ಸನ್ಮಾರ್ಗ ವಾರ್ತೆ
ಚೆನ್ನೈ: ಭಾರತೀಯ ಸುದ್ದಿ ಮಾಧ್ಯಮಗಳಲ್ಲಿ ಸಾಮಾಜಿಕ ವೈವಿಧ್ಯತೆ ತೀರ ಕಡಿಮೆ ಇದ್ದು, ಇದನ್ನು ಸರಿಪಡಿಸಲು ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಬೇಕು ಎಂದು ದಿ ಹಿಂದೂ ಪಬ್ಲಿಷಿಂಗ್ ಗ್ರೂಪ್ನ ನಿರ್ದೇಶಕ ಎನ್. ರಾಮ್ ಒತ್ತಾಯಿಸಿದ್ದಾರೆ.
ಗ್ರಾಮೀಣ, ಪರಿಶಿಷ್ಟ ಜಾತಿ ಮತ್ತು ಇತರೆ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪತ್ರಿಕೋದ್ಯಮ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಈ ಸಮುದಾಯಗಳ ಪ್ರಾತಿನಿಧ್ಯ ನಿರೀಕ್ಷಿತ ಮಟ್ಟಕ್ಕಿಂತ ತೀರ ಕಡಿಮೆ ಇದೆ, ಅದರಲ್ಲೂ ನಿರ್ಧಾರ ತೆಗೆದುಕೊಳ್ಳುವ ಸಂಪಾದಕೀಯ ಮತ್ತು ನಾಯಕತ್ವ ಸ್ಥಾನಗಳಲ್ಲಿ ಅವರ ಉಪಸ್ಥಿತಿ ಬಹುತೇಕ ಇಲ್ಲವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪತ್ರಿಕೋದ್ಯಮದಲ್ಲಿ ಮುಸ್ಲಿಂ ಸಮುದಾಯದ ಪ್ರಾತಿನಿಧ್ಯದ ಕೊರತೆಯ ಬಗ್ಗೆಯೂ ಎನ್. ರಾಮ್ ಮಾತನಾಡಿದರು. ಮುಸ್ಲಿಮರು ಮತ್ತು ಇಸ್ಲಾಂಗೆ ಸಂಬಂಧಿಸಿದ ವರದಿಗಳು ಹೆಚ್ಚಾಗಿ ನಕಾರಾತ್ಮಕ ಮತ್ತು ಇಸ್ಲಾಮೋಫೋಬಿಕ್ ವಿಷಯಗಳನ್ನು ಒಳಗೊಂಡಿರುತ್ತವೆ. ಇದಕ್ಕೆ ಮುಖ್ಯ ಕಾರಣ, ಮಾಧ್ಯಮಗಳಲ್ಲಿ ಮುಸ್ಲಿಂ ಸಮುದಾಯದ ಸದಸ್ಯರು ಕೇವಲ ವರದಿಗಾರಿಕೆ ಹಂತಕ್ಕೆ ಸೀಮಿತರಾಗಿದ್ದು, ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ಅವರ ಉಪಸ್ಥಿತಿ ತೀರ ಕಡಿಮೆ ಇದೆ. ಇದು ಮುಸ್ಲಿಮರ ಕುರಿತಾದ ಸುದ್ದಿ ವರದಿಗಳು ಮತ್ತು ಅವರ ಕಾಳಜಿಗಳನ್ನು ಪ್ರತಿನಿಧಿಸುವ ವಿಧಾನದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಈ ಅನ್ಯಾಯವನ್ನು ಒಪ್ಪಿಕೊಂಡರೆ ಅಥವಾ ಪ್ರಶ್ನಿಸಿದರೆ ಸಾಲದು, ನಿರ್ಧಾರ ತೆಗೆದುಕೊಳ್ಳುವ ಸ್ಥಾನಗಳಲ್ಲಿ ಈ ಸಮುದಾಯಗಳ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸಬೇಕು ಎಂದು ರಾಮ್ ಹೇಳಿದರು. ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಪತ್ರಿಕೆಗಳು ಕೇವಲ ಗಣ್ಯರ ಹಿತಾಸಕ್ತಿಗಳನ್ನು ಉತ್ತೇಜಿಸುತ್ತವೆ ಎಂದು ಟೀಕಿಸಿದ್ದನ್ನು ನೆನಪಿಸಿದರು. ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಪ್ರಾತಿನಿಧ್ಯವನ್ನು ಸರ್ಕಾರದ ಬೆಂಬಲದೊಂದಿಗೆ ಹೆಚ್ಚಿಸದಿದ್ದರೆ, ಸುದ್ದಿ ಮಾಧ್ಯಮಗಳಲ್ಲಿನ ಪಕ್ಷಪಾತ ಹೀಗೇ ಮುಂದುವರಿಯುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.












