ಜೆಎನ್‌ಯು ಉಮರ್ ಖಾಲಿದ್ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ ಆರೋಪಿ ಹರಿಯಾಣದಲ್ಲಿ ಶಿವಸೇನಾ ಅಭ್ಯರ್ಥಿ!

0
427

ಸನ್ಮಾರ್ಗ‌ ವಾರ್ತೆ

ಹೊಸದಿಲ್ಲಿ,ಅ.10: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‍ಯು) ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‍ರಿಗೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯಿಂದ ಸ್ಪರ್ಧಿಸಲಿದ್ದಾನೆ. ಅಕ್ಟೋಬರ್ 21ರಂದು ಅಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಬಹಾದೂರ್‌ಗಡ ವಿಧಾಸಭೆಯಿಂದ ಕೊಲೆ ಆರೋಪಿಯಾದ ನವೀನ್ ದಲಾಲ್‌ಗೆ ಶಿವಸೇನೆ ಟಿಕೆಟ್ ನೀಡಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಪಾರ್ಲಿಮೆಂಟ್ ಸಮೀಪದ ಕಾನ್ಸಿಟಿಟ್ಯೂಶನ್ ಕ್ಲಬ್ ಮುಂಭಾಗದಲ್ಲಿ ಉಮರ್ ಖಾಲಿದ್ ಮೇಲೆ ಗುಂಡು ಹಾರಾಟ ನಡೆದಿತ್ತು. ನವೀನ್ ದಲಾಲ್, ದರ್ವೇಶ್ ಉಮರ್‌ಗೆ ಗುಂಡು ಹಾರಿಸಿದ್ದರು. ಆರೋಪಿಗಳು ಎರಡು ಬಾರಿ ಗುಂಡು ಹಾರಿಸಿದರೂ ಉಮರ್ ನೆಲಕ್ಕೆ ಕುಸಿದು ಬಿದ್ದದ್ದರಿಂದ ಗುಂಡೇಟಿಗೀಡಾಗದೆ ಪಾರಾಗಿದ್ದರು.

ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ನವೀನ್ ದಲಾಲ್ ಆರು ತಿಂಗಳ ಹಿಂದೆ ಶಿವಸೇನೆಗೆ ಸೇರಿದ್ದನು. “ರಾಷ್ಟ್ರೀಯತೆ, ಗೋ ಸುರಕ್ಷೆಗೆ ಸಂಬಂಧಿಸಿದ ತನ್ನ ಆಶಯಗಳಿಗೆ ಸೂಕ್ತ ಪಕ್ಷ ಶಿವಸೇನೆ” ಎಂದು ದಲಾಲ್ ಹೇಳಿದ್ದಾನೆ. ನಮ್ಮ ಹೋರಾಟ ಒಂದು ಗುರಿಯನ್ನು ಹೊಂದಿದೆ. ರಾಷ್ಟ್ರೀಯತೆ, ಗೋ ರಕ್ಷೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಅಂಗೀಕಾರ ಇದಕ್ಕಾಗಿ ಶಿವಸೇನೆಗೆ ಸೇರಿದ್ದೇನೆ ಎಂದು ದಲಾಲ್ ಹೇಳಿದ್ದನು. ಉಮರ್ ಖಾಲಿದ್ ಹತ್ಯೆ ಯತ್ನ ನಡೆದ ಬಳಿಕ ಉಮರ್‌ಗೆ ಪೊಲೀಸ್ ರಕ್ಷಣೆ ನೀಡಲು ದಿಲ್ಲಿ ಕೋರ್ಟು ಆದೇಶಿಸಿತ್ತು.