ಚುನಾವಣೆಯ 48 ಗಂಟೆಯ ಮೊದಲು ಎಲ್ಲ ಸೀಟುಗಳು ಆಮ್ ಆದ್ಮಿ ಪಾರ್ಟಿ ಪಾಲಾಗಲಿದೆ ಎಂದು ನಿರೀಕ್ಷೆ ಇತ್ತು. ಆದರೆ, ಕೊನೆಯ ಕ್ಷಣಗಳಲ್ಲಿ ಶೇ. 12ರಿಂದ ಶೇ. 13ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ ಪಾಲಾಗಿದೆ. ಇದು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎಂದು ಅವರು ಹೇಳಿದರು.

ಮುಂದಿನ ವರ್ಷ ದಿಲ್ಲಿಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಕೇಜ್ರಿವಾಲ್ ಹೇಳಿದರು. ನಾವು ಮಾಡಿದ ಕೆಲಸಗಳಿಗೆ ಜನರು ಮತ ಹಾಕುತ್ತಾರೆ. ಮತಯಂತ್ರವನ್ನು ತಿರುಚದೆ ಬಿಜೆಪಿಗೆ ಅಧಿಕಾರಕ್ಕೆ ಮರಳಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ದಿಲ್ಲಿಗೆ ಪೂರ್ಣ ರಾಜ್ಯ ಪದವಿ ವಾಗ್ದಾನ ಮಾಡುವ ಪಾರ್ಟಿಯನ್ನು ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಆಮ್ ಆದ್ಮಿ ಪಾರ್ಟಿ ಬೆಂಬಲಿಸಲಿದೆ ಎಂದು ಕೇಜ್ರಿವಾಲ್ ಹೇಳಿದರು.